ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿ

Update: 2018-12-18 16:28 GMT

ಬೆಂಗಳೂರು, ಡಿ.18: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಡಿ.22ಕ್ಕೆ ಸಂಪುಟ ವಿಸ್ತರಣೆ ಆಗುವುದು ನಿಶ್ಚಿತವಾಗಿದೆ.

ಮಂಗಳವಾರ ಬೆಳಗಾವಿ ಸುವರ್ಣ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬೆನ್ನಲ್ಲೆ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದ್ದು, ಡಿ.22ರ ಸಂಜೆ 5ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಜರುಗಲಿದೆ ಎಂದು ಗೊತ್ತಾಗಿದೆ.

ಡಿ.21ಕ್ಕೆ ವಿಧಾನ ಮಂಡಲ ಅಧಿವೇಶನ ಮುಂದೂಡಲಿದ್ದು, ಅಂದು ಸಂಜೆಯೆ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಇನ್ನಿತರ ಮುಖಂಡರು ದಿಲ್ಲಿಗೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ ನೂತನವಾಗಿ ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವ ಆಕಾಂಕ್ಷಿಗಳನ್ನು ಅಖೈರುಗೊಳಿಸುವ ಸಾಧ್ಯತೆಗಳಿವೆ.

ಸಚಿವ ಸಂಪುಟದಲ್ಲೀಗ ಖಾಲಿ ಇರುವ ಏಳು ಸ್ಥಾನಗಳ ಪೈಕಿ ಕಾಂಗ್ರೆಸ್‌ನಿಂದ ಆರು ಮತ್ತು ಬಿಎಸ್ಪಿ ಶಾಸಕ ಎನ್.ಮಹೇಶ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವೂ ಸೇರಿದಂತೆ ಏಳು ಸ್ಥಾನಗಳನ್ನು ಭರ್ತಿ ಮಾಡುವ ಮೂಲಕ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆ ಹಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News