ಹಾಡಹಗಲೇ ಶಾಲಾ ಬಾಲಕಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ

Update: 2018-12-19 04:00 GMT

ಆಗ್ರಾ, ಡಿ. 19: ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಕೇವಲ 17 ಕಿಲೋಮೀಟರ್ ದೂರದಲ್ಲಿ ಶಾಲಾ ಬಾಲಕಿಯೊಬ್ಬಳು ಶಾಲೆಯಿಂದ ವಾಪಸ್ಸಾಗುತ್ತಿದ್ದಾಗ, ಆಗಂತುಕರು ಆಕೆಯತ್ತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಆಗ್ರಾ ಹೊರವಲಯದಲ್ಲಿ ಮಧ್ಯಾಹ್ನ 1.30ರ ವೇಳೆಗೆ ಈ ಘಟನೆ ನಡೆದಿದ್ದು, ನೆರೆಹೊರೆಯವರು ಬಾಲಕಿಯನ್ನು ರಕ್ಷಿಸಿದ್ದಾರೆ.

ನೌಮೀಲ್‌ನ ಅಸ್ರಫಿ ದೇವಿ ಛಿಡ್ಡಾ ಸಿಂಗ್ ಇಂಟರ್ ಕಾಲೇಜಿನಲ್ಲಿ ಹತ್ತನೇ ತರಗತಿ ಓದುತ್ತಿದ್ದ ಸಂಜಲಿ ಕುಮಾರಿ (15) ಶಾಲೆ ಮುಗಿಸಿ ಸೈಕಲ್‌ನಲ್ಲಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಈಕೆಯನ್ನು ಅಡ್ಡಗಟ್ಟಿದ ಇಬ್ಬರು ಯುವಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ದಾರಿಹೋಕರು ಆಕೆಯನ್ನು ರಕ್ಷಿಸಿ ತಕ್ಷಣ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರು. ಸುಟ್ಟಗಾಯಗಳಾದ ಬಾಲಕಿಯನ್ನು ಮೊದಲು ಎಸ್.ಎನ್.ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇಕಡ 70ರಷ್ಟು ಸುಟ್ಟ ಗಾಯಗಳಾಗಿರುವ ಬಾಲಕಿಯನ್ನು ನಂತರ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

"ಮಗಳು ಶಾಲೆಯಿಂದ ಸೈಕಲ್‌ನಲ್ಲಿ ಬರುತ್ತಿದ್ದಾಗ ಹೆಲ್ಮೆಟ್ ಧರಿಸಿದ್ದ ಇಬ್ಬರು ಯುವಕರು ಬೈಕ್‌ನಲ್ಲಿ ಬಂದು ಆಕೆಯತ್ತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ರಾಜ್ಯ ಹೆದ್ದಾರಿ ಪಕ್ಕದ ಹೊಂಡಕ್ಕೆ ತಳ್ಳಿದರು. ನಮಗೆ ಯಾರೊಂದಿಗೂ ದ್ವೇಷ ಇರಲಿಲ್ಲ. ಆಕೆಗೆ ಆಘಾತವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿಲ್ಲ" ಎಂದು ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಬಾಲಕಿಯ ತಂದೆ ಹರೇಂದ್ರ ಸಿಂಗ್ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಆಗ್ರಾ ಹಿರಿಯ ಪೊಲೀಸ್ ಅಧೀಕ್ಷಕ ಅಮಿತ್ ಪಾಠಕ್ ಭೇಟಿ ನೀಡಿ, ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು. ಬಾಲಕಿಯ ಸಹಪಾಠಿಗಳು ನೀಡಿದ ಮಾಹಿತಿ ಆಧಾರದಲ್ಲಿ ಶಂಕಿತರನ್ನು ಬಂಧಿಸಲು ಪೊಲೀಸರು ಹಲವೆಡೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News