ಎರಡನೇ ಟೆಸ್ಟ್: ಭಾರತ ವಿರುದ್ಧ ಆಸ್ಟ್ರೇಲಿಯಕ್ಕೆ ಭರ್ಜರಿ ಜಯ; ಸರಣಿ ಸಮಬಲ

Update: 2018-12-18 06:12 GMT

ಪರ್ತ್, ಡಿ.18: ನಿರೀಕ್ಷೆಯಂತೆಯೇ ಆತಿಥೇಯ ಆಸ್ಟ್ರೇಲಿಯ ತಂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು 146 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.

ಭಾರತ ಮೊದಲ ಪಂದ್ಯವನ್ನು 31 ರನ್‌ಗಳಿಂದ ಗೆದ್ದುಕೊಂಡಿತ್ತು.

ಗೆಲ್ಲಲು 287 ರನ್ ಕಠಿಣ ಗುರಿ ಪಡೆದಿದ್ದ ಭಾರತ ನಾಲ್ಕನೇ ದಿನದಾಟದಂತ್ಯಕ್ಕೆ 112 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಐದನೇ ಹಾಗೂ ಅಂತಿಮ ದಿನವಾದ ಮಂಗಳವಾರ ಬ್ಯಾಟಿಂಗ್ ಮುಂದುವರಿಸಿದ ಭಾರತ 56 ಓವರ್‌ಗಳಲ್ಲಿ ಕೇವಲ 140 ರನ್‌ಗೆ ಸರ್ವಪತನ ಕಂಡಿತು.

ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್(30)ಇಂದು ಒಂದಷ್ಟು ಹೋರಾಟ ನೀಡಿದರು. ಪಂತ್ ಜೊತೆ ಇನಿಂಗ್ಸ್ ಮುಂದುವರಿಸಿದ್ದ ಹನುಮ ವಿಹಾರಿ 28 ರನ್ ಗಳಿಸಿ ಔಟಾದರು. ಪಂತ್ ಔಟಾದ ಬಳಿಕ ಭಾರತ 3 ರನ್ ಅಂತರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು.

ಆಸ್ಟ್ರೇಲಿಯದ ಪರ ಸ್ಪಿನ್ನರ್ ನಥಾನ್ ಲಿಯೊನ್(3-39) ಹಾಗೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್(3-46) ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಹೆಝಲ್‌ವುಡ್(2-24) ಹಾಗೂ ಕಮಿನ್ಸ್(2-25)ತಲಾ ಎರಡು ವಿಕೆಟ್ ಪಡೆದರು.

ಪಂದ್ಯದಲ್ಲಿ ಒಟ್ಟು 8 ವಿಕೆಟ್‌ಗಳನ್ನು ಪಡೆದು ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಆಫ್-ಸ್ಪಿನ್ನರ್ ಲಿಯೊನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News