ಧರ್ಮದ ಅಮಲು ಮನುಷ್ಯತ್ವ ಮರೆಯದಿರಲಿ

Update: 2018-12-11 18:38 GMT

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ಯುವಕರು ಧರ್ಮಕ್ಕೆ ಅದೆಷ್ಟು ದಾಸರಾಗಿದ್ದಾರೆ ಎಂದರೆ ಅವರಿಗೆ ಎಲ್ಲದರಲ್ಲೂ ಧರ್ಮವೇ ಪ್ರಮುಖವೆನಿಸಿಕೊಳ್ಳುತ್ತದೆ. ಅನ್ಯ ಧರ್ಮೀಯರನ್ನು ಅನ್ಯಗ್ರಹಜೀವಿಗಳಂತೆ ಕಾಣುತ್ತಾ ಅವರ ವಿರುದ್ಧ ಜಗಳವಾಡುವುದು ಅವರಿಗೆ ಹವ್ಯಾಸವಾಗಿ ಬಿಟ್ಟಿದೆ. ಎಲ್ಲಾದರೂ ಸಾವು-ನೋವುಗಳು ಸಂಭವಿಸಿದಾಗಲೂ ಸತ್ತವರ ಧರ್ಮ ಯಾವುದೆಂಬುದನ್ನು ಖಚಿತಪಡಿಸಿಕೊಂಡು ಸಹಾಯಮಾಡುವಂತಹ ಪರಿಸ್ಥಿತಿಯವರೆಗೆ ಇಂದಿನ ಯುವಕರು ಮುಟ್ಟಿದ್ದಾರೆ. ಎಲ್ಲದರಲ್ಲೂ ಧರ್ಮ- ಜಾತಿಗೇ ಮೊದಲ ಆದ್ಯತೆ, ಅದು ಗೆಳೆತನವಾದರೂ ಅಥವಾ ಪ್ರೀತಿಯಾದರೂ. ಈಗೇನಿದ್ದರೂ ಗಂಡು-ಹೆಣ್ಣು ಒಂದೇ ಧರ್ಮಕ್ಕೆ ಅಥವಾ ಜಾತಿಗೆ ಸೇರಿದ್ದರೆ ಮಾತ್ರ ಅವರ ನಡುವೆ ಪ್ರೀತಿ ಮೊಳಕೆಯೊಡೆಯ ಬೇಕು. ಅಷ್ಟರ ಮಟ್ಟಿಗೆ ಜಾತಿ, ಧರ್ಮ ಎಂಬುದು ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ. ಈ ವ್ಯವಸ್ಥೆಗೆ ವಿರುದ್ಧವಾಗಿ ಪ್ರೀತಿಯಲ್ಲಿ ತೊಡಗಿದ ಜೋಡಿಗಳ ಮರ್ಯಾದಾ ಹತ್ಯೆಗಳ ಸಂಖ್ಯೆಯು ಹೆಚ್ಚುತ್ತಲೇ ಇವೆ.

ಇಂತಹ ಸನ್ನಿವೇಶಗಳಿಂದ ಯುವಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅನ್ಯ ಧರ್ಮೀಯರನ್ನು ದ್ವೇಷಿಸಿ, ಹೊಡೆದು, ಅವರನ್ನು ಕೊಂದು ಅವರವರ ಧರ್ಮಗಳಿಗೆ ಧರ್ಮರಕ್ಷಕರೆಂದೊ, ಹುಲಿ-ಸಿಂಹಗಳೆಂದೊ ಸುಲಭವಾಗಿ ಗುರುತಿಸಿಕೊಳ್ಳಬಹುದು. ಆದರೆ ಗಲಭೆಯ, ಕೊಲೆಯ ಆರೋಪ ಹೊತ್ತು, ಅಪರಾಧಿಯಾಗಿ ಕಂಬಿಯ ಹಿಂದೆ ಕೂತ ಮಗನನ್ನು ಕಂಡು ಹೊತ್ತು-ಹೆತ್ತವರು, ಒಡಹುಟ್ಟಿದವರು, ಪ್ರೀತಿ ಹಂಚಿಕೊಂಡವರು ಹರಿಸುವ ಕಣ್ಣೀರೊರಿಸುವವರು ಯಾರು? ಮಗನನ್ನೇ ನಂಬಿಕೊಂಡಿದ್ದ ಕುಟುಂಬ ಯಾರ ಆಸರೆಯನ್ನು ಬಯಸಬೇಕು?. ಆದ್ದರಿಂದ ಮೊದಲು ಹೆತ್ತವರಿಗೆ ಮಗನಾಗಬೇಕು. ಒಡಹುಟ್ಟಿದವರಿಗೆ ಪ್ರೀತಿಯ ಅಣ್ಣ, ತಮ್ಮನಾಗಬೇಕು. ನೆರೆಹೊರೆಯವರಿಗೆ ಗೆಳೆಯನಾಗಿರಬೇಕು,ಪ್ರೀತಿಸುವವರಿಗೆ ಪ್ರೀತಿಹಂಚಬೇಕು ಇದೆಲ್ಲವು ನಾವಾಗಬೇಕಾದರೆ ನಾವು ಮನುಷ್ಯರಾಗಬೇಕು ಮತ್ತು ನಮ್ಮ ಸುತ್ತ-ಮುತ್ತಲಿರುವವರೆಲ್ಲ ನಮ್ಮಂತೆಯೇ ಮನುಷ್ಯರು ಎಂದು ಅರಿಯಬೇಕಾಗಿದೆ

Writer - -ಪ್ರಣಾಮ್ ಶೆಟ್ಟಿ, ಕಲ್ಲಡ್ಕ

contributor

Editor - -ಪ್ರಣಾಮ್ ಶೆಟ್ಟಿ, ಕಲ್ಲಡ್ಕ

contributor

Similar News