ಮುಂದಿನ ಬಜೆಟ್‍ನಲ್ಲಿ ಶಾಸಕರ ನಿಧಿ ಹೆಚ್ಚಳಕ್ಕೆ ಕ್ರಮ: ಹೆಚ್.ಡಿ.ಕುಮಾರಸ್ವಾಮಿ

Update: 2018-12-18 16:32 GMT

ಬೆಳಗಾವಿ, ಡಿ.18: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಮುಂದಿನ ಬಜೆಟ್‍ನಲ್ಲಿ ಹೆಚ್ಚಿಸಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ವೇಳೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಈಗಾಗಲೇ ಬಿಡುಗಡೆ ಆಗಿರುವ ಅನುದಾನ ವೆಚ್ಚ ಮಾಡದೆ ಬಾಕಿ ಉಳಿದಿರುವುದರಿಂದ ಶಾಸಕರ ನಿಧಿ ಹೆಚ್ಚಿಸಿರುವುದಿಲ್ಲ. ಆದರೂ, ಮುಂದಿನ ಬಜೆಟ್‍ನಲ್ಲಿ ಹೆಚ್ಚಿಸಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.

2001-2002 ರಲ್ಲಿ ಪ್ರತಿ ಕ್ಷೇತ್ರಕ್ಕೆ ತಲಾ 25 ಲಕ್ಷ ರೂ. ನಿಗದಿಪಡಿಸುವ ಮೂಲಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಪ್ರಾರಂಭಿಸಲಾಗಿದೆ. 2006-2007 ನೇ ಸಾಲಿನಲ್ಲಿ ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ. 2013-2014ನೇ ಸಾಲಿನಲ್ಲಿ ಈ ನಿಧಿಯನ್ನು ಒಂದು ಕೋಟಿ ರೂ.ಯಿಂದ ಎರಡು ಕೋಟಿ ರೂ.ವರೆಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ಈ ಯೋಜನೆಯಡಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 939.74 ಕೋಟಿ ರೂ. ಅನುದಾನ ಲಭ್ಯವಿದೆ. ಅಲ್ಲದೆ, 2018-19 ನೇ ಸಾಲಿನ  ಆಯುವ್ಯಯದಲ್ಲಿ 600 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಅನುದಾನ ಬಳಕೆಯಾಗದೆ ಇರುವುದರಿಂದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಳವಾಗಿರುವುದಿಲ್ಲ ಎಂದು ಮುಖ್ಯಮಂತ್ರಿ ವಿವರಿಸಿದರು.

ಈ ನಡುವೆ ಬಹುತೇಕ ಶಾಸಕರು ಶಾಸಕ ನಿಧಿ ಪರಿಷ್ಕರಿಸುವಂತೆ ಹಾಗೂ ಪ್ರಸ್ತುತ ಶಾಸಕರ ನಿಧಿ ಬಳಕೆಗೆ ಇರುವ ನಿಯಮಾವಳಿಗಳನ್ನು ಪರಿಷ್ಕರಿಸುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕಾಮಗಾರಿಗಳ ಅನುಷ್ಠಾನಕ್ಕೆ ಇರುವ ನಿಯಮಾವಳಿಗಳನ್ನು ಸರಳಿಕರಣಗೊಳಿಸಲಾಗುವುದು ಹಾಗೂ ಬಯಲು ಸೀಮೆ, ಹೈದರಾಬಾದ್ ಕರ್ನಾಟಕ ಹಾಗೂ ಮಲೆನಾಡು ಪ್ರದೇಶದ ಶಾಸಕರಿಗೆ ಆದ್ಯತೆ ನೀಡಲಾಗುವುದು. ಮುಂದಿನ ಬಜೆಟ್‍ನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News