‘ಉದಾತ್ತ ಸುಳ್ಳು’ಗಳನ್ನು ನಂಬಲು ನಿರಾಕರಿಸಿದ ಮಹಾತ್ಮ ಮತದಾರ

Update: 2018-12-15 10:36 GMT

ಮಹಾತ್ಮಾಗಾಂಧಿಯನ್ನು ಅಪ್ರಸ್ತುತಗೊಳಿಸಲು ಪ್ರಯತ್ನಿಸುವ, ಗಾಂಧಿಯ ಮತಾಂಧ ಹಂತಕನಿಗೆ ಮಂದಿರ ನಿರ್ಮಿಸಿ ಆತನನ್ನು ವೈಭವೀಕರಿಸುವ ಶಕ್ತಿಗಳು ಪ್ರಬಲಗೊಳ್ಳದಂತೆ ತಡೆಯಬಲ್ಲ ಈ ದೇಶದ ಏಕೈಕ ಶಕ್ತಿ ಎಂದರೆ ಮತದಾರ. ದೇಶದಲ್ಲಿ ತುರ್ತುಸ್ಥಿತಿ ಹೇರಿದವರನ್ನು ಅಧಿಕಾರದಿಂದ ಕೆಳಗಿಳಿಸಿದವರು ಮತ್ತು ಅಧಿಕಾರಕ್ಕೇರಿಸಿದ ಪಕ್ಷಗಳು ಸುದೃಢ ಸರಕಾರ ನೀಡಲು ವಿಫಲರಾದಾಗ ಹಿಂದಿನ ಪಕ್ಷವನ್ನೇ ಮತ್ತೆ ಅಧಿಕಾರಕ್ಕೆ ತಂದವರೂ ಅದೇ ಮತದಾರರು. ಹಾಗೆಯೇ ಸಮಕಾಲೀನ ಭಾರತದಲ್ಲಿ ಪೊಳ್ಳು ಆಶ್ವಾಸನೆಗಳ ಹಾಗೂ ಸುಳ್ಳುಗಳ ಸರಮಾಲೆಯ ನೆರವಿನಿಂದ ಅಧಿಕಾರ ನಡೆಸುವ ಯಾವುದೇ ಪ್ರಭುತ್ವವನ್ನು ಅಧಿಕಾರದಿಂದ ಕೆಳಗಿಳಿಸಬಲ್ಲ ಮಹಾತ್ಮ ಮತದಾರ. ಗಾಂಧಿಯನ್ನು ಮಹಾತ್ಮ ಎಂದು ಒಪ್ಪದ ಶಕ್ತಿಗಳನ್ನು ಕೂಡ ಮಣಿಸಬಲ್ಲ ಶಕ್ತಿ ಇರುವ ಮತದಾರರೇ ಭಾರತದ ಪ್ರಜಾಪ್ರಭುತ್ವಕ್ಕೆ ಇರುವ ಬಹು ದೊಡ್ಡ ಭರವಸೆ. ಪಂಚರಾಜ್ಯಗಳ ಮತದಾರರು ಈ ಭರವಸೆಯನ್ನು ದೃಢಪಡಿಸಿದ್ದಾರೆ.

ಮಹಾ ಸಮರದ ಮುನ್ಸೂಚಿ ಎನ್ನಲಾದ ಮಿನಿ ಸಮರ ಮುಗಿದಿದೆ. ಪಾಠ ಕಲಿಯುವ ಆಸಕ್ತಿ ಸೌಜನ್ಯ ಮತ್ತು ಮನೋಧರ್ಮ ಇರುವವರಿಗೆ ಅದು ಹಲವು ಪಾಠಗಳನ್ನು ಕಲಿಸಲಿದೆ. ‘ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ಸರಿ’ ಎಂಬ ಮಾತು ಎಲ್ಲ ಯುದ್ಧಗಳಲ್ಲೂ ಸರಿಯಾಗುವುದಿಲ್ಲ ಎಂಬುದು ತತ್ಕಾಲಕ್ಕಾದರೂ ಸಾಬೀತಾಗಿದೆ.

