ವೀಸಾ ಅಧಿಕಾರಿ ಮೇಲೆ ಹಲ್ಲೆ ಆರೋಪ: ಕೊರಿಯಾ ಪ್ರಜೆ ಬಂಧನ
ಬೆಂಗಳೂರು,ಡಿ.19: ವೀಸಾ ಶುಲ್ಕ ಪಾವತಿಸುವಂತೆ ಸೂಚಿಸಿದ ಬೆಂಗಳೂರು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿ ವೈ.ಎಸ್.ಶೈನ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ದಕ್ಷಿಣ ಕೊರಿಯಾದ ಪ್ರಜೆಯನ್ನು ವಿಮಾನ ನಿಲ್ದಾಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕೊರಿಯಾದ ಪ್ರಜೆ ಸಿಗ್ವಾನ್ ಪಾರ್ಕ್(24) ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೆಝಿಲ್ ದೇಶದಿಂದ ಮಂಗಳವಾರ ರಾತ್ರಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಗ್ವಾನ್ ಪಾರ್ಕ್ ಅವರಿಗೆ ವಲಸೆ ಅಧಿಕಾರಿ ಶೈನ್ ಅವರು 2 ಸಾವಿರ ರೂ.ಗಳ ವೀಸಾ ಹಣ ಪಾವತಿಸುವಂತೆ ಸೂಚಿಸಿದ್ದಾರೆ.
ಆರೋಪಿಯು ಕ್ರೆಡಿಟ್ ಕಾರ್ಡ ಅನ್ನು ನೀಡಿದ್ದು, ಅದರಿಂದ ಹಣ ತೆಗೆದುಕೊಳ್ಳಲು ಸಾಧ್ಯವಿಲ್ಲ. ಭಾರತೀಯ ರೂಪಾಯಿಯಲ್ಲಿ ಶುಲ್ಕವನ್ನು ಪಾವತಿಸುವಂತೆ ಸೂಚಿಸಿದ್ದಾರೆ. ಆದರೆ, ನನ್ನ ಬಳಿ ಹಣವಿಲ್ಲವೆಂದು ಜಗಳ ತೆಗೆದ ಆರೋಪಿಯು ಶೈನ್ ಅವರ ಮುಖಕ್ಕೆ ಬಲವಾಗಿ ಗುದ್ದಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಸ್ಥಳೀಯ ಸಿಬ್ಬಂದಿ ಶೈನ್ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಸಿಗ್ವಾನ್ ಪಾರ್ಕ್ ಅನ್ನು ಪೊಲೀಸರಿಗೆ ಒಪ್ಪಿಸಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.