ಟ್ರಾಫಿಕ್ ಪೊಲೀಸರ ಉಪಟಳದಿಂದ ಜನರಿಗೆ ರಕ್ಷಣೆ ಕೊಡಿ

Update: 2018-12-19 06:00 GMT

ಡಿ. 18ರಂದು ಮಂಗಳೂರಿನ ಹೊರವಲಯದ ತೊಕ್ಕೊಟ್ಟು‌‌ ಪೇಟೆಯಲ್ಲಿ ಟ್ರಾಫಿಕ್ ಪೊಲೀಸರು (ಎಎಸ್ಸೈ ಜಯರಾಮ ಗಟ್ಟಿ ಮತ್ತಾತನ ತಂಡ) ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿವೊಂದನ್ನು ತುಸು ಇಳಿಜಾರು ಇರುವ ಕಡೆ ತಡೆದು ನಿಲ್ಲಿಸಿದ್ದ ಪರಿಣಾಮ ಲಾರಿ ಸಮತೋಲನ ತಪ್ಪಿ ಮಗುಚಿ ಬಿದ್ದು ಅದರಲ್ಲಿದ್ದ ಅಮಾಯಕ ಲಾರಿ ಕ್ಲೀನರ್ ಒಬ್ಬರು ಪ್ರಾಣ ತೆತ್ತ‌ರು. ಇದನ್ನು ಟ್ರಾಫಿಕ್ ಪೊಲೀಸರೇ ಮಾಡಿದ ಕೊಲೆ ಎಂದರೆ ತಪ್ಪೇ ಇಲ್ಲ.

ಡಿ. 4ರಂದು ಪತ್ನಿ ಮತ್ತು ಮಗಳೊಂದಿಗೆ ಪಿಲಿಕುಳದ ಶಿವರಾಮ ಕಾರಂತ ಬಯೋಲಾಜಿಕಲ್ ಪಾರ್ಕಿಗೆ ಹೋಗಿ ಹಿಂದಿರುಗುತ್ತಿದ್ದೆ. ಪಂಪ್ ವೆಲ್ ಕಡೆ ಬರುತ್ತಿದ್ದ ನಾನು ನಂತೂರು ಸರ್ಕಲ್ ಬಳಿ ನಾನು ಬರಬೇಕಾಗಿದ್ದ ಮಧ್ಯದ ಲೇನ್ ಬಿಟ್ಟು ಎಡಗಡೆಗೆ ತಿರುಗಬೇಕಾದ ಲೇನ್ ನಲ್ಲಿ ಸಿಗ್ನಲ್ ಲೈಟ್ ಬೀಳುವಾಗ ನನ್ನ ವಾಹನ ನಿಲ್ಲಿಸಿದ್ದೆ. ನಾನು ನಿಜವಾಗಿ ಬರಬೇಕಾಗಿದ್ದ ಲೇನ್ ಗೆ ಬರಲು ಇನ್ನೂ  ಅವಕಾಶವಿತ್ತು.‌ ಆದರೆ ಅಲ್ಲೇ ಇದ್ದ ಪೊಲೀಸನೊಬ್ಬ (ಕದ್ರಿ‌ ಠಾಣೆಯ ತಿಪ್ಪೇಸ್ವಾಮಿ) ನನಗೆ‌ ನನ್ನ ಲೇನ್ ಗೆ ಬರಲು ಸೂಚಿಸುವ ಬದಲಾಗಿ ಮುಂದೆ ಬರುವಂತೆ ಸೂಚಿಸಿ ನನ್ನ ವಾಹನ ನಿಲ್ಲಿಸಿ, ದಂಡ ಕಟ್ಟಲು ಸೂಚಿಸಿದ.

ಇಲ್ಲಿ ನನಗೆ ಸರಿದಾರಿ ತೋರಿಸುವ ಬದಲಾಗಿ ಖುದ್ದಾಗಿ ಒಬ್ಬ‌ ಪೊಲೀಸನೇ ನಾನು ನಿಯಮ ಮುರಿಯುವಂತೆ ಮಾಡಿದ. ಆತ ನನ್ನಿಂದ ಟ್ರಾಫಿಕ್ ನಿಯಮ ಬ್ರೇಕ್ ಮಾಡಿಸಿದ್ದನ್ನು ನಾನು‌ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಪೊಲೀಸ್ ದರ್ಪ ತೋರಿಸುವ ಯತ್ನ ಮಾಡಿದ. ನಾನು ಆತನನ್ನು ಗದರಿಸಿದ್ದರಿಂದ ತೆಪ್ಪಗೆ ರಶೀದಿ ಹರಿದುಕೊಟ್ಟ.  ಈತನ್ಮಧ್ಯೆ ಆತನ‌ ಮತ್ತು ನನ್ನ ಕಣ್ಮುಂದೆ ಹತ್ತಾರು ಘನ ವಾಹನಗಳು ನಿಯಮ ಮೀರಿ ತಮ್ಮ ಲೇನ್ ತಪ್ಪಿಸಿ ಸಾಗುತ್ತಿದ್ದವು. ಆತನನ್ನು ಅತ್ತ ಕಡೆ ನೋಡು ಮಾರಾಯ ಎಂದರೆ ಆತ "ಸಮುದ್ರದಲ್ಲಿ‌‌ ಕೋಟ್ಯಂತರ ಮೀನುಗಳಿವೆ. ಎಲ್ಲವೂ ಮೀನುಗಾರನ ಬಲೆಗೆ ಸಿಗುತ್ತಾ" ? ಎಂದು ನನಗೆ ಉಪಮಾಲಂಕಾರದ ಪಾಠ ಮಾಡತೊಡಗಿದ. ಇಲ್ಲಿ ವಿಚಿತ್ರ ನೋಡಿ, ನನ್ನನ್ನು ಸರಿದಾರಿಯಲ್ಲಿ ವಾಹನ ನಿಲ್ಲಿಸುವಂತೆ ಸೂಚಿಸುವ ಎಲ್ಲಾ ಅವಕಾಶಗಳಿದ್ದೂ ನನ್ನಿಂದ ಖುದ್ದು ಒಬ್ಬ ಪೊಲೀಸನೇ ಟ್ರಾಫಿಕ್ ನಿಯಮ ಮುರಿಸಿದ. ಇದರಿಂದಾಗಿ ಹತ್ತಾರು ವಾಹನಗಳು ನಿಯಮ ಮೀರಿ ಚಲಿಸುತ್ತಿದ್ದರೂ ಆತನಿಗೆ ಆತನ ಹಠವೇ ದೊಡ್ಡದೆಂಬಂತಿತ್ತು. ಅಲ್ಲಿ ಪುಣ್ಯಕ್ಕೆ ಏನೂ‌ ಅಪಘಾತ ಸಂಭವಿಸಲಿಲ್ಲ. ಒಂದು ವೇಳೆ ಏನಾದರು ಸಂಭವಿಸಿದ್ದರೆ ಅದಕ್ಕೆ ಈ ಪೊಲೀಸನೇ  ಹೊಣೆಯಲ್ಲವೇ...?

