ಪ್ರಭಾವಿ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳಿಗೆ ಫರೀದ್‌ನಿಂದ ಲಂಚ: ರವಿ ಕೃಷ್ಣಾರೆಡ್ಡಿ ಗಂಭೀರ ಆರೋಪ

Update: 2018-12-17 15:48 GMT

ಬೆಂಗಳೂರು, ಡಿ.17: ಆ್ಯಂಬಿಡೆಂಟ್ ಕಂಪೆನಿಯಿಂದ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ತನಿಖಾ ಅಧಿಕಾರಿಗಳು ಹಣ ಪಡೆದಿರುವುದಾಗಿ ಫರೀದ್ ನನಗೆ ತಿಳಿಸಿದ್ದಾನೆ ಎಂದು ಎಸಿಪಿ ವೆಂಕಟೇಶ್ ಪ್ರಸನ್ನರವರು ನೀಲಮಣಿ ರಾಜುರವರಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೆಲ್ಲದರ ಪೂರ್ಣ ಮಾಹಿತಿ ನನಗೆ ತಿಳಿದಿದ್ದು, ಒಂದು ಸುಳ್ಳು ದೂರನ್ನು ನೀಡುವ ಮೂಲಕ ವಿಜಯ್ ತಾತಾ ಇಡೀ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾನೆ. ಇದರ ಕುರಿತು ಎಲ್ಲಿಯೂ ಮಾತನಾಡಬಾರದೆಂದು ನನ್ನ ಬಾಯಿ ಮುಚ್ಚಿಸಲಾಯಿತು ಎಂದು ಎಸಿಪಿ ವೆಂಕಟೇಶ್ ಪ್ರಸನ್ನ ಪತ್ರದಲ್ಲಿ ತಿಳಿಸಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದರು.

ಪತ್ರದ ಸಾರಾಂಶ: ಆ್ಯಂಬಿಡೆಂಟ್ ಕಂಪೆನಿಯ ಬಹುಕೋಟಿ ವಂಚನೆಯ ತನಿಖೆಯ ಅವಕಾಶವನ್ನು ನನಗೆ(ಎಸಿಪಿ ವೆಂಕಟೇಶ ಪ್ರಸನ್ನ) ನೀಡಿದ್ದರು. ತನಿಖಾ ಸಮಯದಲ್ಲಿ ಪ್ರಕರಣದ ಪ್ರಮುಖ ಆರೋಪಿ ಫರೀದ್‌ನನ್ನು ವಿಚಾರಿಸಿದಾಗ, 2017ರಲ್ಲಿ ಸಮಯ ಸುದ್ದಿ ವಾಹಿನಿಯಲ್ಲಿ ಈತನ ಕಂಪೆನಿಯ ವಿರುದ್ಧ ಸುಳ್ಳು ಸುದ್ದಿ ಪ್ರಚಾರ ಮಾಡುವ ಮೂಲಕ, ವಾಹಿನಿಯ ಮಾಲಕ ವಿಜಯ್ ತಾತಾ ಫರೀದ್‌ನಿಂದ 200 ಕೋಟಿ ರೂ. ಬೇಡಿಕೆ ಇಟ್ಟಿರುತ್ತಾನೆ. ಆದರೆ, 2 ಕೋಟಿ ರೂ. ಹಣವನ್ನು ಮಾತ್ರ ನೀಡುತ್ತೇನೆಂದು ಒಪ್ಪಿರುತ್ತೇನೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ.

