ಇಬ್ಬರು ಸಿಕ್ಖರನ್ನು ಸಜೀವ ದಹನ ಮಾಡಿದ್ದ ಗುಂಪಿನೊಂದಿಗೆ ಕಮಲನಾಥ್ ಏಕಿದ್ದರು ?

Update: 2018-12-13 18:40 GMT

ಹೊಸದಿಲ್ಲಿ,ಡಿ.13: ಒಂದೂವರೆ ದಶಕಗಳ ಬಳಿಕ ಮಧ್ಯಪ್ರದೇಶದಲ್ಲಿ ಗೆಲುವಿನ ರುಚಿಯನ್ನು ಕಂಡಿರುವ ಕಾಂಗ್ರೆಸ್ ಶೀಘ್ರವೇ ನೂತನ ಸರಕಾರವನ್ನು ರಚಿಸಲಿದೆ ಮತ್ತು ಅದರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲನಾಥ್ ಅವರು 1984ರ ಸಿಖ್ ಹತ್ಯಾಕಾಂಡದ ಕಳಂಕವನ್ನು ಹೊತ್ತುಕೊಂಡೇ ಮುಖ್ಯಮಂತ್ರಿ ಗಾದಿಗೇರಲಿದ್ದಾರೆ. ಹೌದು, ಸಿಖ್ ನರಮೇಧದ ಕುರಿತು ಮನೋಜ್ ಮಿಟ್ಟಾ ಮತ್ತು ಎಚ್.ಎಸ್.ಫೂಲ್ಕಾ ಅವರು ಬರೆದಿರುವ ‘‘ವೆನ್ ಎ ಟ್ರೀ ಶುಕ್ ದಿಲ್ಲಿ ’’ ಪುಸ್ತಕವು ಹತ್ಯಾಕಾಂಡದಲ್ಲಿ ಕಮಲನಾಥ್ ಭಾಗಿಯಾಗಿದ್ದರು ಎನ್ನುವುದನ್ನು ಬೆಟ್ಟುಮಾಡಿದೆ.

 1984, ಅಕ್ಟೋಬರ್ 31ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತನ್ನ ಸಿಖ್ ಅಂಗರಕ್ಷಕರಿಂದಲೇ ಹತ್ಯೆಯಾದ ಮರುದಿನ 4,000ಕ್ಕೂ ಅಧಿಕ ಜನರಿದ್ದ ಗುಂಪು ಸಂಸತ್ ಭವನದ ಮೂಗಿನಡಿಯಲ್ಲಿಯೇ ಇರುವ ರಕಬ್ ಗಂಜ್ ಗುರುದ್ವಾರಾಕ್ಕೆ ಐದು ಗಂಟೆಗಳಷ್ಟು ಸುದೀರ್ಘ ಕಾಲ ಮುತ್ತಿಗೆ ಹಾಕಿತ್ತು. ಗುರುದ್ವಾರಕ್ಕೆ ಹಾನಿಯನ್ನುಂಟು ಮಾಡಿದ ಗುಂಪು ಇಬ್ಬರು ಸಿಕ್ಖರನ್ನು ಸಜೀವ ದಹನಗೊಳಿಸಿತ್ತು. ಇದು ಬಹುಶಃ ದಿಲ್ಲಿಯಲ್ಲಿ ಸಿಕ್ಖರ ವಿರುದ್ಧ ನಡೆದ ಮೊದಲ ದಾಳಿಯಾಗಿತ್ತು ಮತ್ತು ಭಾರತದ ಗುಂಪು ಹಿಂಸಾಚಾರದ ಇತಿಹಾಸದಲ್ಲಿಯೇ ರಾಜಕೀಯ ನಾಯಕನೋರ್ವ ಘಟನಾಸ್ಥಳದಲ್ಲಿ ತನ್ನ ಉಪಸ್ಥಿತಿಯನ್ನು ಒಪ್ಪಿಕೊಂಡ ಏಕೈಕ ಪ್ರಕರಣವಾಗಿತ್ತು. ಇದೇ ಕಾರಣದಿಂದ ಈ ದಾಳಿ ಘಟನೆ ಮಹತ್ವ ಪಡೆದುಕೊಂಡಿದೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

