3ನೆ ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾದ ಅಶೋಕ್ ಗೆಹ್ಲೋಟ್

Update: 2018-12-14 14:56 GMT

ಹೊಸದಿಲ್ಲಿ,ಡಿ.14: ರಾಜಸ್ಥಾನದಲ್ಲಿ ಭಾರೀ ಕುತೂಹಲ ಸೃಷ್ಟಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಕಸರತ್ತು ಕೊನೆಗೂ ಅಂತ್ಯಗೊಂಡಿದೆ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್(67) ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯನ್ನಾಗಿ ನೇಮಕಗೊಳಿಸಿರುವುದಾಗಿ ಪಕ್ಷವು ಶುಕ್ರವಾರ ಪ್ರಕಟಿಸಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಸಂಸದ ಸಚಿನ್ ಪೈಲಟ್(41) ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದ ಬಳಿಕ ಮುಖ್ಯಮಂತ್ರಿ ಗಾದಿಗಾಗಿ ಉಭಯ ನಾಯಕರ ನಡುವೆ ತೀವ್ರ ಪೈಪೋಟಿಯೇರ್ಪಟ್ಟಿತ್ತು. ರಾಜಸ್ಥಾನದಲ್ಲಿ ಕಾಂಗ್ರೆಸ್ ವೀಕ್ಷಕರಾದ ಕೆ.ಸಿ.ವೇಣುಗೋಪಾಲ್ ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಗೆಹ್ಲೋಟ್ ಅವರ ಆಯ್ಕೆಯನ್ನು ಪ್ರಕಟಿಸಿದರು. ರಾಜ್ಯಪಾಲರನ್ನು ಭೇಟಿಯಾಗಿ ಪ್ರಮಾಣ ವಚನ ಸ್ವೀಕಾರದ ಬಗ್ಗೆ ನಿರ್ಧರಿಸುವುದಾಗಿ ಅವರು ತಿಳಿಸಿದರು.

ಗೆಹ್ಲೋಟ್ ಮತ್ತು ಪೈಲಟ್ ಗುರುವಾರ ಹಾಗೂ ಶುಕ್ರವಾರ ದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಹಲವಾರು ಸುತ್ತುಗಳ ಚರ್ಚೆಯನ್ನು ನಡೆಸಿದ್ದರು. ಶಾಂತಿಯನ್ನು ಕಾಯ್ದುಕೊಳ್ಳುವಂತೆ ಪೈಲಟ್ ಗುರುವಾರ ಪಕ್ಷದ ಕಾರ್ಯಕರ್ತರನ್ನು ಕೋರಿಕೊಂಡಿದ್ದರೆ,ಪಕ್ಷಾಧ್ಯಕ್ಷರು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡಗಳ ಮುಖ್ಯಮಂತ್ರಿಗಳನ್ನೂ ಆಯ್ಕೆ ಮಾಡಬೇಕಿರುವುದರಿಂದ ನಿರ್ಧಾರವು ವಿಳಂಬವಾಗಲಿದೆ ಎಂದು ಗೆಹ್ಲೋಟ್ ಹೇಳಿದ್ದರು.

ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲು ಮೂರು ರಾಜ್ಯಗಳ ನೂತನ ಕಾಂಗ್ರೆಸ್ ಶಾಸಕರು ಗುರುವಾರ ಸಭೆಗಳನ್ನು ನಡೆಸಿದ್ದರಾದರೂ,ಅಂತಿಮವಾಗಿ ಮುಖ್ಯಮಂತ್ರಿಗಳ ಆಯ್ಕೆಯ ಅಧಿಕಾರವನ್ನು ರಾಹುಲ್ ಗಾಂಧಿಯವರಿಗೆ ಬಿಟ್ಟಿದ್ದರು. ಪಕ್ಷವು ಗುರುವಾರ ತಡರಾತ್ರಿ ಕಮಲನಾಥ್ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಹೆಸರಿಸಿತ್ತು.

200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಬಿಜೆಪಿಗೆ 73 ಸ್ಥಾನಗಳು ದಕ್ಕಿವೆ. ಗೆಹ್ಲೋಟ್ ಸರ್ದಾರ್‌ಪುರ ಕ್ಷೇತ್ರವನ್ನು ಉಳಿಸಿಕೊಂಡಿದ್ದರೆ, ಪೈಲಟ್ ಟೊಂಕ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಸರಕಾರ ರಚನೆಗೆ 100 ಸ್ಥಾನಗಳ ಸರಳ ಬಹುಮತ ಅಗತ್ಯವಾಗಿದ್ದು,ಬಿಎಸ್‌ಪಿ ಮತ್ತು ರಾಷ್ಟ್ರೀಯ ಲೋಕದಳ ಕಾಂಗ್ರೆಸ್‌ಗೆ ಬೆಂಬಲವನ್ನು ಘೋಷಿಸಿವೆ. ಅಭ್ಯರ್ಥಿಯ ನಿಧನದಿಂದಾಗಿ ಒಂದು ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.

ಮುಖ್ಯಮಂತ್ರಿ ನೇಮಕವನ್ನು ಪ್ರಕಟಿಸುವ ಮುನ್ನ ರಾಹುಲ್ ಗಾಂಧಿಯವರು ‘ರಾಜಸ್ಥಾನದ ಒಗ್ಗಟ್ಟಿನ ಬಣ್ಣಗಳು’ಎಂಬ ಅಡಿಬರಹದೊಂದಿಗೆ ಗೆಹ್ಲೋಟ್ ಮತ್ತು ಪೈಲಟ್ ಜೊತೆಗಿನ ತನ್ನ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News