ತೆಲಂಗಾಣ ರಾಜಕೀಯದ ಅಜೇಯ ನಾಯಕ ಕೆ. ಚಂದ್ರಶೇಖರ ರಾವ್

Update: 2018-12-13 17:21 GMT

ಹೊಸದಿಲ್ಲಿ,ಡಿ.13: ಇತ್ತೀಚೆಗೆ ಕೊನೆಗೊಂಡ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಏರಿದ್ದಾರೆ. ಆ ಮೂಲಕ ಕಾಂಗ್ರೆಸ್ ನೇತೃತ್ವದ ವಿರೋಧಿ ಬಣವನ್ನು ಬಗ್ಗುಬಡಿದಿದ್ದಾರೆ.

1950ರಲ್ಲಿ ಆಂಧ್ರ ಪ್ರದೇಶ ರಾಜ್ಯವಾಗಿ ರೂಪುಗೊಂಡಂದಿನಿಂದ ತೆಲುಗು ಭಾಷಿಕರಿಗೆ ಪ್ರತ್ಯೇಕ ರಾಜ್ಯಬೇಕು ಎಂಬ ಕೂಗು ಕೇಳುತ್ತಲೇ ಬಂದಿತ್ತು. 1958ರಲ್ಲಿ ಜನಿಸಿದ ಕೆಸಿಆರ್ ಅಲಿಯಾಸ್ ಕಲ್ವಕುಂಟ್ಲ ಚಂದ್ರಶೇಖರ ರಾವ್ ತನ್ನ ಯೌವ್ವನಾವಸ್ಥೆಯಲ್ಲೇ ತೆಲಂಗಾಣ ಎಂಬ ಪ್ರತ್ಯೇಕ ರಾಜ್ಯದ ಬೇಡಿಕೆಯ ಹೋರಾಟದಲ್ಲಿ ಶಾಮೀಲಾಗಿದ್ದರು. ತನ್ನ ರಾಜಕೀಯ ಜೀವನವನ್ನು ಕಾಂಗ್ರೆಸ್‌ನಿಂದ ಆರಂಭಿಸಿದ ಕೆಸಿಆರ್ 1984ರಲ್ಲಿ ತೆಲುಗು ದೇಶಂ ಪಕ್ಷ ಸೇರಿದರು. ಅವರು ಟಿಡಿಪಿಯ ಈಗಿನ ನಾಯಕ ಚಂದ್ರಬಾಬು ನಾಯ್ಡುಗಿಂತ ಪಕ್ಷದಲ್ಲಿ ಹಿರಿಯವರಾಗಿದ್ದರು.

ಟಿಡಿಪಿಯಿಂದ ಕೆಸಿಆರ್ 1985-1999ರ ಮಧ್ಯೆ ಸತತ ನಾಲ್ಕು ಬಾರಿ ಸಿದ್ದಿಪೆಟ್‌ನಿಂದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2001ರಲ್ಲಿ ಟಿಡಿಪಿಯಿಂದಲೂ ಹೊರಬಂದ ರಾವ್ ತೆಲಂಗಾಣ ಎಂಬ ಒಂದೇ ವಿಷಯವನ್ನು ಹಿಡಿದು ಸಾಮಾಜಿಕ ಹೋರಾಟಕ್ಕಿಳಿದರು. 2001ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ರಚನೆ ಮಾಡುವ ಮೂಲಕ ತೆಲಂಗಾಣ ರಾಜ್ಯ ಸ್ಥಾಪಿಸುವ ಕಾರ್ಯಕ್ಕೆ ಮತ್ತಷ್ಟು ಶಕ್ತಿ ತುಂಬಿದರು. ಸತತ ಮಾಧ್ಯಮಗಳಲ್ಲಿ ಈ ಬಗ್ಗೆ ಸಂದರ್ಶನಗಳನ್ನು ನೀಡಿದ ಅವರು ಟಿಡಿಪಿ ತೆಲಂಗಾಣದ ಜನರನ್ನು ನಿರ್ಲಕ್ಷಿಸಿದೆ ಎಂದು ಆಪಾದಿಸುತ್ತಿದ್ದರು. ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕೆಂಬ ಆಗ್ರಹದೊಂದಿಗೆ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಟಿಆರ್‌ಎಸ್ ಚುನಾವಣೆಗೆ ಸ್ಪರ್ಧಿಸಿತು. ಆದರೆ ಕೆಸಿಆರ್ ಮತ್ತು ಕಾಂಗ್ರೆಸ್ ಮಧ್ಯೆ ಸಂಬಂಧ ಅಷ್ಟೊಂದು ಸುಗಮವಾಗಿರಲಿಲ್ಲ.

ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡದ ಹೊರತು ತನಗೆ ಸಮಾಧಾನವಿಲ್ಲ ಎಂದು ಪದೇಪದೆ ಅವರು ಕಾಂಗ್ರೆಸ್‌ಗೆ ನೆನಪಿಸುತ್ತಲೇ ಇದ್ದರು ಮತ್ತು ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಬೆದರಿಸುತ್ತಿದ್ದರು. 2009ರಲ್ಲಿ ರಾವ್ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಸಂದರ್ಭದ ಹನ್ನೊಂದು ದಿನಗಳ ಬಂದ್ ಆಚರಿಸಲಾಯಿತು. ಈ ವೇಳೆ ರಾಜ್ಯಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಈ ಘಟನೆ ಕೇಂದ್ರದ ಯುಪಿಎ ಸರಕಾರಕ್ಕೆ ಆಘಾತ ನೀಡಿತ್ತು. ಪರಿಣಾಮವಾಗಿ ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವುದಾಗಿ ಸರಕಾರ ಭರವಸೆ ನೀಡಿತು. ಈ ಭರವಸೆಯ ನಂತರವೂ ಕೆಸಿಆರ್ ತನ್ನ ಹೋರಾಟವನ್ನು ಮುಂದುವರಿಸಿದರು. ಇದಾಗಿ ಐದು ವರ್ಷಗಳ ನಂತರ ತೆಲಂಗಾಣ ಎಂಬ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬಂತು.

ನೂತನವಾಗಿ ಜನ್ಮ ತಾಳಿದ ರಾಜ್ಯಕ್ಕೆ ಅದರ ಹುಟ್ಟಿಗೆ ಕಾರಣವಾದ ಕೆಸಿಆರ್ ಅವರನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಯಿತು. ಆದರೆ ನಾಲ್ಕು ವರ್ಷಗಳ ನಂತರ ಎರಡನೇ ಬಾರಿ ರಾಜ್ಯದಲ್ಲಿ ಸರಕಾರ ರಚಿಸಲು ಹಿಂದಿನ ಹೋರಾಟಗಳ ಬೆಂಬಲ ಸಾಕಾಗಿರಲಿಲ್ಲ. ಬದಲಿಗೆ ಮುಖ್ಯಮಂತ್ರಿಯಾಗಿ ಕೆಸಿಆರ್ ನಿರ್ವಹಣೆ ಮೇಲೆ ಈ ಗೆಲುವು ನಿರ್ಧರಿಸಲ್ಪಡಲಿತ್ತು. ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೆಸಿಆರ್ ಪಕ್ಷ ಎಲ್ಲರ ನಿರೀಕ್ಷೆಗಳನ್ನೂ ಮೀರಿದ ಪ್ರದರ್ಶನ ನೀಡಿದೆ. ಹಿಂದೆ ಗಳಿಸಿದ್ದ ಸ್ಥಾನಗಳಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಪಕ್ಷ ಈ ಚುನಾವಣೆಯಲ್ಲಿ ಗೆದ್ದುಕೊಂಡಿದೆ. ರೈತರಿಗೆ ನಗದು, ವಿವಾಹವಾಗುವ ಯುವತಿಯರಿಗೆ ನಗದು ಬಹುಮಾನ, ಅಂಗವೈಕಲ್ಯ ಹೊಂದಿರುವವರಿಗೆ, ವೃದ್ಧರಿಗೆ ಮತ್ತು ವಿಧವೆಯರಿಗೆ ಉಚಿತ ಪಿಂಚಣಿ, ಬಡವರಿಗೆ ಮನೆ ನಿರ್ಮಾಣ ಇತ್ಯಾದಿ ಯೋಜನೆಗಳು ಚಂದ್ರಶೇಖರ್ ರಾವ್ ಅವರನ್ನು ಮತ್ತೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿವೆ. ಕಾಂಗ್ರೆಸ್, ಟಿಡಿಪಿ, ಸಿಪಿಐ ಮತ್ತು ತೆಲಂಗಾಣ ಜನ ಸಮಿತಿ ಒಗ್ಗಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಕೆಸಿಆರ್ ಜನಪ್ರಿಯತೆಯ ಮುಂದೆ ಮಂಕಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News