ನಾವು ಕೆಲವರನ್ನು ಕೆಲವು ವೇಳೆ ಮೂರ್ಖರನ್ನಾಗಿಸಬಹುದು; ಆದರೆ, ಎಲ್ಲರನ್ನೂ ಯಾವಾಗಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂಬುದೂ ಸ್ಪಷ್ಟವಾಗಿದೆ. ದೇಶದ ಬೆನ್ನೆಲುಬಾದ ರೈತರು ‘‘ನಮ್ಮನ್ನು ಕಡೆಗಣಿಸಿ ಯಾರೂ, ಯಾವ ರಾಜಕೀಯ ಸಿದ್ಧಾಂತವೂ ನಮ್ಮನ್ನು ಆಳಲಾರ’’ವೆಂದು ಮತ್ತೊಮ್ಮೆ ಡಂಗುರ ಸಾರಿದ್ದಾರೆ. ಹಾಗೆಯೇ ಹಸಿವಿನ ಮುಂದೆ ರಾಜಕೀಯ ರೆಟರಿಕ್, ಭೋರ್ಗರೆಯುವ ಭಾಷಣಗಳು, ಒಣ ಆಶ್ವಾಸನೆಗಳ ಸುರಿಮಳೆ ಮತ್ತು ಕೋಟಿ ಕೋಟಿ ನಿರುದ್ಯೋಗಿ ಯುವಕರ ಮುಂದೆ ಸುಂದರ ಮಂದಿರದ ವರ್ಣರಂಜಿತ ಚಿತ್ರ ಕೆಲಸ ಮಾಡುವುದಿಲ್ಲ ಎಂದು ಖಾವಿ ಹೇಳಿದಂತೆ ಕುಣಿಯುವ ರಾಜಕಾರಣಿಗಳಿಗೆ ಮನವರಿಕೆ ಮಾಡಿಸಲಾಗಿದೆ.

ಈಗ ನಡೆದಿರುವುದು ಆಕಸ್ಮಿಕವಲ್ಲ; ಐತಿಹಾಸಿಕ. ಹದಿನೈದು ವರ್ಷಗಳ ಕಾಲ ಒಂದು ರಾಜ್ಯದಲ್ಲಿ ಆಡಳಿತ ನಡೆಸಿದ್ದ ಒಂದು ರಾಜಕೀಯ ಪಕ್ಷವನ್ನು ಮತದಾರರು, ಮುಖ್ಯವಾಗಿ ರೈತರು, ತಿರಸ್ಕರಿಸುವುದು ಸಾಮಾನ್ಯ ಸಂಗತಿಯಲ್ಲ. ಯಾಕೆಂದರೆ ಐಟಿ, ಬಿಟಿ ‘ಕ್ರಾಂತಿ’ಯಾದ ಮೇಲೆ ಈ ದೇಶದಲ್ಲಿ ಬೇಸಾಯ ಸಾಯತೊಡಗಿ, ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಬೇಕಾಯಿತು. ಸಾವಿನ ಈ ಸರಣಿ ಇನ್ನೂ ನಿಂತಿಲ್ಲ. ನೀವು ಈ ದೇಶದ ಕೋಮುಗೊಳಿಸುವಿಕೆಯಲ್ಲಿ ಪ್ರಧಾನ ಪಾತ್ರವಹಿಸಿರುವ ಸ್ವ-ಸಂತೃಪ್ತ ಮಧ್ಯಮವರ್ಗದ ಯಾವುದೇ ಹತ್ತು ಮಂದಿಯ ಬಳಿ ರೈತರ ಸಮಸ್ಯೆ ಸಂಕಷ್ಟ ಯಾತನೆಗಳ ಬಗ್ಗೆ ಮಾತಾಡಿನೋಡಿ. ನಿಮಗೆ ಎಂತಹ ಪ್ರತಿಕ್ರಿಯೆಗಳು ಸಿಗುತ್ತವೆ ಎಂದು ತಿಳಿದಾಗ, ನೀವು ಸೂಕ್ಷ್ಮಸಂವೇದಿಗಳಾದರೆ, ನಿಮಗೆ ಆಶ್ಚರ್ಯವಾಗದೆ ಇರುವುದಿಲ್ಲ. ಹತ್ತರಲ್ಲಿ ಒಂಬತ್ತು ಮಂದಿ ನಿಮ್ಮ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವುದೇ ಇಲ್ಲ. ಕೇಳಿಸಿಕೊಂಡರೂ, ರೈತರ ಸಾಲಮನ್ನಾ ಬಗ್ಗೆ ಸಮ್ಮತಿಯ, ಅನುಕಂಪದ ಮಾತುಗಳನ್ನಾಡುವುದಿಲ್ಲ. ‘‘ರೈತರ ಸಮಸ್ಯೆಗಳಿಗೆ ಅವರೇ ಕಾರಣ; ಅವರೇ ಜವಾಬ್ದಾರಿ. ನಾವು ಕಟ್ಟುವ ತೆರಿಗೆ ದುಡ್ಡಿನಿಂದ ಅವರ ಸಾಲಮನ್ನಾ ಮಾಡುವುದಾದರೆ, ನಾವು ಮಾಡುವ ಸಾಲವನ್ನು ಯಾರು ಮನ್ನಾ ಮಾಡುವುದು?’’ ಎಂಬ ಉಡಾಫೆಯ ಮಾತುಗಳು ಕೇಳಿ ಬರುತ್ತವೆ. ‘‘ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೀವು ಸೂಪರ್ ಮಾರ್ಕೆಟಿಗೆ ಹೋದಾಗ ಭವಿಷ್ಯದಲ್ಲಿ ಅಲ್ಲಿ ಅಕ್ಕಿ, ರಾಗಿ, ಜೋಳ, ಗೋಧಿ ಸಿಗದೇ ಇರಬಹುದು. ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ತಿಂದು ಬದುಕಲಿಕ್ಕಾಗುತ್ತದೆಯೇ?’’ ಎಂದು ಪ್ರಶ್ನಿಸಿ ನೋಡಿ. ನಿಮಗೆ ಸಿಗುವ ಉತ್ತರ: ‘‘ಇಲ್ಲಿಯ ರೈತರು ಅಕ್ಕಿ ಬೆಳೆಯದಿದ್ದರೆ ನಾವು ಫಾರಿನ್‌ನಿಂದ ಇಂಪೋರ್ಟ್ ಮಾಡಿಕೊಳ್ಳುತ್ತೇವೆ’’ ಎಂಬ ಬೇಜವಾಬ್ದಾರಿಯ ಮಾತುಗಳು.

ಹಿಂದುತ್ವ, ಗೋರಕ್ಷಣೆ, ರಾಮಮಂದಿರ ಎಂಬ ಮಾತುಗಳಿಂದ ಉದ್ರೇಕಗೊಳ್ಳುವ, ಉನ್ಮಾದಕ್ಕೊಳಗಾಗುವ, ಅಂತರ್‌ಜಾಲದಲ್ಲಿ ದಿನ ಬೆಳಗಾದರೆ ದೇಶದ ಪ್ರಮುಖ ಸಮುದಾಯಗಳ ನಡುವೆ ದ್ವೇಷಹರಡುವ ನೂರಾರು ಸಂದೇಶಗಳನ್ನು ಕಳುಹಿಸುವುದನ್ನೇ ಒಂದು ಹವ್ಯಾಸ ಮಾಡಿಕೊಂಡಿರುವ ಇಂತಹ ಜನರ ಕಾಳಜಿಗಳು ತಮ್ಮದಲ್ಲವೆಂದು ರೈತರು, ನಿರುದ್ಯೋಗಿ ಯುವಕರು ಜೋರಾಗಿ ಕೂಗಿ ಹೇಳಲಾರಂಭಿಸಿದ್ದಾರೆ ಎಂಬುದೇ ಈಗ ಸಮಾಧಾನದ ಸಂಗತಿ.