ಸುಮಾರು ಏಳೆಂಟು ವರ್ಷಗಳ ಹಿಂದೆ ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿರುವ ನನ್ನ ಲ್ಯಾಬೋರೇಟರಿಯ ಎದುರುಗಡೆ ರಸ್ತೆಯಲ್ಲಿ ವೆಂಕಟೇಶ್ ಚಂದ್ರಗಿರಿ ಎಂಬ ಕೊಣಾಜೆ ಠಾಣೆಯ ಕಾನ್ಸ್ಟೇಬಲ್ ಒಬ್ಬ ನಿಲ್ಲುತ್ತಿದ್ದ. ಸಂಜೆ ಹೊತ್ತು ಕೆಲವು ಯುವಕರು ಬೈಕಲ್ಲಿ ಟ್ರಿಪಲ್ ರೈಡ್ ಹೊಡೆಯುತ್ತಿದ್ದರು. ಅವರು ಈತ ಕೈ ತೋರಿಸಿದರೆ ನಿಲ್ಲಿಸದೇ ತಪ್ಪಿಸಿಕೊಳ್ಳುತ್ತಿದ್ದರು. ಯುವಕರನ್ನು ತಡೆದು ನಿಲ್ಲಿಸಲಾಗದ ಸಿಟ್ಟಿಗೆ ತನ್ನ ಕೈಯಲ್ಲಿದ್ದ ಲಾಠಿಯನ್ನು ಅವರತ್ತ ಎಸೆಯುತ್ತಿದ್ದ. ವಾಹನ ಚಲಿಸುತ್ತಿರುವಾಗ ಸವಾರನ ಅಥವಾ ಸಹ ಸವಾರನ ಮೇಲೆ ಲಾಠಿಯೇಕೆ ಪುಟ್ಟ ಕಲ್ಲೆಸೆದರೂ ಅವರ ಸಮತೋಲನ ತಪ್ಪುವ ಸಾಧ್ಯತೆ ನಿಚ್ಚಳ. ಆ ಪೊಲೀಸನಿಗೆ ನಾನು ಅನೇಕ ಬಾರಿ ಆ ಕುರಿತಂತೆ ತಿಳಿ ಹೇಳಿದರೂ ಆತ‌‌ ಆ ಅಭ್ಯಾಸವನ್ನು ಮುಂದುವರಿಸಿದ್ದ. ಕೊನೆಗೆ ಕೊಣಾಜೆ ಠಾಣೆಯಲ್ಲಿ ಅಂದು‌ ಸಬ್ ಇನ್ಸ್ಪೆಕ್ಟರ್ ಆಗಿದ್ದ ಸುನೀಲ್ ಪಾಟೀಲ್ ಎಂಬ ದಕ್ಷ ಅಧಿಕಾರಿಗೆ ಆತನ ವಿರುದ್ಧ ದೂರು ಕೊಟ್ಟೆ. ಇದರಿಂದ ಆತನ ಲಾಠಿ ಎಸೆಯುವ ಬುದ್ಧಿ ನಿಂತಿತು.

ಬಹುಶಃ ನೀವು ಗಮನಿಸಿರಬಹುದು. ನಮ್ಮ‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಹೆಚ್ಚಿನೆಲ್ಲಾ ಬಸ್ಸುಗಳು ಬ್ರೇಕ್ ಲೈಟ್ ಉರಿಸುವುದೇ ಇಲ್ಲ. ಸಾಮಾನ್ಯವಾಗಿ ನಮ್ಮ ಜಿಲ್ಲೆಯಲ್ಲಿ ಸಂಚರಿಸುವ ಬಸ್ಸುಗಳು ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಏರಿಸುತ್ತಾ ಸಾಗುತ್ತಿರುತ್ತವೆ.‌ ಯಾರಾದರೂ ಬಸ್ಸಿಗೆ ಕೈ ತೋರಿಸಿದರೆ ಚಾಲಕರು ಏಕಾ ಏಕಿ ಯಾವುದೇ ಮುನ್ಸೂಚನೆ ನೀಡದೇ ‌ಬಸ್ಸು‌ ನಿಲ್ಲಿಸುತ್ತಾರೆ. ಅವರ ಹಿಂದೆ ಸಾಲಾಗಿ ಬೇರೆ ವಾಹನಗಳೂ ಸಂಚರಿಸುತ್ತವೆ.

