ಹಿಂದಿ ಭಾಷಿಕ ಮೂರು ರಾಜ್ಯಗಳಲ್ಲಿ ಸರಕಾರ ರಚನೆಗೆ ಕಾಂಗ್ರೆಸ್ ಸಜ್ಜು

Update: 2018-12-12 17:02 GMT

ಹೊಸದಿಲ್ಲಿ,ಡಿ.12: ಹಿಂದಿ ಹೃದಯಭಾಗವಾಗಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿ ಸರಕಾರ ರಚನೆಗೆ ಕಾಂಗ್ರೆಸ್ ಸಜ್ಜಾಗಿರುವುದು ಪಕ್ಷದ ಕಾರ್ಯಕರ್ತರಿಗೆ ಹೊಸ ಶಕ್ತಿಯನ್ನು ನೀಡಿದೆ ಮತ್ತು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕುವ ಪ್ರತಿಪಕ್ಷಗಳ ಪ್ರಯತ್ನಗಳಿಗೆ ಹೆಚ್ಚಿನ ಉತ್ಸಾಹವನ್ನು ತುಂಬಿದೆ.

ಮತದಾನೋತ್ತರ ಸಮೀಕ್ಷೆಗಳ ಭವಿಷ್ಯವನ್ನು ಸುಳ್ಳು ಮಾಡಿರುವ ಕಾಂಗ್ರೆಸ್ ಛತ್ತೀಸ್ ಗಡವನ್ನು ಸುಲಭವಾಗಿ ಗೆದ್ದುಕೊಂಡಿದೆ. ರಾಜಸ್ಥಾನದಲ್ಲಿ ಕೊಂಚ ಶ್ರಮದ ಗೆಲುವನ್ನು ತನ್ನದಾಗಿಸಿಕೊಂಡಿದೆ ಮತ್ತು ಮಧ್ಯಪ್ರದೇಶದಲ್ಲಿ ಅಲ್ಪ ಮುನ್ನಡೆಯೊಡನೆ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬರುವಲ್ಲಿ ಯಶಸ್ಸನ್ನು ಕಂಡಿದೆ.

ಮೂರೂ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಆಯ್ಕೆಯ ಬಗ್ಗೆ ಎಲ್ಲರ ಕುತೂಹಲದ ಕಣ್ಣುಗಳು ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮೇಲೆಯೇ ನೆಟ್ಟಿವೆ. ಈ ರಾಜ್ಯಗಳಲ್ಲಿ ವಿಜೇತ ಶಾಸಕರ ಸಭೆಗಳ ಬಳಿಕ ರಾಹುಲ್ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಬುಧವಾರ ತಡರಾತ್ರಿಯೇ ಮುಖ್ಯಮಂತ್ರಿಗಳ ಆಯ್ಕೆಯನ್ನ್ನು ಪ್ರಕಟಿಸುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಪಕ್ಷದಲ್ಲಿನ ಮೂಲಗಳು ವಿಶ್ವಾಸವನ್ನು ವ್ಯಕ್ತಪಡಿಸಿವೆ.

 ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಪಕ್ಷದ ಉತ್ತಮ ಸಾಧನೆಯನ್ನು ಬಿಜೆಪಿಯ ನಕಾರಾತ್ಮಕ ರಾಜಕೀಯದ ವಿರುದ್ಧದ ಗೆಲುವಾಗಿದೆ ಎಂದು ಬಣ್ಣಿಸಿದ್ದಾರೆ.

ಪ್ರತಿಪಕ್ಷಗಳ ಒಗ್ಗಟ್ಟು ಬಲಗೊಳ್ಳುತ್ತಿರುವ ಸಂಕೇತವಾಗಿ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನತ್ತ ಬೆಂಬಲ ಹಸ್ತವನ್ನು ಚಾಚಿದ್ದರೆ,2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಮಹಾ ಮೈತ್ರಿಕೂಟವನ್ನು ತಾನು ಸೇರಬಹುದು ಎಂದು ಎಸ್‌ಪಿ ಸುಳಿವು ನೀಡಿದೆ.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಗಾದಿಯ ಮೇಲೆ ಪಿಸಿಸಿ ಅಧ್ಯಕ್ಷ ಸಚಿನ್ ಪೈಲಟ್ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಕಣ್ಣಿರಿಸಿದ್ದು, ಶಾಸಕರ ಸಭೆಯ ಬಳಿಕ ಅದೃಷ್ಟ ಯಾರಿಗೊಲಿಯಲಿದೆ ಎನ್ನುವುದು ನಿರ್ಧಾರವಾಗಲಿದೆ. ಶಾಸಕರ ವೈಯಕ್ತಿಕ ಅಭಿಪ್ರಾಯಗಳನ್ನು ಸಂಗ್ರಹಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ ಪಾಂಡೆ ಮತ್ತು ಪಕ್ಷದ ವೀಕ್ಷಕ ಕೆ.ಸಿ.ವೇಣುಗೋಪಾಲ್ ಅವರು ಜೈಪುರದಲ್ಲಿದ್ದಾರೆ.