ಗ್ರೀಕ್ ತತ್ವಜ್ಞಾನಿ ಪ್ಲೇಟೋ ಹೇಳಿದಂತೆ, ಯಾವುದೇ ಒಂದು ಪ್ರಭುತ್ವ ಆಳ್ವಿಕೆ ನಡೆಸುವುದಕ್ಕಾಗಿ ‘ಉದಾತ್ತ ಸುಳ್ಳು’ಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಕಳೆದ ಸಾರ್ವತ್ರಿಕ ಚುನಾವಣೆಗಳ ಮೊದಲು ಮತ್ತು ನಂತರದ ವರ್ಷಗಳಲ್ಲಿ ಇಂತಹ ಹಲವು ಉದಾತ್ತ ಸುಳ್ಳುಗಳನ್ನು ಸೃಷ್ಟಿಸಲಾಯಿತು. ಅಷ್ಟೇ ಅಲ್ಲ, ಸಮಾಜದ ಮಾಧ್ಯಮಗಳ ಮೇಲೆ ಸರ್ವಸ್ವಾಮ್ಯ ಸ್ಥಾಪಿಸಿ ಈ ಸುಳ್ಳುಗಳನ್ನು ಜನರು ನಂಬುವಂತೆ ನೋಡಿಕೊಳ್ಳಲಾಯಿತು. ‘‘ನಾವು ಅಧಿಕಾರಕ್ಕೆ ಬಂದರೆ ಹದಿನೈದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್’’ ಎಂದು ಕೆಲವರು ಹೇಳಿದರು. ಇನ್ನು ಕೆಲವರು ‘‘ಇನ್ನೂರು ಲಕ್ಷ ಜನರಿಗೆ ಉದ್ಯೋಗ ಮತ್ತು ಪ್ರತಿ ಕುಟುಂಬದ ಖಾತೆಗೆ ‘ಫಾರಿನ್’ನಿಂದ ತರುವ ಕಪ್ಪು ಹಣದಲ್ಲಿ ಹದಿನೈದು ಲಕ್ಷ ರೂಪಾಯಿ’’ ಎಂದಾಗ ಎಲ್ಲವನ್ನೂ ನಾವು ನಂಬಿದೆವು.

ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ‘‘ಮುಂದಿನ ಆರೇ ತಿಂಗಳುಗಳಲ್ಲಿ ದೇಶದಲ್ಲಿ ಕಪ್ಪು ಹಣ ನಿರ್ಮೂಲನ ಮಾಡಿಬಿಡುತ್ತೇವೆ’’ ಎಂದಾಗಲೂ ನಾವು ಮುಗ್ಧ ಭಾರತೀಯರು ನಂಬಿದೆವು. ಯಾಕೆಂದರೆ ‘‘ನಿನ್ನ ನಂಬಿ ಕೆಟ್ಟವರಿಲ್ಲವೋ’’ ಎಂಬ ದಾಸರ ಹಾಡನ್ನು ಶತಮಾನಗಳ ಕಾಲ ಹಾಡುತ್ತ ಬಂದವರು ನಾವು. ಆದರೆ ಅಮಾನ್ಯಗೊಂಡ ಒಟ್ಟು ‘ಕಪ್ಪು’ ನೋಟುಗಳ ಶೇ. 99 ನೋಟುಗಳು ‘ಮಾತೃಧರ್ಮ’ಕ್ಕೇ ಮರಳಿ, ‘ಮಾತೃಧರ್ಮ’ದ ಕೇಂದ್ರವಾದ ರಿಸರ್ವ್ ಬ್ಯಾಂಕ್‌ಗೆ ಬಂದು, ‘‘ನಾವು ಬಂದಿದ್ದೇವೆ ಹಿಂದೆ’’ ಎಂದವು. ಕಪ್ಪು ಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ಯಾರ್ಯಾರು ಯಾವ್ಯಾವ ಸಂಸ್ಥೆಗಳು ಹೇಗೆ ಹೇಗೆ ಭಾಗಿಯಾದವು ಮತ್ತು ಹೇಗೆ ಹೇಗೆ ‘ಫಿಫ್ಟಿ ಫಿಫ್ಟಿ’ ‘ಫಾರ್ಟಿ ಸಿಕ್ಸ್‌ಟಿ’ ದಮಾಶಯದಲ್ಲಿ ಪರಸ್ಪರ ಶ್ರೀಮಂತರಾಗಿ ಸಮಾಜೋದ್ಧಾರ ಮಾಡಿದರೆಂದು ಪಿಸುಮಾತಿನ ಸ್ಥಳೀಯ ಕಥಾನಕಗಳು ವೌಖಿಕ ಪರಂಪರೆಯಲ್ಲಿ ದಾಖಲಾಗಿವೆ. ಕಪ್ಪು ಹಣ ಇದ್ದವರು ಹಣ ಕಳೆದುಕೊಳ್ಳಲಿಲ್ಲ ಅವರಿಗೆ ಅದನ್ನು ಕೂಡಿಡಲು ಬೇಕಾದ ಸ್ಥಳಾವಕಾಶ ಮೊದಲಿಗಿಂತ (500 ಕಟ್ಟುಗಳಿಗಿಂತ) ನಾಲ್ಕನೇ ಒಂದರಷ್ಟೇ (2000ದ ಕಟ್ಟುಗಳು) ಸಾಕಾಯಿತು. ನೋಟು ರದ್ಧತಿ, ಜಿಎಸ್‌ಟಿ ಎಂಬ ಎರಡು ಹೊಡೆತಗಳಿಗೆ ಸಿಕ್ಕಿ ಸಾವಿರಾರು ಜನ ಹೈರಾಣಾದರು, ಹಲವರು ಹೆಣವಾದರು. ‘ಎಲ್ಲ ವ್ಯವಹಾರಗಳೂ ಆನ್‌ಲೈನ್‌ನಲ್ಲಿ’ ಎಂದ ಪರಿಣಾಮವಾಗಿ ಸಣ್ಣ ಪುಟ್ಟ ಊರುಗಳಲ್ಲಿ ತಾಲೂಕು ಹೋಬಳಿ ಮಟ್ಟಗಳಲ್ಲಿ ರಿಯಲ್ ಎಸ್ಟೇಟ್ ಅರೆಜೀವವಾಗಿ ಅಡ್ಡಮಲಗಿತು.

ಒಂದು ಬೈಕ್ ಕೈಯಲ್ಲೊಂದು ಮೊಬೈಲ್ ಹಿಡಿದುಕೊಂಡು ರಿಯಲ್ ಎಸ್ಟೇಟ್ ಏಜೆಂಟ್‌ಗಳಾಗಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ನನ್ನೂರಿನ ನೂರಾರು ಮಂದಿ ನಿರುದ್ಯೋಗಿಗಳಾದರು. ಕಟ್ಟಡ ನಿರ್ಮಾಣ ಕಾಮಗಾರಿಯನ್ನೇ ನಂಬಿ ಬಂದಿದ್ದ ನೂರಾರು ಕಾರ್ಮಿಕರು ಉದ್ಯೋಗವಿಲ್ಲದೆ ಮರಳಿ ಊರಿಗೆ ಹೋಗಬೇಕಾಯಿತು. ಇಂತಹ ಕಾರ್ಮಿಕರು, ಬೆಳಗಾದೊಡನೆ ಬಂದು ಸೇರುತ್ತಿದ್ದ ಕೇಂದ್ರ ಸ್ಥಳವೊಂದು ಬಹಳ ಸಮಯ ಬಿಕೋ ಎನ್ನುತ್ತಿತ್ತು. ಇನ್ನೊಂದೆಡೆ ಸಂವಿಧಾನವನ್ನೇ ಬದಲಿಸುವ ಮಟ್ಟದ, ದೇಶದ ಪ್ರಜಾಪ್ರಭುತ್ವದ ಬುಡಕ್ಕೇ ಕೊಡಲಿಯೇಟು ಹಾಕುವಂತಹ ಮಾತುಗಳು ಕೇಳಿಬಂದವು. ಚುನಾವಣೆಯೇ ಇಲ್ಲದೆ ಪರಮಾಧಿಕಾರ ಪಡೆಯುವಂತಹ ಒಂದು ಸಂಘಟನೆಯ ಜನ ಅಧಿಕಾರದ ಆಯಕಟ್ಟಿನ ಬಹುಕೇಂದ್ರಗಳಲ್ಲಿ ಕೂತು ಸಜ್ಜನರನ್ನು, ಪ್ರಶ್ನೆ ಕೇಳುವವರನ್ನು, ಭಿನ್ನಮತೀಯರನ್ನು ಹಾಗೂ ಭಿನ್ನ ವಿಚಾರಧಾರೆ ಹೊಂದಿರುವವರನ್ನು ಬೆದರಿಸುವ ಸ್ಥಿತಿ ಬರುವುದು ಯಾವುದೇ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ‘ಯಥಾಕಾಮಂ ಪ್ರಶ್ನಾನ್ ಪೃಚ್ಛೇತಾ’ (ಎಷ್ಟು ಬೇಕಾದರೂ ಪ್ರಶ್ನೆಗಳನ್ನು ಕೇಳು) ಎಂದು ವಿಶ್ವಕ್ಕೆ ಸಾರಿದ ಭಾರತೀಯ ಆರ್ಷೇಯ ಪರಂಪರೆಯ ಉಪನಿಷತ್ ವಾಕ್ಯವನ್ನು ಮರೆತ ಜನ ಭಿನ್ನಮತ, ಸಂವಾದದಲ್ಲಿ ವಿಶ್ವಾಸವಿಲ್ಲದಂತೆ ನಡೆದುಕೊಂಡರು. ಯಾವುದೇ ಪ್ರಭುತ್ವ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮಾಡುವ ಮೊದಲ ಕೆಲಸವೆಂದರೆ ಜನರ ಗಮನವನ್ನು ವೈಫಲ್ಯಗಳಿಂದ, ಅವರನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವುದು. ದೇಶದ ಮೇಲೆ ಶತ್ರು ರಾಷ್ಟ್ರದ ದಾಳಿ, ಗಡಿಯಲ್ಲಿ ಆತಂಕ, ಯುದ್ಧದ ಸಾಧ್ಯತೆ, ರಾಷ್ಟ್ರಕ್ಕೆ ಗಂಡಾಂತರ ಇತ್ಯಾದಿ ಭಾವೋತ್ಪಾದಕ ಪದಪುಂಜಗಳನ್ನು ಬಳಸಿ ಜನರ ಬಾಯಿಮುಚ್ಚಿಸುವುದು. ‘‘ನನಗೆ ನೌಕರಿ ಕೊಡಿ’’ ಎಂದವನಿಗೆ, ‘‘ದೇಶ ಅಪಾಯದಲ್ಲಿರುವಾಗ ಕೋವಿ ಹಿಡಿದು ಗಡಿಗೆ ಹೋರಾಡಲು ಹೋಗುವ ಬದಲು, ನೌಕರಿ ಕೇಳುತ್ತೀಯಾ? ನೀನೆಂಥ ದೇಶಭಕ್ತ?!’’ ಎಂದರೆ ಅವ ಸುಮ್ಮನಾಗುತ್ತಾನೆ.

ಅಥವಾ ‘‘ನಮ್ಮ ಧರ್ಮಕ್ಕೆ ಅಪಾಯ ಬಂದಿರುವಾಗ ಊರೂರಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪೂಜಾಕ್ಷೇತ್ರಗಳನ್ನು ಕಟ್ಟಿಸುವುದು ಬಿಟ್ಟು ವೇತನ, ಮುಂಭಡ್ತಿ ಎನ್ನುತ್ತೀಯಾ?’’ ಎಂದು ಧರ್ಮೋನ್ಮಾದ ಸೃಷ್ಟಿಸಿದರೆ ಅವ ವೌನಿಯಾಗುತ್ತಾನೆ. ರಾಷ್ಟ್ರಪಿತ ಮಹಾತ್ಮಾಗಾಂಧಿಯ ನೇತೃತ್ವದಲ್ಲಿ ಸಾವಿರಾರು ಮಂದಿ ಹೋರಾಡಿ ಜೀವ ತೆತ್ತು ಸ್ವಾತಂತ್ರ, ಸಮಾನತೆಯ ಒಂದು ಆಡಳಿತ ವ್ಯವಸ್ಥೆಯನ್ನು ಪಡೆದ ಮಹಾನ್ ಭಾರತದಲ್ಲಿ ಮಾಜಿ ಪ್ರಧಾನಿಯೊಬ್ಬರ ಪತ್ನಿಯನ್ನು ‘ವಿಧವೆ’ಯೆಂದು ತುಂಬ ಹಗುರವಾಗಿ ಹಂಗಿಸಿದ ಮತ್ತು ವಿಧವಾ ವೇತನವನ್ನು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ವಿಧವೆಯರೇ ತಿನ್ನುತ್ತಾರೆ ಎಂಬ ಮಟ್ಟದ ಮಾತುಗಳೂ ಕೇಳಿ ಬಂದವು. ಇವು ಭಾರತದ ಸಾಮಾಜಿಕ ಚೌಕಟ್ಟಿನಲ್ಲಿ ಅಸಹಾಯಕ ಮಹಿಳೆಯರು ವಿಧವೆಯರಾಗಿ ಪಡುವ ಪಾಡನ್ನು ಕೊನೆಗೊಳಿಸಿದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಹೀಯಾಳಿಸಿ, ಪ್ರಜಾಪ್ರಭುತ್ವವನ್ನು ಅಧಃಪತನದತ್ತ ಕೊಂಡೊಯ್ಯಲು ಕಟಿಬದ್ಧರಾದವರು ಮಾತ್ರ ಆಡಬಹುದಾದ ಮಾತು. ಮಹಿಳೆಯರ ಸಮಾನತೆಯನ್ನು ಧಿಕ್ಕರಿಸಿ ಮಹಿಳೆಯ ವೈಧವ್ಯವನ್ನು ತನ್ನ ಸ್ವಾರ್ಥಕ್ಕಾಗಿ ಸಮರ್ಥಿಸುವ, ವೈಭವೀಕರಿಸುವ ಪುರುಷ ಪ್ರಧಾನ ಯಜಮಾನಿಕೆ (hegemony) ಸಂಸ್ಕೃತಿಯ ದಾರ್ಷ್ಟದ ಮಾತು ಇದು.

ಮಹಾತ್ಮಾಗಾಂಧಿಯನ್ನು ಅಪ್ರಸ್ತುತ ಗೊಳಿಸಲು ಪ್ರಯತ್ನಿಸುವ, ಗಾಂಧಿಯ ಮತಾಂಧ ಹಂತಕನಿಗೆ ಮಂದಿರ ನಿರ್ಮಿಸಿ ಆತನನ್ನು ವೈಭವೀಕರಿಸುವ ಶಕ್ತಿಗಳು ಪ್ರಬಲಗೊಳ್ಳದಂತೆ ತಡೆಯಬಲ್ಲ ಈ ದೇಶದ ಏಕೈಕ ಶಕ್ತಿ ಎಂದರೆ ಮತದಾರ. ದೇಶದಲ್ಲಿ ತುರ್ತುಸ್ಥಿತಿ ಹೇರಿದವರನ್ನು ಅಧಿಕಾರದಿಂದ ಕೆಳಗಿಳಿಸಿದವರು ಮತ್ತು ಅಧಿಕಾರಕ್ಕೇರಿಸಿದ ಪಕ್ಷಗಳು ಸುದೃಢ ಸರಕಾರ ನೀಡಲು ವಿಫಲರಾದಾಗ ಹಿಂದಿನ ಪಕ್ಷವನ್ನೇ ಮತ್ತೆ ಅಧಿಕಾರಕ್ಕೆ ತಂದವರೂ ಅದೇ ಮತದಾರರು. ಹಾಗೆಯೇ ಸಮಕಾಲೀನ ಭಾರತದಲ್ಲಿ ಪೊಳ್ಳು ಆಶ್ವಾಸನೆಗಳ ಹಾಗೂ ಸುಳ್ಳುಗಳ ಸರ ಮಾಲೆಯ ನೆರವಿನಿಂದ ಅಧಿಕಾರ ನಡೆಸುವ ಯಾವುದೇ ಪ್ರಭುತ್ವವನ್ನು ಅಧಿಕಾರದಿಂದ ಕೆಳಗಿಳಿಸಬಲ್ಲ ಮಹಾತ್ಮ ಮತದಾರ. ಗಾಂಧಿಯನ್ನು ಮಹಾತ್ಮ ಎಂದು ಒಪ್ಪದ ಶಕ್ತಿಗಳನ್ನು ಕೂಡ ಮಣಿಸಬಲ್ಲ ಶಕ್ತಿ ಇರುವ ಮತದಾರರೇ ಭಾರತದ ಪ್ರಜಾಪ್ರಭುತ್ವಕ್ಕೆ ಇರುವ ಬಹು ದೊಡ್ಡ ಭರವಸೆ. ಪಂಚರಾಜ್ಯಗಳ ಮತದಾರರು ಈ ಭರವಸೆಯನ್ನು ದೃಢಪಡಿಸಿದ್ದಾರೆ.

(bhaskarrao599@gmail.com)

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News