ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್: ಮಣಿಪುರದ ಯುವಕನ ಅಮೋಘ ಸಾಧನೆ

Update: 2018-12-12 18:00 GMT

ಹೊಸದಿಲ್ಲಿ, ಡಿ.12: ಕೂಚ್ ಬಿಹಾರ್ ಟ್ರೋಫಿಯಲ್ಲಿ ಮಣಿಪುರದ ರೆಕ್ಸ್ ರಾಜ್‌ಕುಮಾರ್ ಇನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ ಅಮೋಘ ಸಾಧನೆ ಮಾಡಿದ್ದಾರೆ.

18ರ ಹರೆಯದ ಎಡಗೈ ಮಧ್ಯಮ ವೇಗದ ಬೌಲರ್ ರಾಜ್‌ಕುಮಾರ್ ಅಂಡರ್-19 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಈ ಅಪೂರ್ವ ಸಾಧನೆ ಮಾಡಿದ್ದಾರೆ.

9.5 ಓವರ್ ಬೌಲಿಂಗ್ ಮಾಡಿದ್ದ ರಾಜ್‌ಕುಮಾರ್ 6 ಮೇಡನ್ ಓವರ್ ಸಹಿತ 11 ರನ್‌ಗೆ ಒಟ್ಟು 10 ವಿಕೆಟ್ ಉಡಾಯಿಸಿದ್ದಾರೆ.

ರಾಜ್‌ಕುಮಾರ್‌ರ ಅದ್ಭುತ ಬೌಲಿಂಗ್‌ಗೆ ತತ್ತರಿಸಿದ ಅರುಣಾಚಲ ಪ್ರದೇಶ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಆಲೌಟಾಯಿತು.

ರಾಜ್‌ಕುಮಾರ್ ಐವರು ದಾಂಡಿಗರನ್ನು ಕ್ಲೀನ್‌ಬೌಲ್ಡ್ ಮಾಡಿದರೆ, ಇಬ್ಬರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದರು. ಇಬ್ಬರು ದಾಂಡಿಗರು ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡುವಂತೆ ಮಾಡಿದರು. ಮತ್ತೊಬ್ಬ ಆಟಗಾರನನ್ನು ಕ್ಯಾಚ್ ಔಟ್ ಮಾಡಿದ್ದರು.

ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ನಡೆದ ಚತುರ್ದಿನ ಪಂದ್ಯದಲ್ಲಿ ಅರುಣಾಚಲದ ಮೊದಲ ಇನಿಂಗ್ಸ್ ಮೊತ್ತ 138ಕ್ಕೆ ಉತ್ತರವಾಗಿ ಮಣಿಪುರ ಮೊದಲ ಇನಿಂಗ್ಸ್‌ನಲ್ಲಿ 122 ರನ್ ಗಳಿಸಿತ್ತು. ಗೆಲ್ಲಲು 55 ರನ್ ಗುರಿ ಪಡೆದಿದ್ದ ಮಣಿಪುರ ಕೇವಲ 7.5 ಓವರ್‌ಗಳಲ್ಲಿ ಗುರಿ ತಲುಪಿ 10 ವಿಕೆಟ್‌ಗಳ ಜಯ ದಾಖಲಿಸಿತು.

ಈ ವರ್ಷ ರಣಜಿ ಟ್ರೋಫಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಸಿಂಗ್ ಪಂದ್ಯದಲ್ಲಿ ಒಟ್ಟು 15 ವಿಕೆಟ್‌ಗಳನ್ನು ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 33ಕ್ಕೆ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಇಬ್ಬರು ಬೌಲರ್‌ಗಳು ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಪಡೆದಿದ್ದಾರೆ. ಅನಿಲ್ ಕುಂಬ್ಳೆ(ಪಾಕ್ ವಿರುದ್ಧ)ಹಾಗೂ ಜಿಮ್ ಲಾಕೆರ್(ಆಸ್ಟ್ರೇಲಿಯ ವಿರುದ್ಧ)ಈ ಸಾಧನೆ ಮಾಡಿದವರು. ಭಾರತೀಯ ಕ್ರಿಕೆಟ್‌ನಲ್ಲಿ ಸುಭಾಶ್ ಗುಪ್ತೆ 1954ರಲ್ಲಿ ಪಾಕಿಸ್ತಾನ ಸರ್ವಿಸಸ್ ವಿರುದ್ಧ ಪ್ರೆಸಿಡೆಂಟ್ ಇಲೆವೆನ್ ಪರ ಮೊದಲ ಬಾರಿ ಈ ಸಾಧನೆ ಮಾಡಿದ್ದರು. ಆಗ ಗುಪ್ತೆ 78ಕ್ಕೆ 10 ವಿಕೆಟ್ ಪಡೆದಿದ್ದರು. 2001ರಲ್ಲಿ ಅಗರ್ತಲದಲ್ಲಿ ದಕ್ಷಿಣ ವಲಯ ವಿರುದ್ಧ ಪೂರ್ವ ವಲಯದ ದೇಬಾಶೀಶ್ ಮೊಹಾಂತಿ 10 ವಿಕೆಟ್ ಗೊಂಚಲು ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News