ಇನ್ನೊಮ್ಮೆ ಬಂದ್‌ನತ್ತ ಟ್ರಂಪ್ ಸರಕಾರ

Update: 2018-12-18 15:26 GMT

ವಾಶಿಂಗ್ಟನ್, ಡಿ. 18: ಮೆಕ್ಸಿಕೊದೊಂದಿಗಿನ ಗಡಿಯುದ್ದಕ್ಕೂ ಗೋಡೆ ಕಟ್ಟುವ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸಂಸತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿರುವ ಹಿನ್ನೆಲೆಯಲ್ಲಿ, ಅಮೆರಿಕ ಸರಕಾರವು ಶುಕ್ರವಾರದಿಂದ ಇನ್ನೊಮ್ಮೆ ಸ್ಥಗಿತಗೊಳ್ಳುವ ಸಾಧ್ಯತೆ ಎದುರಾಗಿದೆ.

ಆದಾಗ್ಯೂ, ಸರಕಾರದ ನಾಲ್ಕನೇ ಮೂರು ಭಾಗ ಇಲಾಖೆಗಳು ತೆರೆದಿರುತ್ತವೆ. ಯಾಕೆಂದರೆ, ಅವುಗಳ ಖರ್ಚು ವೆಚ್ಚಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಹಾಲಿ ಹಣಕಾಸು ವರ್ಷದ ಕೊನೆಯವರೆಗೆ, ಅಂದರೆ ಸೆಪ್ಟಂಬರ್‌ವರೆಗೆ ಅವುಗಳು ಸರಾಗವಾಗಿ ಕಾರ್ಯನಿರ್ವಹಿಸಬಹುದಾಗಿದೆ.

ಆದರೆ, ವಲಸೆಯನ್ನು ನಿಭಾಯಿಸುವ ಆಂತರಿಕ ಭದ್ರತಾ ಇಲಾಖೆ ಹಾಗೂ ಕಾನೂನು ಮತ್ತು ಆಂತರಿಕ ಇಲಾಖೆಗಳು ಸಮಸ್ಯೆ ಎದುರಿಸಲಿವೆ. ಯಾಕೆಂದರೆ, ಶುಕ್ರವಾರದವರೆಗಿನ ಅವುಗಳ ನಿರ್ವಹಣಾ ವೆಚ್ಚ ಮಾತ್ರ ಅನುಮೋದನೆಗೊಂಡಿದೆ.

ಮೆಕ್ಸಿಕೊ ಗಡಿಯುದ್ದಕ್ಕೂ ಗೋಡೆ ಕಟ್ಟಲು 5 ಬಿಲಿಯ ಡಾಲರ್ (ಸುಮಾರು 35,395 ಕೋಟಿ ರೂಪಾಯಿ) ಟ್ರಂಪ್ ಕೇಳಿದ್ದು, ಕಾಂಗ್ರೆಸ್ ಅದಕ್ಕೆ ತಕರಾರು ವ್ಯಕ್ತಪಡಿಸಿದೆ.

ಅಕ್ರಮ ವಲಸೆಯನ್ನು ತಡೆಯಲು ಮೆಕ್ಸಿಕೊ ಗಡಿಯುದ್ದಕ್ಕೂ ಗೋಡೆ ಕಟ್ಟುವುದು ಟ್ರಂಪ್‌ರ ಪ್ರಮುಖ ಚುನಾವಣಾ ಭರವಸೆಯಾಗಿತ್ತು. ಈಗ ಅದನ್ನು ಈಡೇರಿಸುವಂತೆ ಬೆಂಬಲಿಗರು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಪ್ರಸ್ತಾಪ ಸೆನೆಟ್ ದಾಟುವುದಿಲ್ಲ

ಮೆಕ್ಸಿಕೊ ಗೋಡೆಗೆ ಸಂಸತ್ತು ಕಾಂಗ್ರೆಸ್ ಹಣ ನೀಡುವ ಸಾಧ್ಯತೆ ವಿರಳ. ಸಂಸತ್ತಿನಲ್ಲಿ ಎರಡು ಘಟಕಗಳಿವೆ- ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಹಣ ನೀಡಿದರೂ, ಸೆನೆಟ್‌ನಲ್ಲಿ ಪ್ರತಿಪಕ್ಷ ಡೆಮಾಕ್ರಟಿಗರ ಬೆಂಬಲವಿಲ್ಲದೆ ಮಸೂದೆ ಅಂಗೀಕಾರಗೊಳ್ಳುವುದಿಲ್ಲ.

ಡೆಮಾಕ್ರಟಿಕ್ ಸಂಸದರು ಮೆಕ್ಸಿಕೊ ಗಡಿ ಗೋಡೆಯನ್ನು ವಿರೋಧಿಸಿದ್ದಾರೆ ಹಾಗೂ ಅಧ್ಯಕ್ಷರ ಬೇಡಿಕೆಗೆ ಒಪ್ಪುವ ಇರಾದೆ ತಮಗಿಲ್ಲ ಎಂದು ಹೇಳಿದ್ದಾರೆ.

ಸರಕಾರ ಬಂದ್ ಮಾಡಲು ಹೆಮ್ಮೆಯಾಗುತ್ತಿದೆ: ಟ್ರಂಪ್

ಶ್ವೇತಭವನದಲ್ಲಿ ಕಳೆದ ವಾರ ನಡೆದ ಸಭೆಯೊಂದರಲ್ಲಿ, ‘‘ನನಗೆ ಗಡಿ ಗೋಡೆಗೆ ಹಣ ಸಿಗದಿದ್ದರೆ, ಸರಕಾರವನ್ನು ಸ್ಥಗಿತಗೊಳಿಸಲು ನಾನು ಸಿದ್ಧನಿದ್ದೇನೆ’’ ಎಂಬುದಾಗಿ ಡೆಮಾಕ್ರಟಿಕ್ ನಾಯಕರಾದ ನ್ಯಾನ್ಸಿ ಪೆಲೊಸಿ ಮತ್ತು ಚಕ್ ಶೂಮರ್‌ಗೆ ಟ್ರಂಪ್ ಹೇಳಿದ್ದರು.

‘‘ಗಡಿ ಭದ್ರತೆಗಾಗಿ ಸರಕಾರವನ್ನು ಬಂದ್ ಮಾಡಲು ನನಗೆ ಹೆಮ್ಮೆಯಾಗುತ್ತಿದೆ... ಸರಕಾರವನ್ನು ಬಂದ್ ಮಾಡುವ ಹೊಣೆಯನ್ನು ನಾನು ವಹಿಸಿಕೊಳ್ಳುತ್ತೇನೆ’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News