 ಈಗ ಮಧ್ಯಪ್ರದೇಶದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲಿರುವ ಕಮಲನಾಥ ಅವರೇ ಈ ರಾಜಕೀಯ ನಾಯಕನಾಗಿದ್ದರು ಎನ್ನುವ ಸತ್ಯ ಪುಸ್ತಕದಲ್ಲಿದೆ. ಆಗ ಮಧ್ಯಪ್ರದೇಶದ ಉದಯೋನ್ಮುಖ ಕಾಂಗ್ರೆಸ್ ಸಂಸದರಾಗಿದ್ದ ಕಮಲನಾಥ್ ಬಳಿಕ ಕೇಂದ್ರದಲ್ಲಿ ಸಚಿವರೂ ಆಗಿದ್ದವರು. ಗುರುದ್ವಾರಕ್ಕೆ ಮುತ್ತಿಗೆ ನಡೆದಿದ್ದ ಸಂದರ್ಭ ಇದೇ ಕಮಲನಾಥ್ ಎರಡು ಗಂಟೆಗಳಿಗೂ ಅಧಿಕ ಕಾಲ ಅಲ್ಲಿದ್ದರು ಎನ್ನುವುದನ್ನು ಪುಸ್ತಕವು ಬೆಟ್ಟುಮಾಡಿದೆ.

ಕಮಲನಾಥ್ ಘಟನಾ ಸ್ಥಳದಲ್ಲಿದ್ದರು ಎನ್ನುವುದನ್ನು ಆಗಿನ ದಿಲ್ಲಿ ಪೊಲೀಸ್ ಆಯುಕ್ತ ಸುಭಾಷ್ ಟಂಡನ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಗೌತಮ ಕೌಲ್ ಹಾಗೂ ಆಂಗ್ಲ ದೈನಿಕದ ವರದಿಗಾರ ಸಂಜಯ ಸೂರಿ ಅವರು ದೃಢಪಡಿಸಿದ್ದರು. ಎಚ್.ಕೆ.ಎಲ್.ಭಗತ್,ಜಗದೀಶ ಟೈಟ್ಲರ್,ಸಜ್ಜನ ಕುಮಾರ್ ಅಥವಾ ಧರ್ಮದಾಸ ಶಾಸ್ತ್ರಿ....ಹೀಗೆ ಸಿಖ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಆರೋಪಿಗಳಾಗಿರುವ ದಿಲ್ಲಿಯ ಯಾವುದೇ ಸಂಸದನ ವಿರುದ್ಧದ ಆರೋಪ ಕೇವಲ ಸಾಂದರ್ಭಿಕ ಸಾಕ್ಷಾಧಾರಗಳನ್ನು ಆಧರಿಸಿದ್ದರೆ ಕಮಲನಾಥ್ ಅವರು ದಂಗೆ ಸ್ಥಳದಲ್ಲಿ ಖುದ್ದಾಗಿ ಉಪಸ್ಥಿತರಿದ್ದರು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಗಳಿದ್ದರು. ಕಮಲನಾಥ್ ಅವರೇ ಗುಂಪಿನ ನೇತೃತ್ವವನ್ನು ವಹಿಸಿದ್ದರು ಮತ್ತು ಅದನ್ನು ನಿಯಂತ್ರಿಸುತ್ತಿದ್ದರು. ಗುಂಪು ಅವರ ನಿರ್ದೇಶನಗಳಿಗಾಗಿ ಎದುರು ನೋಡುತ್ತಿತ್ತು. ರಸ್ತೆ ಬದಿಯಲ್ಲಿ ಬೆಂಕಿಯ ಜ್ವಾಲೆಗಳಲ್ಲಿ ಹೊರಳಾಡುತ್ತಿದ್ದ ಇಬ್ಬರು ಸಿಖ್ ವ್ಯಕ್ತಿಗಳನ್ನು ರಕ್ಷಿಸುವ ಯಾವುದೇ ಪ್ರಯತ್ನವನ್ನು ಅವರು ಮಾಡಿರಲಿಲ್ಲ ಎಂದು ಸೂರಿ 1985ರಲ್ಲಿ ಮಿಶ್ರಾ ಆಯೋಗಕ್ಕೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದರು.

