ಇಂದು ಆಸ್ಟ್ರೇಲಿಯ-ಹಾಲೆಂಡ್ ಹಣಾಹಣಿ

Update: 2018-12-14 18:31 GMT

ಭುವನೇಶ್ವರ, ಡಿ.14: ಸತತ ಮೂರನೇ ವಿಶ್ವಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಶನಿವಾರ ಕಳಿಂಗ ಸ್ಟೇಡಿಯಂನಲ್ಲಿ ನಡೆಯುವ ಪುರುಷರ ಹಾಕಿ ವಿಶ್ವಕಪ್‌ನ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಹಾಲೆಂಡ್ ತಂಡವನ್ನು ಎದುರಿಸಲಿದೆ. ವಿಶ್ವದ ನಂ.1 ತಂಡ ಆಸ್ಟ್ರೇಲಿಯ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಯಶಸ್ವಿ ತಂಡವಾಗಿದೆ. 4 ಬಾರಿ ಚಾಂಪಿಯನ್ ಆಗಿರುವ ಪಾಕಿಸ್ತಾನ ಮೊದಲ ಯಶಸ್ವಿ ತಂಡ ಎನಿಸಿಕೊಂಡಿದೆ.

ಆಸ್ಟ್ರೇಲಿಯ 2010 ಹಾಗೂ 2014ರಲ್ಲಿ ಸತತ ಪ್ರಶಸ್ತಿಯನ್ನು ಜಯಿಸಿದ್ದು ಇದೀಗ ಮೂರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ವಿಶ್ವದ ನಂ.4ನೇ ತಂಡ ಹಾಲೆಂಡ್ ಕಠಿಣ ಸವಾಲೊಡ್ಡುವ ಸಾಧ್ಯತೆಯಿದೆ. ಡಚ್ಚರು ಮೂರು ಬಾರಿ ವಿಶ್ವಕಪ್‌ನ್ನು ಜಯಿಸಿದ್ದಾರೆ. 1998ರಲ್ಲಿ ಕೊನೆಯ ಬಾರಿ ವಿಶ್ವಕಪ್ ಒಲಿದಿತ್ತು. ಇದೀಗ ಹಾಲೆಂಡ್ 20 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲು ಎದುರು ನೋಡುತ್ತಿದೆ. ಗುರುವಾರ ನಡೆದ 4ನೇ ಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡವನ್ನು 2-1 ಅಂತರದಿಂದ ಮಣಿಸಿರುವ ಹಾಲೆಂಡ್‌ನ ಆತ್ಮವಿಶ್ವಾಸ ಇಮ್ಮಡಿಯಾಗಿದೆ.

ಈಗಿನ ಫಾರ್ಮ್ ಹಾಗೂ ರ್ಯಾಂಕಿಂಗ್‌ನ್ನು ಪರಿಗಣಿಸಿದರೆ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬರುವ ನಿರೀಕ್ಷೆಯಿದೆ. ಆಕ್ರಮಣಕಾರಿ ಆಟ ಆಸ್ಟ್ರೇಲಿಯದ ಶಕ್ತಿಯಾಗಿದೆ. ಹಾಲೆಂಡ್ ಹೆಚ್ಚಾಗಿ ತಾಳ್ಮೆಯ ಆಟಕ್ಕೆ ಒತ್ತು ನೀಡುತ್ತದೆ. ಇತ್ತೀಚೆಗಿನ ಹೆಡ್-ಟು-ಹೆಡ್ ದಾಖಲೆ ನೋಡಿದರೆ ಉಭಯ ತಂಡಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. 2013ರ ನಂತರ ಆಸ್ಟ್ರೇಲಿಯ-ಹಾಲೆಂಡ್ ತಲಾ 11 ಬಾರಿ ಆಡಿವೆ. ಈ ಪೈಕಿ ಆಸೀಸ್ 5ರಲ್ಲಿ ಜಯ ಸಾಧಿಸಿದ್ದರೆ, 4ರಲ್ಲಿ ಸೋಲು, 1 ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

ಆಸ್ಟ್ರೇಲಿಯ ಟೂರ್ನಿಯಲ್ಲಿ ಮಂದಗತಿಯ ಆರಂಭ ಪಡೆದಿದ್ದರೂ ಟೂರ್ನಿ ಮುಂದುವರಿದಂತೆ ಆತ್ಮವಿಶ್ವಾಸ ಹೆಚ್ಚಿ ಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-1 ಪ್ರಯಾಸದ ಜಯ ದಾಖಲಿಸಿದ್ದ ಆಸೀಸ್ ತಂಡ ಇಂಗ್ಲೆಂಡ್(3-0),ಚೀನಾ(11-0) ಹಾಗೂ ಫ್ರಾನ್ಸ್ ವಿರುದ್ಧ(3-0) ಸುಲಭದ ಜಯ ದಾಖಲಿಸಿತ್ತು.