ಆದರೆ, ವಿಜಯ್ ತಾತಾ ತನಗೆ 2 ಕೋಟಿ ರೂ. ಬೇಡ. ನನ್ನಿಂದ 100 ಫ್ಲಾಟುಗಳನ್ನು ಖರೀದಿಸುವಂತೆ ತಿಳಿಸಿದ್ದು, ಅದರಂತೆ ಫರೀದ್ ಒಪ್ಪಿಕೊಂಡು ನಂತರ 83 ಫ್ಲಾಟ್‌ಗಳಿಗೆ ಆಗ್ರಿಮೆಂಟ್‌ಅನ್ನು ಮಾಡಿಕೊಂಡು, 36 ಕೋಟಿ ರೂ.ಗಳನ್ನು ತನ್ನ ಖಾತೆಯಿಂದ ವಿಜಯ ತಾತಾನ ಸಂಚಯ ಎಂಬ ಹೆಸರಿನ ಸಂಸ್ಥೆಯ ಖಾತೆಗೆ ವರ್ಗಾವಣೆ ಮಾಡಿದ್ದಾಗಿ ಹಾಗೂ 2 ಕೋಟಿ ರೂ. ನಗದು ನೀಡಿದ್ದಾಗಿ ಫರೀದ್ ತಿಳಿಸಿರುತ್ತಾನೆ.

ಆ್ಯಂಬಿಡೆಂಟ್ ಹಾಗೂ ಸಂಚಯ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ 36 ಕೋಟಿ ರೂ. ಹಣ ವರ್ಗಾವಣೆ ಮಾಡಿರುವುದು ತಿಳಿಯಿತು. ಈ ಬಗ್ಗೆ ವಿಜಯ್ ತಾತಾನನ್ನು 2-3 ಬಾರಿ ವಿಚಾರಣೆ ಮಾಡಲಾಗಿತ್ತು. ಈತನ ವಿರುದ್ಧ ಆರೆಂಜ್ ಪ್ರಾಪರ್ಟಿಸ್ ಎಂಬ ಹೆಸರಿನಲ್ಲಿ ಜನರಿಗೆ ವಿಲ್ಲಾಗಳನ್ನು ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಬಗ್ಗೆ 140ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಜನರಿಗೆ ಹಣ ಕೊಡುತ್ತೇನೆ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ ಈತ ಬಂಧನವಾಗದೆ ಸುರಕ್ಷಿತವಾಗಿದ್ದಾನೆ ಎಂದು ಪತ್ರದಲ್ಲಿ ವೆಂಕಟೇಶ್ ಉಲ್ಲೇಖಿಸಿದ್ದಾರೆ.

ಬೆದರಿಸುವ ತಂತ್ರ: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜುಗೆ ವಿಜಯ್ ತಾತಾ, ನಾನು ಹಣ ಪಡೆದಿರುವುದಾಗಿ ಹಾಗೂ ನಾನು ಆತನಿಗೆ ಬೆದರಿಕೆ ಒಡ್ಡಿದ್ದಾಗಿ ದೂರು ನೀಡಿದ್ದಾನೆ. ನನಗೂ ವಿಜಯ್ ಟಾಟಾನಿಗೂ ಮೊಬೈಲ್ ಫೋನಿನಲ್ಲಿ ಬಿಸಿಬಿಸಿ ಸಂಭಾಷಣೆ ಆಗಿರುವುದು ನಿಜ. ಆದರೆ, ಧ್ವನಿಮುದ್ರಣವನ್ನು ತಮಗೆ ಸಲ್ಲಿಸುತ್ತಿದ್ದೇನೆ. ಇದರಲ್ಲಿ ಎಲ್ಲಿಯೂ ನಾನು ಹಣ ಕೇಳಿಲ್ಲ. ವಿಜಯ ತಾತಾ ಈ ರೀತಿ ಸುಳ್ಳು ದೂರನ್ನು ನೀಡಿ ತನಿಖಾಧಿಕಾರಿಗಳನ್ನು ಬೆದರಿಸುವ ತಂತ್ರ ಮಾಡಿದ್ದಾನೆ.

ಈತನ ಸಂಸ್ಥೆಯ ಮೇಲೆ ಈ ಹಿಂದೆ ಐಟಿ ದಾಳಿಯಾದಾಗ, ಐಟಿ ಅಧಿಕಾರಿಗಳಾದ ಸುನೀಲ್ ಗೌತಮ್, ಸಮರಿಕ್ ಸ್ಪೇನ್ ಹಾಗೂ ಬಾಲಕೃಷ್ಣ ಎಂಬುವವರ ಮೇಲು ಇದೇ ರೀತಿ ಹಣ ಕೇಳಿದರೆಂದು ಸುಳ್ಳು ಆರೋಪ ಮಾಡಿದ್ದ. ಈ ಬಗ್ಗೆ ಐಟಿ ಅಧಿಕಾರಿಗಳು ಈತನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆಂದು ತಿಳಿದು ಬಂದಿದೆ.

