ರೈಲಿನಲ್ಲಿ ಕಿರುಕುಳ ನೀಡಿದ ಯುವಕ ಮೊಳಕಾಲೂರಿ ನಿಲ್ಲುವಂತೆ ಮಾಡಿದ ಅಂಧ ಬಾಲಕಿ

Update: 2018-12-19 10:51 GMT

ಮುಂಬೈ, ಡಿ.19: ಲೋಕಲ್ ರೈಲಿನಲ್ಲಿ ತನ್ನ ತಂದೆಯೊಂದಿಗೆ ಪ್ರಯಾಣಿಸುತ್ತಿದ್ದ 15 ವರ್ಷದ ಅಂಧ ಬಾಲಕಿಯೊಬ್ಬಳಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು, ಆತ್ಮರಕ್ಷಣೆ ತರಬೇತಿ ಪಡೆದಿದ್ದ ಆಕೆ ಕಿಡಿಗೇಡಿಗೆ ತಕ್ಕಶಾಸ್ತಿ ಮಾಡಿದ್ದಾಳೆ.

ಆರೋಪಿ ಕಿರುಕುಳ ನೀಡಿದಾಗ ಕರಾಟೆ ಮತ್ತು ಆತ್ಮರಕ್ಷಣೆಯಲ್ಲಿ ತರಬೇತಿ ಪಡೆದಿರುವ ಬಾಲಕಿ ಧೃತಿಗೆಡದೆ ಆತನ ಕೈಯನ್ನು ಬಲವಾಗಿ ತಿರುಗಿಸಿದ್ದಾಳೆ. ನಂತರ ಆತನನ್ನು ಮೊಳಕಾಲೂರಿ ನಿಲ್ಲುವಂತೆ ಮಾಡಿದ್ದಾಳೆ. ನಂತರ ಆರೋಪಿಯನ್ನು ದಾದರ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ 8:15ರ ಸುಮಾರಿಗೆ  ಬಾಲಕಿ ತನ್ನ ತಂದೆಯೊಂದಿಗೆ ಕಲ್ಯಾಣ್ ನಿಂದ ದಾದರ್ ಗೆ ಪಯಣಿಸುವ ಲೋಕಲ್ ರೈಲಿನ ಅಂಗವಿಕಲರಿಗೆ ಮೀಸಲಾದ ಬೋಗಿ ಹತ್ತಿದ್ದಳು. ಆರೋಪಿ 24 ವರ್ಷದ ವಿಶಾಲ್ ಬಲಿರಾಮ್ ಸಿಂಗ್ ಕೂಡ ಅದೇ ಬೋಗಿ ಹತ್ತಿ ಬಾಲಕಿಯ ಹಿಂದೆ ನಿಂತು ಆಕೆಯನ್ನು ಅನುಚಿತವಾಗಿ ಮುಟ್ಟಲು ಆರಂಭಿಸಿದ್ದ. ಆಗ ಬಾಲಕಿ ಹಿಂದಿರುಗಿ ನೋಡದೆಯೇ ಆತನ ಕೈಯನ್ನು ಬಲವಾಗಿ ತಿರುಗಿಸಿದ್ದಳು. ಆತ ನೋವಿನಿಂದ ಚೀರಿದಾಗ ಇತರ ಪ್ರಯಾಣಿಕರ ಗಮನಕ್ಕೆ ಈ ಘಟನೆ ಬಂದಿತ್ತು.

ರೈಲು ಮಾಟುಂಗ ನಿಲ್ದಾಣ ತಲುಪುವ ತನಕ ತನಗಿಂತ ಎಷ್ಟೋ ಎತ್ತರವಿದ್ದ ಆ ಯುವಕನ ಕೈಯನ್ನು ಬಲವಾಗಿ ಹಿಡಿದಿದ್ದ ಬಾಲಕಿ ನಂತರ ಆತನನ್ನು ಬಂಧಿಸುವಂತೆ ಪೊಲೀಸರಿಗೆ ತಿಳಿಸಿದಳು. ಆರೋಪಿಯ ವಿರುದ್ಧ ಬಾಲಕಿಗೆ ಕಿರುಕುಳ ನೀಡಿದ್ದಕ್ಕಾಗಿ, ಅಂಗವಿಕಲರ ಬೋಗಿಯನ್ನು ಪ್ರವೇಶಿಸಿದ್ದಕ್ಕಾಗಿ ಹಾಗೂ ಟಿಕೆಟ್ ಇಲ್ಲದೆ ಅಕ್ರಮವಾಗಿ ಪಯಣಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

“ಆರೋಪಿ ಮತ್ತೆ ಯಾವುದೇ ಹುಡುಗಿಯ ಜತೆ ಈ ರೀತಿ ವರ್ತಿಸಬಾರದು. ನಮಗೆ ಶಾಲೆಯಲ್ಲಿ ಶಿಕ್ಷಣದ ಜತೆಗ ಆತ್ಮರಕ್ಷಣೆ ತರಬೇತಿ  ನೀಡಿ ನಮ್ಮ ಅಂಗವಿಕಲತೆಯ ಹೊರತಾಗಿಯೂ ಜಗತ್ತನ್ನು ಧೈರ್ಯದಿಂದ ಎದುರಿಸುವಂತೆ ನಮ್ಮನ್ನು ಸನ್ನದ್ಧಗೊಳಿಸಲಾಗಿದೆ,'' ಎಂದು ಆಕೆ ಹೇಳುತ್ತಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News