ಬೆಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಗುಂಡು ಹಾರಿಸಿ ಶ್ರೀಗಂಧ ಮರಗಳ್ಳನ ಬಂಧನ

Update: 2018-12-11 16:46 GMT

ಬೆಂಗಳೂರು, ಡಿ.11: ತಲೆಮರೆಸಿಕೊಂಡಿದ್ದ ಶ್ರೀಗಂಧ ಮರಗಳ ಕಳ್ಳನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿ ನಗರಕ್ಕೆ ಕರೆತರುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಹಾರಿಸಿದ ಗುಂಡು ತಗುಲಿ ಗಾಯಗೊಂಡಿದ್ದಾನೆ.

ನಗರದಲ್ಲಿ ಬೆಳಗಿನ ಸಮಯದಲ್ಲಿ ಶ್ರೀಗಂಧ ಮರಗಳ ಕಳವು ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಇನ್ಸ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಈ ತಂಡ ಖಚಿತ ಮಾಹಿತಿ ಆಧಾರದ ಮೇಲೆ ಕಳ್ಳರಾದ ಲಕ್ಷಣ, ರಂಗನಾಥನ್ ಹಾಗೂ ರಾಮಸ್ವಾಮಿ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಬಂಧಿತರು ನೀಡಿದ ಮಾಹಿತಿ ಆಧಾರದ ಮೇಲೆ ಚಿಕ್ಕಬಳ್ಳಾಪುರದಲ್ಲಿ ತಲೆಮರೆಸಿಕೊಂಡಿದ್ದ ಮುಜಾದ್ದಿನ್ ವುಲ್ಲಾ ಮತ್ತು ಇಮ್ಜಾದ್‌ವುಲ್ಲಾರನ್ನು ಬಂಧಿಸಿ ಬೆಳಗಿನ ಜಾವ 1.30 ರ ಸಮಯದಲ್ಲಿ ನಗರಕ್ಕೆ ಕರೆ ತರಲಾಗುತ್ತಿತ್ತು. ಈ ವೇಳೆ ನಗರದ ಕ್ವೀನ್ಸ್ ರಸ್ತೆಯ ಸಮಾನಾಂತರ ರಸ್ತೆಯಲ್ಲಿ ಸಂಚರಿಸುವಾಗ ಮುಜಾವುದ್ದಿನ್ ಬೆಂಗಾವಲಿಗಿದ್ದ ಪೊಲೀಸ್ ಕೃಷ್ಣಮೂರ್ತಿ ಎಂಬವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇನ್ಸ್‌ಸ್ಪೆಕ್ಟರ್ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರೂ ಕೇಳಿಕೊಳ್ಳದೇ ಪರಾರಿಯಾಗಿದ್ದನು ಎನ್ನಲಾಗಿದೆ.

ಇನ್ಸ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ ರಾತ್ರಿ ಗಸ್ತಿನಲ್ಲಿದ್ದ ಪಿಎಸ್‌ಐ ರಹೀಮ್ ಹಾಗೂ ಮತ್ತಿತರ ಸಿಬ್ಬಂದಿಯನ್ನು ಸಹಾಯಕ್ಕೆ ಆಹ್ವಾನಿಸಿ ಕಬ್ಬನ್‌ಪಾರ್ಕ್‌ನಲ್ಲಿ ಆರೋಪಿಗಾಗಿ ಹುಡುಕುತ್ತಿದ್ದ ವೇಳೆ ಅಲ್ಲಿನ ಬಿದಿರುಮರಗಳಲ್ಲಿ ಅಡಗಿ ಕುಳಿತಿದ್ದ. ಪಿಎಸ್‌ಐ ರಹೀಮ್ ಹತ್ತಿರಕ್ಕೆ ಹೋಗುತ್ತಿದ್ದಂತೆ ಅವರನ್ನು ಕೆಳಗಿ ಬೀಳಿಸಿ, ಅವರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಕೊಲೆ ಮಾಡಲೂ ಯತ್ನಿಸಿದ್ದ. ಪೊಲೀಸರ ಮೇಲೆ ಹಲ್ಲೆ ನಡೆಸಿದರೆ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರೂ ಆತ ಕುತ್ತಿಗೆಯನ್ನು ಬಿಟ್ಟಿರಲಿಲ್ಲ. ಈ ವೇಳೆ ಐಯ್ಯಣ್ಣರೆಡ್ಡಿ ತಮ್ಮ ಬಳಿಯಿದ್ದ ಪಿಸ್ತೂಲು ಮೂಲಕ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಎಚ್ಚರಿಸಿದ್ದರು ಎನ್ನಲಾಗಿದೆ.

ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಕೇಳಿಸಿಕೊಂಡ ಮುಜಾದ್ದಿನ್‌ವುಲ್ಲಾ ರಹೀಮ್‌ರ ಕುತ್ತಿಗೆಯನ್ನು ಬಿಟ್ಟು, ತನ್ನ ಬಳಿಗೆ ಬರುತ್ತಿದ್ದ ಮತ್ತೊಬ್ಬ ಪಿಎಸ್‌ಐ ಸುರೇಶ್‌ರ ಮೇಲೆ ಪಕ್ಕದಲ್ಲಿ ಬಿದ್ದಿದ್ದ ಬಿದುರು ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದರು. ಆಗಲೂ ಇನ್ಸ್‌ಸ್ಪೆಕ್ಟರ್‌ ಐಯ್ಯಣ್ಣರೆಡ್ಡಿ ಶರಣಾಗುವಂತೆ ಸೂಚನೆ ನೀಡುತ್ತಿದ್ದರೂ, ಅದನ್ನು ಲೆಕ್ಕಿಸದೇ ಹಲ್ಲೆಗೆ ಮುಂದಾಗಿದ್ದರು. ಹೀಗಾಗಿ, ಪೊಲೀಸರು ತಮ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದು, ಅದು ಆರೋಪಿ ಕಾಲಿಗೆ ತಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಆರೋಪಿ ಮುಜಾದ್ದಿನ್‌ವುಲ್ಲಾರನ್ನು ಕೂಡಲೇ ಇಲ್ಲಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದರಿಂದ ಯಾವುದೇ ಪ್ರಾಣಾಪಾಯವಾಗುವ ಹಾನಿ ಸಂಭವಿಸಿಲ್ಲ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

60 ಕ್ಕೂ ಅಧಿಕ ಮರಗಳ ಕಳವು: ಶ್ರೀಗಂಧ ಮರಗಳ ಕಳವಿನಲ್ಲಿ ಪ್ರಮುಖ ಆರೋಪಿಗಳಾದ ಮುಜಾದ್ದಿನ್‌ವುಲ್ಲಾ ಹಾಗೂ ಸಹಚರರಾದ ಅಮ್ಜದ್‌ವುಲ್ಲಾ, ಇಮ್ಜಾದ್‌ವುಲ್ಲಾ, ಲಕ್ಷಣ, ರಂಗನಾಥ, ರಾಮಸ್ವಾಮಿ, ಇಳಯರಾಜ, ಸತ್ಯರಾಜ, ಗೋವಿಂದಸ್ವಾಮಿ ಹಾಗೂ ಶಿವಲಿಂಗ ಎಂಬುವವರ ಮೇಲೆ ವಿವಿಧ ಠಾಣೆಗಳಲ್ಲಿ 60 ಕ್ಕೂ ಅಧಿಕ ಶ್ರೀಗಂಧ ಮರಗಳ ಕಳವು ಮಾಡಿರುವ ಸಂಬಂಧ ಪ್ರಕರಣಗಳು ದಾಖಲಾಗಿವೆ.

ಹಗಲಿನಲ್ಲಿ ವಿವಿಧ ವೇಷಧಾರಿಗಳಲ್ಲಿ ಎಲ್ಲೆಲ್ಲಿ ಶ್ರೀಗಂಧ ಮರಗಳಿವೆ ಎಂದು ಗುರುತಿಸಿ ನಸುಬೆಳಗಿನ ಸಮಯದಲ್ಲಿ ಬ್ಯಾಟರಿ ಆಪರೇಟೆಡ್ ಕಟಿಂಗ್ ಮೆಷನ್‌ನಿಂದ ಶಬ್ದವಿಲ್ಲದೆ ಮರಗಳನ್ನು ಕಡಿದು, ಅದನ್ನು ಸಾಗಿಸುತ್ತಿದ್ದರು. ಮುಖ್ಯವಾಗಿ ಕಬ್ಬನ್‌ಪಾರ್ಕ್, ಕೋರಮಂಗಲ, ಹೈಗ್ರೌಂಡ್ಸ್, ಮಹದೇವಪುರ, ವಿಧಾನಸೌಧ, ಸದಾಶಿವನಗರ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವು ಪ್ರಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀಗಂಧ ಮರಗಳ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಡಿಸಿಪಿ ದೇವರಾಜ್ ವಿವರಿಸಿದ್ದಾರೆ.

ಬಹುಮಾನ ಘೋಷಣೆ

ಶ್ರೀಗಂಧ ಮರಗಳ್ಳರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ ನೇತೃತ್ವದ ವಿಶೇಷ ಪೊಲೀಸ್ ತಂಡದ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಶ್ಲಾಘಿಸಿದ್ದು, ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News