ಅಗ್ರಸ್ಥಾನದಲ್ಲಿ ಮುಂದುವರಿದ ಕೊಹ್ಲಿ

Update: 2018-12-11 18:43 GMT

ದುಬೈ, ಡಿ.11: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಮಿತಿ ಟೆಸ್ಟ್‌ನ ಹೊಸ ರ್ಯಾಂಕಿಂಗ್ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಬ್ಯಾಟಿಂಗ್‌ನಲ್ಲಿ ಅಗ್ರ- 5 ಸ್ಥಾನಗಳಲ್ಲಿ ಚೇತೇಶ್ವರ ಪೂಜಾರ, ಬೌಲಿಂಗ್‌ನಲ್ಲಿ ಜಸ್‌ಪ್ರಿತ್ ಬುಮ್ರಾ ಜೀವನಶ್ರೇಷ್ಠ 33ನೇ ಸ್ಥಾನ ಪಡೆದಿದ್ದಾರೆ.

ಅಡಿಲೇಡ್ ಟೆಸ್ಟ್‌ನ ಎರಡೂ ಇನಿಂಗ್ಸ್ ಗಳಲ್ಲಿ ಕ್ರಮವಾಗಿ 123 ಮತ್ತು 71 ರನ್‌ಸಿಡಿಸಿ ಅಮೋಘ ಆಟವಾಡಿದ್ದ ಪೂಜಾರ 4ನೇ ಸ್ಥಾನ ಪಡೆದಿದ್ದಾರೆ. ಪೂಜಾರರಿಗಿಂತ 55 ಅಂಕಗಳ ಮುಂದಿರುವ ಸ್ಟೀವನ್ ಸ್ಮಿತ್ 3ನೇ ಸ್ಥಾನದಲ್ಲಿದ್ದರೆ,ಇಂಗ್ಲೆಂಡ್‌ನ ಜೋ ರೂಟ್ 5ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್‌ನಲ್ಲಿ ಆರ್.ಅಶ್ವಿನ್ ಒಂದು ಸ್ಥಾನ ಏರಿಕೆ ಕಂಡು 6ನೇ ಸ್ಥಾನದಲ್ಲಿದ್ದಾರೆ. ಅಡಿಲೇಡ್ ಟೆಸ್ಟ್‌ನಲ್ಲಿ ಅವರು ಎರಡೂ ಇನಿಂಗ್‌ನಲ್ಲಿಒಟ್ಟು 6 ವಿಕೆಟ್ ಕಬಳಿಸಿದ್ದರು. ಭಾರತದ ವೇಗದ ಬೌಲರ್ ಬುಮ್ರಾ ವೃತ್ತಿಜೀವನದಲ್ಲೇ ಅತ್ಯುತ್ತಮ ರ್ಯಾಂಕಿಂಗ್ ಪಡೆದಿದ್ದು, 5 ಸ್ಥಾನ ಮೇಲೇರಿ 33ನೇ ಸ್ಥಾನ ಪಡೆದಿದ್ದಾರೆ. ಅಡಿಲೇಡ್ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳು ಸೇರಿ ಆರು ವಿಕೆಟ್ ಪಡೆದಿದ್ದರು.

ಇನ್ನು ಬ್ಯಾಟಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ನಂ.1 ರ್ಯಾಂಕಿಂಗ್‌ನಲ್ಲಿ ಮುಂದುವರಿದಿದ್ದು, ತಮ್ಮ ಬಳಿ 920 ಅಂಕಗಳನ್ನು ಹೊಂದಿದ್ದಾರೆ. ಕೊಹ್ಲಿಗಿಂತ 7 ಅಂಕಗಳಷ್ಟೇ ಹಿಂದಿರುವ ನ್ಯೂಝಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಎರಡನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. 900 ಅಂಕಗಳ ಗಡಿ ದಾಟಿದ ಪ್ರಪ್ರಥಮ ನ್ಯೂಝಿಲೆಂಡ್ ಬ್ಯಾಟ್ಸ್‌ಮನ್ ಹಾಗೂ ವಿಶ್ವದಲ್ಲಿ 32ನೇ ಬ್ಯಾಟ್ಸ್‌ಮನ್ ಆಗಿ ಕೇನ್ ಖ್ಯಾತಿ ಗಳಿಸಿದ್ದಾರೆ.

ಅಡಿಲೇಡ್ ಟೆಸ್ಟ್ ಆಡಿದವರ ಪೈಕಿ ಎರಡು ಪ್ರಮುಖ ಬದಲಾವಣೆಯೆಂದರೆ ಅಜಿಂಕ್ಯ ರಹಾನೆ ಬ್ಯಾಟಿಂಗ್‌ನಲ್ಲಿ ಎರಡು ಸ್ಥಾನ ಏರಿಕೆ ಕಂಡು 17ನೇ ಸ್ಥಾನದಲ್ಲಿದ್ದರೆ, ಆಸೀಸ್‌ನ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಎರಡು ಸ್ಥಾನ ಏರಿಕೆಯಾಗಿ 16ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News