ಆಗ ‘ಆಕಸ್ಮಿಕ’ ಘಟನೆ, ಈಗ ‘ರಾಜಕೀಯ ಪಿತೂರಿ’: ಹೇಳಿಕೆ ಬದಲಿಸಿದ ಆದಿತ್ಯನಾಥ್

Update: 2018-12-19 16:48 GMT

ಲಕ್ನೋ,ಡಿ.19: ಬುಲಂದಶಹರ್ ಹಿಂಸಾಚಾರ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮಾತಿನ ವರಸೆ ಬದಲಾಗುತ್ತಲೇ ಇದೆ. ಹಿಂಸಾಚಾರ ಘಟನೆಯನ್ನು ಒಂದು ‘ಆಕಸ್ಮಿಕ’ ಎಂದು ಈ ಹಿಂದೆ ಬಣ್ಣಿಸಿದ್ದ ಅವರು ಇದೀಗ ಅದೊಂದು ವ್ಯವಸ್ಥಿತ ‘ರಾಜಕೀಯ ಪಿತೂರಿ’ಯಾಗಿತ್ತು ಎಂದಿದ್ದಾರೆ.

ಬುಧವಾರ ವಿವಿಧ ವಿಷಯಗಳ ಕುರಿತು ಎಸ್‌ಪಿ ಮತ್ತು ಕಾಂಗ್ರೆಸ್ ಸದಸ್ಯರ ಪ್ರತಿಭಟನೆಗಳಿಂದಾಗಿ ಉತ್ತರ ಪ್ರದೇಶ ಶಾಸಕಾಂಗದ ಉಭಯ ಸದನಗಳು ಮುಂದೂಡಿಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯನಾಥ್,ಬುಲಂದಶಹರ್ ಹಿಂಸಾಚಾರ ರಾಜಕೀಯದಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡವರು ರೂಪಿಸಿದ್ದ ರಾಜಕೀಯ ಷಡ್ಯಂತ್ರವಾಗಿತ್ತು ಎನ್ನುವುದು ಬಯಲಾಗಿದೆ. ಯಾವುದೇ ಬೆಲೆ ತೆತ್ತಾದರೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲಾಗುವುದು. ಆಡಳಿತ ಮತ್ತು ಸರಕಾರ ಸಂಚುಕೋರರ ಕುತಂತ್ರಗಳನ್ನು ವಿಫಲಗೊಳಿಸಿವೆ ಎಂದು ಹೇಳಿದರು.

ಈ ಹಿಂದೆ ಘಟನೆಯ ಕುರಿತು ತನ್ನ ಮೌನವನ್ನು ಮುರಿದ ಸಂದರ್ಭದಲ್ಲಿ ಇದೇ ಆದಿತ್ಯನಾಥ್,ಅದು ಗುಂಪಿನಿಂದ ಹತ್ಯೆ ಪ್ರಕರಣವಲ್ಲ,ಅದೊಂದು ಆಕಸ್ಮಿಕ ಘಟನೆಯಾಗಿದೆ ಮತ್ತು ಅದಕ್ಕೆ ಕಾರಣರಾದ ಪ್ರತಿಯೊಬ್ಬರನ್ನೂ ದಂಡಿಸಲಾಗುವುದು,ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದರು.

ಡಿ.3ರಂದು ಬುಲಂದಶಹರ್ ಸಮೀಪ ದನಗಳ ಅವಶೇಷಗಳು ಪತ್ತೆಯಾದ ಬಳಿಕ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ ಸಿಂಗ್ ಮತ್ತು 20ರ ಹರೆಯದ ಓರ್ವ ಯುವಕ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News