34 ಸಂಭಾವ್ಯ ಆಟಗಾರರ ಹೆಸರು ಪ್ರಕಟಿಸಿದ ಭಾರತ

Update: 2018-12-12 18:28 GMT

ಹೊಸದಿಲ್ಲಿ, ಡಿ.12: ಮುಂದಿನ ವರ್ಷ ಯುಎಇನಲ್ಲಿ ನಡೆಯುವ ಎಎಫ್‌ಸಿ ಏಶ್ಯಕಪ್‌ಗೆ ಪೂರ್ವತಯಾರಿ ಶಿಬಿರಕ್ಕೆ ಭಾರತ ಫುಟ್ಬಾಲ್ ಕೋಚ್ ಸ್ಟೀಫನ್ ಕಾನ್‌ಸ್ಟನ್‌ಸ್ಟೈನ್ 34 ಸಂಭಾವ್ಯ ಆಟಗಾರರ ಹೆಸರನ್ನು ಪ್ರಕಟಿಸಿದ್ದು, ಇದರಲ್ಲಿ 23 ಆಟಗಾರರು 18 ವರ್ಷದೊಳಗಿನವರಾಗಿದ್ದಾರೆ.

ಎಎಫ್‌ಸಿ ಹಾಕಿ ಏಶ್ಯಕಪ್ 2019ರ ಜ.5ರಿಂದ ಫೆ.1 ತನಕ ಗಲ್ಫ್ ರಾಷ್ಟ್ರದಲ್ಲಿ ನಡೆಯಲಿದೆ.

ಎಲ್ಲ ಆಟಗಾರರು ಡಿ.16ರ ಬಳಿಕ ದಿಲ್ಲಿಯಲ್ಲಿ ಶಿಬಿರಕ್ಕೆ ಹಾಜರಾಗಬೇಕು. ಡಿ.20ರಂದು ನಡೆಯುವ ಕೊನೆಯ ಹಂತದ ತಯಾರಿಗಾಗಿ 28 ಸದಸ್ಯರನ್ನು ಒಳಗೊಂಡ ತಂಡ ಅಬುಧಾಬಿಗೆ ತೆರಳಲಿದೆ.

ಕಾಂಟಿನೆಂಟೆಲ್ ಚಾಂಪಿಯನ್‌ಶಿಪ್‌ಗೆ 23 ಆಟಗಾರರು ಹೆಸರುಗಳನ್ನು ನೋಂದಾಯಿಸಲು ಡಿ.26 ಕೊನೆಯ ದಿನವಾಗಿದೆ.

ಏಶ್ಯಕಪ್ ಪೂರ್ವತಯಾರಿಯ ಭಾಗವಾಗಿ ಭಾರತ ಡಿ.27 ರಂದು ಅಬುಧಾಬಿಯಲ್ಲಿ ಒಮಾನ್ ವಿರುದ್ಧ ಅಂತರ್‌ರಾಷ್ಟ್ರೀಯ ಸೌಹಾರ್ದ ಪಂದ್ಯವನ್ನಾಡಲಿದೆ. ಆನಂತರ ಮುಂದಿನ ವರ್ಷದ ಜನವರಿ 6ರಂದು ಅಬುಧಾಬಿಯಲ್ಲಿ ನಡೆಯುವ ಏಶ್ಯಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಸವಾಲು ಎದುರಿಸಲಿದೆ.

 ಭಾರತ ಕ್ರಮವಾಗಿ ಜ.10 ಹಾಗೂ 14ರಂದು ಯುಎಇ ಹಾಗೂ ಬಹರೈನ್ ವಿರುದ್ಧ ಸೆಣಸಾಡಲಿದೆ.

‘‘ಇದೊಂದು ಪ್ರಮುಖ ಚಾಂಪಿಯನ್‌ಶಿಪ್. ಎಲ್ಲ ಆಟಗಾರರಿಗೆ ಅಂತಿಮ ಪಟ್ಟಿಯಲ್ಲಿರಬೇಕಾದ ಬಯಕೆಯಿದೆ ಎಂದು ನನಗೆ ಗೊತ್ತಿದೆ. ಏಶ್ಯಕಪ್‌ನಲ್ಲಿ ಆಡಿದ ಅನುಭವ ಯುವ ಆಟಗಾರರಿಗೆ ಉತ್ತಮ ಆಟಗಾರರಾಗಲು ನೆರವಾಗುತ್ತದೆ. ಎಲ್ಲರೂ ಶಿಬಿರದಲ್ಲಿ ಉತ್ತಮವಾದುದ್ದನ್ನು ಗಳಿಸಲಿ. ಎಲ್ಲರಿಗೂ ಶುಭಾಶಯ’’ ಎಂದು ಅಂಡರ್-23 ಆಟಗಾರರನ್ನು ಉಲ್ಲೇಖಿಸಿ ಕೋಚ್ ಸ್ಟೀಫನ್ ಹೇಳಿದ್ದಾರೆ.

ಭಾರತ ನಾಲ್ಕನೇ ಬಾರಿ ಏಶ್ಯಕಪ್‌ನಲ್ಲಿ ಕಾಣಿಸಿಕೊಳ್ಳಲಿದೆ. 2011ರಲ್ಲಿ ದೋಹಾದಲ್ಲಿ ಕೊನೆಯ ಬಾರಿ ಈ ಟೂರ್ನಿಯನ್ನು ಆಡಿತ್ತು. 1964ರಲ್ಲಿ ಇಸ್ರೇಲ್‌ಗೆ ಶರಣಾಗಿ ರನ್ನರ್ಸ್-ಅಪ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News