ಹೆಚ್ಚಿನ ಬಸ್ಸುಗಳ  ಬ್ರೇಕ್ ಲೈಟ್ (ಇಂಡಿಕೇಟರ್) ಕಾರ್ಯ ನಿರ್ವಹಿಸುವುದಿಲ್ಲ. ಬಸ್ಸೊಂದು ಕೈ ತೋರಿಸಿದ ಪ್ರಯಾಣಿಕನನ್ನು ಏರಿಸಲು ನಿಲ್ಲಿಸಿದಾಗ ಈ ಬ್ರೇಕ್ ಲೈಟ್ ಉರಿಯದಿದ್ದರೆ ಆ ಬಸ್ಸಿನ ಹಿಂದಿನಿಂದ ಬರುವ ವಾಹನಗಳಿಗೆ ಯಾವುದೇ ಮುನ್ಸೂಚನೆ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಒಂದು ನಿರ್ದಿಷ್ಟ ವೇಗದಲ್ಲಿ ಬಸ್ಸಿನ ಹಿಂಬದಿಯಲ್ಲಿ ಸಾಗುತ್ತಿರುವ ವಾಹನಗಳು ಮುನ್ಸೂಚನೆ ಸಿಗದಿದ್ದುದರ ಪರಿಣಾಮ ಢಿಕ್ಕಿ ಹೊಡೆಯುವ ಸಾಧ್ಯತೆಗಳು ನಿಚ್ಚಳ. ಬಸ್ಸುಗಳ  ಹಿಂಬದಿ ಅಂತರ ಕಾಯ್ದುಕೊಳ್ಳಿ ಎಂದು ಬರೆದರೂ ನಗರಗಳಲ್ಲಿ ಒಂದು ಅಡಿ ಅಂತರ ಕಾಯ್ದುಕೊಳ್ಳಲೂ ಸಾಧ್ಯವಾಗದಷ್ಟು ವಾಹನದಟ್ಟಣೆ ಇರುತ್ತವೆ. ಆದುದರಿಂದ ಅಂತರ ಕಾಯ್ದುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಇದು ಬಹುದೊಡ್ಡ ಅಪಘಾತ - ಅಪಾಯಗಳಿಗೆ ಸುಲಭ ದಾರಿ ಮಾಡಿಕೊಡು ತ್ತದೆ. ಹೀಗೆ ಐವತ್ತರಷ್ಟು ಜನರನ್ನು ಹೊತ್ತುಕೊಂಡು ಸಾಗುವ ಬಸ್ಸುಗಳು ಕಾನೂನು ಮೀರಿ ಕಾನೂನು ಪಾಲಕರ ಕಣ್ಮುಂದೆಯೇ ಸಾಗುತ್ತಿದ್ದಾಗಲೂ ಇವರು‌‌‌‌ ಸುಮ್ಮನಿರುತ್ತಾರೆ.

ಇಂತಹ ಮಹತ್ವದ ವಿಚಾರಗಳಿಗೆ ಗಮನಕೊಡದೆ ಚಿಕ್ಕ ಪುಟ್ಟ ಪ್ರಮಾದಗಳನ್ನು ಗಂಭೀರವಾಗಿಸಿ ಅದರ ಹಿಂದೆ ಪೊಲೀಸರು ಬೀಳುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಹಿರಿಯ ಶ್ರೇಣಿಯ ಅಧಿಕಾರಿಗಳು ತಮ್ಮ ಕೈ ಕೆಳಗಿನವರಿಗೆ ಸೂಕ್ತ ಪಾಠ ಬೋಧಿಸಬೇಕಿದೆ. ಸಂಚಾರೀ ನಿಯಮಾವಳಿಗಳು ಮತ್ತು ಜನರ ಪ್ರಾಣ ಇವೆರಡರ ಮಧ್ಯೆ ಯಾವುದಾದರೂ ಒಂದನ್ನು ಆಯ್ದುಕೊಳ್ಳವ ಅವಕಾಶವಿದ್ದಾಗ ಯಾವುದಕ್ಕೆ ಮಹತ್ವ ಕೊಡಬೇಕೆಂಬ ಮಾನವೀಯ ಪಾಠವನ್ನು ಬೋಧಿಸುವುದು ಬಹು ಅಗತ್ಯ.

ಎಲ್ಲಾ ಕಾನೂನೂ ಜನರ ರಕ್ಷಣೆಗಾಗಿಯೇ ಹೊರತು ಜನರ ಪ್ರಾಣಕ್ಕೆ ಅಪಾಯಕಾರಿಯಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News