ಫರೀದ್ ನನ್ನ ಮುಂದೆ ಹೇಳಿಕೆ ನೀಡಿದ್ದು ಅದರಲ್ಲಿ ವಿಜಯ್ ತಾತಾ ಆತನಿಗೆ ಹೇಗೆ ಬ್ಲಾಕ್ ಮೇಲ್ ಮಾಡಿದ್ದ ಎಂಬುದನ್ನು ತಿಳಿಸಿದ್ದು, ಅದನ್ನು ನಾನು ವಿಡಿಯೋ ಚಿತ್ರೀಕರಣ ಮಾಡಿಸಿಕೊಂಡಿರುತ್ತೇನೆ. ಹೀಗಿದ್ದರೂ ವಿಜಯ ತಾತಾನನ್ನು ಬಂಧಿಸದೆ ಆತ ನೀಡಿದ ದೂರಿನ ಮೇರೆಗೆ ನನ್ನನ್ನು ಬೆಂಗಳೂರಿನ ಸಿಸಿಆರ್‌ಬಿಗೆ ಒಒಡಿ ಮೇಲೆ ವರ್ಗಾಹಿಸಲಾಗಿದೆ. ಹಣ ಪಡೆದ ವಿವಿಧ ವ್ಯಕ್ತಿಗಳ ಮಾಹಿತಿಯನ್ನು ನಾನು ಪಡೆದಿದ್ದೆ. ಆದರೆ, ವಂಚಕನೊಬ್ಬನ ಮಾತು ಕೇಳಿ ತನಿಖಾಧಿಕಾರಿಯನ್ನು ಬದಲಾಯಿಸಿದ್ದು ಅತ್ಯಂತ ಖೇದಕರ. ಆ್ಯಂಬಿಡೆಂಟ್ ಕಂಪೆನಿಯಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಹಣ ತೊಡಗಿಸಿದ್ದಾರೆ. ವಂಚನೆಗೆ ಒಳಗಾದ ಜನರಿಗೆ ಹಣ ಕೊಡಿಸುವ ಬಗ್ಗೆ ನಾನು ನಡೆಸಿದ ಎಲ್ಲಾ ಪ್ರಯತ್ನಗಳೂ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

ಈ ರೀತಿಯ ಸುಳ್ಳು ದೂರು ನೀಡಿದಾಗ ಕನಿಷ್ಠ ಪ್ರಾಥಾಮಿಕ ವಿಚಾರಣೆಯನ್ನೂ ನಡೆಸದೆ ವರ್ಗಾವಣೆ ಮಾಡಿದ್ದರಿಂದ ಈ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಎಲ್ಲಾ ಪೊಲೀಸ್ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿದೆ. ಈ ವಂಚಕ ವಿಜಯ ತಾತಾ, ವ್ಯಕ್ತಿಯೊಬ್ಬರ ಬಳಿ ಮಾತನಾಡುವಾಗ ವೆಂಕಟೇಶ್ ಪ್ರಸನ್ನ ಹಣ ಕೇಳಿಲ್ಲ ಎಂದು ಮಾತನಾಡಿದ ಧ್ವನಿ ಮುದ್ರಿಕೆಯನ್ನು ಹಾಗೂ ಪ್ರಕರಣದಲ್ಲಿ ತಾತಾನ ಏಜೆಂಟರಾದ ಝಾಯಿದ್ ಹಾಗೂ ಫಾರೂಖ್ ಹೇಗೆಲ್ಲ ಸಂಚು ಮಾಡಿದ್ದಾರೆಂಬ ಧ್ವನಿ ಮುದ್ರಿಕೆಯನ್ನು ಪತ್ರದೊಂದಿಗೆ ನೀಲಮಣಿಯವರಿಗೆ ವೆಂಕಟೇಶ್ ಪ್ರಸನ್ನ ನೀಡಿದ್ದಾರೆ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಬಹಿರಂಗ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News