ಮತ್ತೊಂದೆಡೆ ಹಾಲೆಂಡ್ ತಂಡ ಮಲೇಶ್ಯಾವನ್ನು 7-0 ಅಂತರದಿಂದ ಸೋಲಿಸಿ ಭರ್ಜರಿ ಆರಂಭ ಪಡೆದಿತ್ತು. 2ನೇ ಪಂದ್ಯದಲ್ಲಿ ಜರ್ಮನಿಗೆ 1-4ರಿಂದ ಸೋತಿತ್ತು. ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5-1 ಅಂತರದಿಂದ ಸೋಲಿಸಿ ಕ್ರಾಸ್ ಓವರ್‌ಗೆ ತೇರ್ಗಡೆಯಾಗಿತ್ತು. ಕ್ರಾಸ್ ಓವರ್‌ನಲ್ಲಿ ಕೆನಡಾವನ್ನು 5-0 ಅಂತರದಿಂದ ಕೆಡವಿ ಕ್ವಾರ್ಟರ್ ಫೈನಲ್‌ಗೆ ತಲುಪಿತ್ತು.

2014ರಲ್ಲಿ ಹೇಗ್‌ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲಿ ಹಾಲೆಂಡ್‌ನ್ನು 6-1 ಅಂತರದಿಂದ ಸೋಲಿಸಿದ್ದ ಆಸೀಸ್ ಸತತ2ನೇ ಬಾರಿ ಪ್ರಶಸ್ತಿ ಎತ್ತಿಹಿಡಿದಿತ್ತು. ಶನಿವಾರ ಡಚ್ಚರಿಗೆ 4 ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿದೆ.

ಇಂಗ್ಲೆಂಡ್ ಗೆ ಬೆಲ್ಜಿಯಂ ಎದುರಾಳಿ

ವಿಶ್ವಕಪ್‌ನ ಮೊದಲ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್- ಬೆಲ್ಜಿಯಂ ಹೋರಾಟಕ್ಕಿಳಿಯಲಿವೆ. ಉಭಯ ತಂಡಗಳು ಗ್ರೂಪ್ ಹಂತದಲ್ಲಿ 2ನೇ ಸ್ಥಾನ ಪಡೆದಿದ್ದವು. ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಎದುರಾಳಿಯನ್ನು ಸೋಲಿಸಲು ಸಮರ್ಥವಾಗಿದ್ದವು. ಕ್ವಾ-ಫೈನಲ್‌ನಲ್ಲಿ ಇಂಗ್ಲೆಂಡ್ ಹಾಲಿ ಚಾಂಪಿಯನ್ ಅರ್ಜೆಂಟೀನಕ್ಕೆ ಶಾಕ್ ನೀಡಿದರೆ, ಬೆಲ್ಜಿಯಂ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 2 ಬಾರಿಯ ವಿಶ್ವ ಚಾಂಪಿಯನ್ ಜರ್ಮನಿಯನ್ನು ಸೋಲಿಸಿತ್ತು. ಈ ಎರಡು ತಂಡಗಳು ಕಪ್ಪುಕುದುರೆಗಳಾಗಿದ್ದು, ಫೈನಲ್‌ಗೆ ತಲುಪಲು ಪೈಪೊಟಿ ನಡೆಸಲಿವೆ.

ಸ್ಟ್ರೈಕರ್ ಟಾಮ್ ಬೂನ್ ಬೆಲ್ಜಿಯಂನ ಸ್ಟಾರ್ ಆಟಗಾರ. ಇವರು ತನ್ನ ವಿಶ್ವಕಪ್ ಅಭಿಯಾನದಲ್ಲಿ 4 ಪಂದ್ಯಗಳಲ್ಲಿ 3 ಗೋಲು ಗಳಿಸಿದ್ದಾರೆ. ಕ್ವಾ.ಫೈನಲ್‌ನಲ್ಲಿ ಅರ್ಜೆಂಟೀನಕ್ಕೆ ತೀವ್ರ ಪೈಪೋಟಿ ನೀಡಿದ್ದರು. ಮತ್ತೊಂದೆಡೆ ಮಿಡ್ ಫೀಲ್ಡರ್ ಬ್ಯಾರಿ ಮಿಡ್ಲ್‌ಟನ್ ಇಂಗ್ಲೆಂಡ್ ತಂಡದ ಅತ್ಯಂತ ಹಿರಿಯ ಆಟಗಾರ. 34ರ ಹರೆಯದ ಮಿಡ್ಲ್‌ಟನ್ ಏಕಾಂಗಿಯಾಗಿ ತಂಡಕ್ಕೆ ಮುನ್ನಡೆ ನೀಡುವ ತಾಕತ್ತು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News