ಅಮೆರಿಕ: ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೋರಾಡುವ ಸಂಸ್ಥೆಗೆ ಭಾರತೀಯ ಮೂಲದ ಮಹಿಳೆ ನೇಮಕ

Update: 2018-12-14 05:28 GMT

ವಾಷಿಂಗ್ಟನ್, ಡಿ. 14: ಅಮೆರಿಕದ ಖ್ಯಾತ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಹಾಗೂ ವಕೀಲೆ, ಭಾರತೀಯ ಮೂಲದ ಅನುರಿಮಾ ಭಾರ್ಗವ ಅವರನ್ನು ಅಮೆರಿಕದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೋರಾಡುವ ಸಂಸ್ಥೆಯ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಲಾಗಿದೆ.

ಯುಎಸ್ ಕಮಿಷನ್ ಫಾರ್ ಇಂಟರ್‌ನ್ಯಾಷನಲ್ ರಿಲೀಜಿಯಸ್ ಫ್ರೀಡಂ (ಯುಎಸ್‌ಸಿಐಆರ್‌ಎಫ್) ಕಮಿಷನರ್ ಆಗಿ ಅನುರಿಮಾ ನೇಮಕಗೊಂಡಿದ್ದಾರೆ. ವಿದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಇರುವ ಅಪಾಯಗಳನ್ನು ವಿಶ್ಲೇಷಿಸಿ ವರದಿ ಮಾಡುವ ಸಲುವಾಗಿ ಅಮೆರಿಕದ ಸಂಸತ್ತು ನೇಮಕ ಮಾಡುವ ಸ್ವತಂತ್ರ್ಯ ಹಾಗೂ ನಿಷ್ಪಕ್ಷಪಾತ ಕೇಂದ್ರೀಯ ಸಂಸ್ಥೆ ಇದಾಗಿದೆ.

ಚಿಕಾಗೋದಲ್ಲಿ ಹುಟ್ಟಿ ಬೆಳೆದ ಭಾರ್ಗವ, ಪ್ರಸ್ತುತ "ಆ್ಯಂಥಮ್ ಆಫ್ ಯುಎಸ್" ಎಂಬ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ನ್ಯಾಯ ಮತ್ತು ಗೌರವ ಪ್ರತಿಪಾದಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಮೂಲಕ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಮೂಲಕ ಕೆಲಸ ಮಾಡುವ ಸಂಸ್ಥೆ ಇದಾಗಿದೆ.

ಪ್ರಾತಿನಿಧ್ಯವೇ ಇಲ್ಲದ ಹಲವು ಸಮುದಾಯಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರ್ಗವ, ಅಮೆರಿಕದ ನ್ಯಾಯ ಇಲಾಖೆ ಮತ್ತು ಎನ್‌ಎಎಸಿಪಿ ಕಾನೂನು ರಕ್ಷಣೆ ಮತ್ತು ಶೈಕ್ಷಣಿಕ ನಿಧಿಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಯುಎಸ್‌ಸಿಐಆರ್‌ಎಫ್ ಅಧ್ಯಕ್ಷರಾಗಿ ಟಿಬೆಟಿಯನ್ ಮೂಲದ ತೆಂಝಿನ್ ದೋರ್ಜಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರ್ಗವ ಅವರನ್ನು ಯುಎಸ್‌ಸಿಐಆರ್‌ಎಫ್ ಕಮಿಷನರ್ ಆಗಿ ನೇಮಕ ಮಾಡಿರುವ ಸಭಾನಾಯಕಿ ನ್ಯಾನ್ಸಿ ಪೆಲೋಸಿಯವರನ್ನು ದೋರ್ಜಿ ಅಭಿನಂದಿಸಿದ್ದಾರೆ.

"ಅದ್ಭುತ ಹಿನ್ನೆಲೆ ಮತ್ತು ಅಮೆರಿಕ ಹಾಗೂ ಹೊರಗೆ ಅಲ್ಪಸಂಖ್ಯಾತ ಸಮುದಾಯದವರ ಬಗೆಗಿನ ಪ್ರಾಮಾಣಿಕ ಬದ್ಧತೆ ಹೊಂದಿದ ಇತಿಹಾಸದ ಅನುರಿಮಾ ಭಾರ್ಗವಿ, ಆಯೋಗಕ್ಕೆ ಹೊಸ ಆಯಾಮ ನೀಡಲಿ. ಅದರಲ್ಲೂ ಮುಖ್ಯವಾಗಿ ಅಮೆರಿಕ ಸುಧೀರ್ಘ ಹಾಗೂ ಹೆಮ್ಮೆಯ ಸಂಬಂಧ ಹೊಂದಿದ ಭಾರತದಲ್ಲಿ ಆಯೋಗದ ಕೆಲಸವನ್ನು ಇನ್ನಷ್ಟು ಹೆಚ್ಚು ಮಾಡಲಿ" ಎಂದು ಅವರು ಆಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News