ಅಜ್ಮಾನ್: ತುಂಬೆ ಆಸ್ಪತ್ರೆಯಲ್ಲಿ ಗೆಡ್ಡೆಗೆ ಚಿಕಿತ್ಸೆ ಪಡೆದು ಧ್ವನಿ ಮರುಪಡೆದ ನೈಜೀರಿಯಾ ಶಿಕ್ಷಕಿ

Update: 2018-12-12 18:14 GMT

ಅಜ್ಮಾನ್, ಡಿ.12: ಸಂಕೀರ್ಣ ಗೆಡ್ಡೆಯಿಂದ ಬಳಲುತ್ತಿದ್ದ ನೈಜೀರಿಯಾ ಮೂಲದ ಶಾಲಾ ಶಿಕ್ಷಕಿಗೆ ಅಜ್ಮಾನ್‌ನ ತುಂಬೆ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಧ್ವನಿ ಮರುಪಡೆಯುವಂತೆ ಮತ್ತು ಆಹಾರ ನುಂಗುವಲ್ಲಿ ಆಗುತ್ತಿದ್ದ ತೊಂದರೆಯನ್ನು ಸರಿಪಡಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

58ರ ಹರೆಯದ ಶಾಲಾ ಶಿಕ್ಷಕಿ ಸ್ಟೆಲ್ಲಾ ವಂಗಾಂಗ ತಿಯಾಜುಕಗೆ ಕೆಲವು ತಿಂಗಳುಗಳಿಂದ ಆಹಾರ ನುಂಗಲು ಸಮಸ್ಯೆಯಾಗುತ್ತಿತ್ತು. ಬಹಳ ದಿನಗಳ ತನಕ ಆಕೆ ಈ ಸಮಸ್ಯೆಯನ್ನು ನಿರ್ಲಕ್ಷಿಸಿದ್ದರು. ಆದರೆ ದಿನ ಕಳೆದಂತೆ ಸಮಸ್ಯೆ ಹೆಚ್ಚಾಗುತ್ತಾ ಸಾಗಿತ್ತು ಮತ್ತು ಆಕೆಯ ಕುತ್ತಿಗೆಯಲ್ಲಿ ಗೆಡ್ಡೆಯಂಥ ರಚನೆ ಸ್ಪರ್ಶಕ್ಕೆ ಸಿಗುತ್ತಿತ್ತು. ಸ್ಥಳೀಯವಾಗಿ ಆಕೆ ಅನೇಕ ವೈದ್ಯರನ್ನು ಭೇಟಿ ಮಾಡಿದರೂ ಸಮಸ್ಯೆ ಏನೆಂಬುದನ್ನು ತಿಳಿಯಲು ಸಾಧ್ಯವಾಗಿರಲಿಲ್ಲ. ಆಹಾರ ನುಂಗಲು ಸಾಧ್ಯವಾಗದ ಕಾರಣ ಶಿಕ್ಷಕಿಯ ದೇಹ ಸಣಕಲಾಗುತ್ತಾ ಸಾಗಿತ್ತು. ಆಕೆ ಕೆಲವೇ ತಿಂಗಳಲ್ಲಿ ಹದಿನೆಂಟು ಕೆ.ಜಿ ದೇಹತೂಕ ಕಳೆದುಕೊಂಡಿದ್ದರು ಎಂದು ತುಂಬೆ ವೈದ್ಯರು ತಿಳಿಸಿದ್ದಾರೆ.

ಸ್ಟೆಲ್ಲಾ ಹೇಳುವಂತೆ ಆಕೆಯ ಪುತ್ರನ ಸಲಹೆಯ ಮೇರೆಗೆ ಅವರು ಅಜ್ಮಾನ್‌ನ ತುಂಬೆ ಆಸ್ಪತ್ರೆಯ ವೈದ್ಯರಲ್ಲಿ ತನ್ನ ಸಮಸ್ಯೆಯನ್ನು ತಿಳಿಸಲು ಆಗಮಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರ ಜೊತೆ ಮಾತನಾಡಿದ ನಂತರ ಆಕೆಗೆ ತಾನು ಸರಿಯಾದ ಜಾಗಕ್ಕೇ ಬಂದಿದ್ದೇನೆ ಎಂಬುದು ಸ್ಪಷ್ಟವಾಗಿತ್ತು. ತುಂಬೆ ಆಸ್ಪತ್ರೆಯಲ್ಲಿ ಆಕೆಯನ್ನು ಪರಿಶೀಲಿಸಿದ ನರಶಸ್ತ್ರಚಿಕಿತ್ಸೆ ತಜ್ಞ ಮತ್ತು ವೈದ್ಯಕೀಯ ನಿರ್ದೇಶಕ ಡಾ.ಹಿಲಲ್ ಕಾಂತಿ ಪಾಲ್ ಸ್ಟೆಲ್ಲಾ ಬಳಿಯಿದ್ದ ಹಿಂದಿನ ಚಿಕಿತ್ಸೆ ಮತ್ತು ಪರೀಕ್ಷೆಗಳ ವರದಿಯನ್ನು ಗಮನಿಸಿ ಕೆಲವೊಂದು ಹೊಸ ಪರೀಕ್ಷೆಯನ್ನು ನಡೆಸಿದ ನಂತರ ಆಕೆ ನ್ಯೂರೊಫೈಬ್ರೊಮಟೊಸಿಸ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು. ಆಕೆ ಒ ನೆಗೆಟಿವ್ ರಕ್ತವನ್ನು ಹೊಂದಿದ್ದ ಕಾರಣ ಮತ್ತು ಆಹಾರ ಸೇವಿಸದೆ ಕೃಷಕಾಯಳಾಗಿದ್ದ ಕಾರಣ ಆಕೆಯ ಮೇಲೆ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವಾಗಿತ್ತು. ಜೊತೆಗೆ ಆಕೆ ಮಧುಮೇಹದಿಂದ ಬಳಲುತ್ತಿದ್ದು ಗಾಯ ಗುಣವಾಗಲು ದೀರ್ಘ ಸಮಯ ತೆಗೆದು ಕೊಳ್ಳುವ ಭಯವೂ ಇತ್ತು ಎಂದು ಡಾ. ಪಂತ್ ತಿಳಿಸುತ್ತಾರೆ.

ಈ ಶಸ್ತ್ರಚಿಕಿತ್ಸೆ ಒಬ್ಬ ವೈದ್ಯನಿಂದ ನಡೆವುದು ಅಸಾಧ್ಯವಾಗಿದ್ದ ಕಾರಣ ಡಾ. ಪಂತ್ ಪರಿಣತ ವೈದ್ಯರ ತಂಡವನ್ನು ರಚಿಸಿದರು. ಈ ತಂಡದಲ್ಲಿ ಶಸ್ತ್ರಚಿಕಿತ್ಸೆ ತಜ್ಞ ಡಾ. ರಾಜೇಶ್ ಸಿಸೋಡಿಯ, ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾ. ಫೈಝಲ್ ಅಮೀರ್ ಮತ್ತು ಇಎನ್‌ಟಿ ತಜ್ಞ ಡಾ. ರೋಹಿತ್ ಗುಲಾಟಿ ಇದ್ದರು. ರೋಗಿ ಮತ್ತು ಆಕೆಯ ಪತಿಯ ಜೊತೆ ವೈದ್ಯರ ತಂಡ ಹಲವು ಬಾರಿ ಮಾತುಕತೆಯನ್ನು ನಡೆಸಿ ಮಾನಸಿಕವಾಗಿ ಅವರನ್ನು ಈ ಶಸ್ತ್ರಚಿಕಿತ್ಸೆಗೆ ಸಿದ್ಧಪಡಿಸಿದ ನಂತರ ಒಂದು ದಿನ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಲಾಯಿತು. ಅಂತಿಮವಾಗಿ ವೈದ್ಯರ ತಂಡ ಸ್ಟೆಲ್ಲಾರ ಗೆಡ್ಡೆಯನ್ನು ಸಂಪೂರ್ಣ ತೆಗೆದು ಹಾಕುವಲ್ಲಿ ಯಶಸ್ವಿಯಾಯಿತು. ಈಗ ಸ್ಟೆಲ್ಲಾ ಆರಾಮವಾಗಿ ಆಹಾರ ಸೇವಿಸುತ್ತಿದ್ದರೆ ಕಳೆದು ಹೋಗಿದ್ದ ಅವರ ಧ್ವನಿಯನ್ನೂ ಮರಳಿ ಪಡೆದಿದ್ದಾರೆ. ತನ್ನ ಸಾಮಾನ್ಯ ಜೀವನವನ್ನು ಮರಳಿ ತನಗೆ ನೀಡಿದ್ದಕ್ಕೆ ಸ್ಟೆಲ್ಲಾ ತುಂಬೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News