ಕಾಂಗ್ರೆಸ್ ರಾಜಸ್ಥಾನದಲ್ಲಿ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿದೆ. ಸರಕಾರ ರಚನೆಗೆ 100 ಸ್ಥಾನಗಳ ಸರಳ ಬಹುಮತ ಅಗತ್ಯವಾಗಿದ್ದು,ಮಿತ್ರಪಕ್ಷ ರಾಷ್ಟ್ರೀಯ ಲೋಕದಳವು ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಕೊರತೆಯನ್ನು ತುಂಬಿಕೊಟ್ಟಿದೆ. ಇಲ್ಲಿ ಬಿಜೆಪಿ 73,ಬಿಎಸ್‌ಪಿ 6,ಸಿಪಿಎಂ 2,ಇತರ ಪಕ್ಷಗಳು 6 ಮತ್ತು ಪಕ್ಷೇತರರು 8 ಸ್ಥಾನಗಳನ್ನು ಗೆದ್ದಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ನಾವು ಚುನಾವಣೆಯಲ್ಲಿ ಹೋರಾಡಿದ್ದೇವೆ. ಕಾಂಗ್ರೆಸ್‌ನ ಸಿದ್ಧಾಂತವನ್ನು ನಾವು ಒಪ್ಪುವುದಿಲ್ಲ. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದೇವೆ ಎಂದು ಮಾಯಾವತಿ ಹೇಳಿಕೆಯಲ್ಲಿ ತಿಳಿಸಿದರು.

ಛತ್ತೀಸ್‌ಗಡದಲ್ಲಿ ಮುಖ್ಯಮಂತ್ರಿ ಹುದ್ದೆಗೆ ದುರ್ಗ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಸಂಸದ ತಾಮ್ರಧ್ವಜ ಸಾಹು,ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ ಬಾಲ್ ಮತ್ತು ಹಿರಿಯ ನಾಯಕ ಟಿ.ಎಸ್.ಸಿಂಗದೇವ್ ಅವರ ನಡುವೆ ಪೈಪೋಟಿಯೇರ್ಪಟ್ಟಿದೆ. 90 ಸದಸ್ಯಬಲದ ವಿಧಾನಸಭೆಯಲ್ಲಿ ಸರಕಾರ ರಚನೆಗೆ 46 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಕೇವಲ 15 ಸಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 114, ಬಿಜೆಪಿ 109 ಸ್ಥಾನಗಳನ್ನು ಗಳಿಸಿವೆ. ಕಾಂಗ್ರೆಸ್ ನಾಯಕರಾದ ಕಮಲನಾಥ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಬುಧವಾರ ಮಧ್ಯಾಹ್ನ ರಾಜ್ಯಪಾಲೆ ಆನಂದಿಬೆನ್ ಪಟೇಲ್‌ರನ್ನು ಭೇಟಿಯಾಗಿ ಸರಕಾರ ರಚನೆಗೆ ಕಾಂಗ್ರೆಸ್ ಹಕ್ಕನ್ನು ಮಂಡಿಸಿದ್ದಾರೆ.

ಅತ್ತ ಮುಂಬೈನಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚರಾಜ್ಯ ಚುನಾವಣೆಗಳು ಬದಲಾವಣೆಯ ಆರಂಭವನ್ನು ಮತ್ತು ಬಿಜೆಪಿ ನೇತೃತ್ವದ ಸರಕಾರದ ನೀತಿಗಳಿಗೆ ತಿರಸ್ಕಾರವನ್ನು ಸಂಕೇತಿಸಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News