ಛತ್ತೀಸ್‌ಗಢದಲ್ಲೂ ರೈತರ ಸಾಲ ಮನ್ನಾ

Update: 2018-12-18 03:45 GMT

ರಾಯಪುರ, ಡಿ. 18: ಅಧಿಕಾರ ಸ್ವೀಕರಿಸಿದ ಎರಡೇ ಗಂಟೆಗಳಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಿದ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಮಾದರಿಯಲ್ಲಿ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಕೂಡಾ 6100 ಕೋಟಿ ರೂಪಾಯಿ ಮೊತ್ತದ ರೈತರ ಸಾಲ ಮನ್ನಾ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ.

ಇದರಿಂದ 16 ಲಕ್ಷ ರೈತರು ಪ್ರಯೋಜನ ಪಡೆಯುವರು.

ಬಸ್ತರ್‌ನಲ್ಲಿ ಇತ್ತೀಚೆಗೆ ನಡೆದ ಮಾವೋವಾದಿ ಉಗ್ರರ ದಾಳಿ ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆಯನ್ನೂ ನೂತನ ಸಿಎಂ ಘೋಷಿಸಿದರು. ಪ್ರಮಾಣ ವಚನ ಸ್ವೀಕಾರ ಹಾಗೂ ಮೊದಲ ಸಂಪುಟಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, "ರೈತರು ಸಹಕಾರಿ ಸಂಸ್ಥೆಗಳು ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಿಂದ ಪಡೆದ ಅಲ್ಪಾವಧಿ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದ್ದೇವೆ. ವಾಣಿಜ್ಯ ಬ್ಯಾಂಕ್‌ಗಳ ಸಾಲದ ವಿಷಯವನ್ನು ಪರಿಶೀಲಿಸಲಾಗುತ್ತಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು" ಎಂದರು.

ಅಧಿಕಾರಕ್ಕೆ ಬಂದ 10 ದಿನಗಳ ಒಳಗಾಗಿ ಕಾಂಗ್ರೆಸ್ ಸರ್ಕಾರ ಸಾಲ ಮನ್ನಾ ಮಾಡಲಿದೆ ಹಾಗೂ ಪ್ರತಿ ಕ್ವಿಂಟಲ್ ಭತ್ತಕ್ಕೆ ಕನಿಷ್ಠ 2500 ರೂ. ಬೆಂಬಲ ಬೆಲೆ ಒದಗಿಸುವ ಭರವಸೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಚಾರ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಇದನ್ನು ಮೊದಲ ದಿನವೇ ಈಡೇರಿಸಲಾಗಿದೆ ಎಂದು ಬಘೇಲ್ ಸ್ಪಷ್ಟಪಡಿಸಿದರು.

ರಾಜ್ಯ ಕಾಂಗ್ರೆಸ್‌ನ ಮುಂಚೂಣಿ ನಾಯಕರು ಸೇರಿದಂತೆ 27 ಮಂದಿಯನ್ನು ಬಲಿ ಪಡೆದ ಬಸ್ತರ್ ದಾಳಿ ಘಟನೆ ಬಗ್ಗೆ ಹಾಗೂ ಇದರ ಹಿಂದಿನ ಸಂಚಿನ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದೂ ಅವರು ಹೇಳಿದರು.

2013ರ ಮೇ ತಿಂಗಳಲ್ಲಿ ಬಸ್ತರ್ ಜಿಲ್ಲೆಯಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಅಂದಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಪಟೇಲ್, ಅವರ ಪುತ್ರ ದಿನೇಶ್, ಮಾಜಿ ಕೇಂದ್ರ ಸಚಿವ ವಿ.ಸಿ.ಶುಕ್ಲಾ, ವಿರೋಧ ಪಕ್ಷದ ಮಾಜಿ ಮುಖಂಡ ಮಹೇಂದ್ರ ಕರ್ಮಾ, ಮಾಜಿ ಶಾಸಕ ಉದಯ್ ಮುದಲಿಯಾರ್ ಸೇರಿದಂತೆ 27 ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News