ಕಮಲನಾಥ್ ಸ್ಥಳದಲ್ಲಿದ್ದನ್ನು ಬಳಿಕ ರಾಷ್ಟ್ರಮಟ್ಟದ ಪತ್ರಿಕೆಗಳೂ ವರದಿ ಮಾಡಿದ್ದವು. ಈ ವಿಷಯ ಜಗಜ್ಜಾಹೀರಾಗಿದ್ದರಿಂದ ಟಂಡನ್ ಮತ್ತು ಕೌಲ್ ಅವರೂ ಮಿಶ್ರಾ ಮತ್ತು ನಾನಾವತಿ ಆಯೋಗಗಳ ಮುಂದೆ ನೀಡಿದ್ದ ಹೇಳಿಕೆಗಳಲ್ಲಿ ಕಮಲನಾಥ್ ಘಟನಾ ಸ್ಥಳದಲ್ಲಿದ್ದರು ಎನ್ನುವುದನ್ನು ಒಪ್ಪಿಕೊಳ್ಳುವಂತಾಗಿತ್ತು. ಎರಡು ದಶಕಗಳ ಬಳಿಕ ಮನಮೋಹನ ಸಿಂಗ್ ಸರಕಾರದಲ್ಲಿ ಸಚಿವರಾಗಿದ್ದ ಸಂದರ್ಭ ನಾನಾವತಿ ಆಯೋಗದ ನೊಟೀಸ್‌ನಂತೆ ಅದರೆದುರು ಹಾಜರಾಗಿದ್ದ ಕಮಲನಾಥ್ ರಕಬ್ ಗಂಜ್ ಗುರುದ್ವಾರಾ ದಂಗೆಯ ಸಂದರ್ಭದಲ್ಲಿ ತಾನು ಅಲ್ಲಿದ್ದೆ ಎನ್ನುವುದನ್ನು ಒಪ್ಪಿಕೊಂಡಿದ್ದರು. ಆದರೆ ತಾನು ಗುಂಪಿನ ನೇತೃತ್ವ ವಹಿಸಿದ್ದೆ ಎಂಬ ಸೂರಿ ಮತ್ತು ದಂಗೆಯ ಸಂತ್ರಸ್ತ ಮುಖ್ತಿಯಾರ್ ಸಿಂಗ್ ಅವರ ಆರೋಪಗಳನ್ನು ನಿರಾಕರಿಸಿದ್ದರು. ‘ಸರಿಯಾದ ಸಾಕ್ಷಾಧಾರಗಳಿರದ್ದರಿಂದ’ ಸಂಶಯದ ಲಾಭವನ್ನು ನೀಡಿ ಆಯೋಗವು ಕಮಲನಾಥ್‌ರನ್ನು ದೋಷಮುಕ್ತಗೊಳಿಸಿತ್ತು!.

ಕಮಲನಾಥ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸೂರಿ ತನ್ನ ಹೇಳಿಕೆಯಲ್ಲಿ,ಅವರು ಗುಂಪನ್ನು ಚದುರಿಸಲು ಪ್ರಯತ್ನಿಸಿದ್ದರು ಎಂದು ತಿಳಿಸಿದ್ದನ್ನೇ ಆಯೋಗವು ಗಟ್ಟಿಯಾಗಿ ಹಿಡಿದುಕೊಂಡಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ಆದರೆ ಕಮಲನಾಥ್ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಲು ಆಯೋಗದ ಬಳಿ ಸಾಕಷ್ಟು ಸಾಕ್ಷಾಧಾರಗಳಿದ್ದವು. ಕಮಲನಾಥ್ ಅವರು ಗಲಭೆಯ ಭಾಗವಾಗಿದ್ದರೇ ಹೊರತು ಅದನ್ನು ತಡೆಯಲು ಅವರು ಪ್ರಯತ್ನಿಸಿರಲಿಲ್ಲ. ರಕಬ್‌ಗಂಜ್ ಗುರುದ್ವಾರಾ ಪ್ರಕರಣದಲ್ಲಿ ಅವರ ಪಾತ್ರದ ಕುರಿತು ಉತ್ತರ ಸಿಗದ ಪ್ರಶ್ನೆಗಳು 1984ರ ನರಮೇಧದ ಹಿಂದಿನ ಉನ್ನತ ಮಟ್ಟದ ಸಂಚನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಸಾಧನಗಳಾಗಿವೆ ಎಂದೂ ಲೇಖಕರು ಬರೆದಿದ್ದಾರೆ.

ಗುರುದ್ವಾರಾ ದಂಗೆ ಸಂದರ್ಭದಲ್ಲಿ ಕಮಲನಾಥ್ ಅಲ್ಲಿದ್ದರು ಎನ್ನುವುದು ಜನಮಾನಸದಿಂದ ಮರೆಯಾಗಿರಬಹುದು. ಆದರೆ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುವುದರೊಂದಿಗೆ ಈ ಕಳಂಕ ಅವರನ್ನು ಬೇತಾಳನಂತೆ ಬೆನ್ನು ಹತ್ತುವುದು ಮಾತ್ರ ಸುಳ್ಳಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News