ಕಳವು ಪ್ರಕರಣ: ಅಪ್ರಾಪ್ತ ಬಾಲಕ ಸೇರಿ ಐವರ ಸೆರೆ

Update: 2018-12-19 16:01 GMT

ಬೆಂಗಳೂರು, ಡಿ.19: ಸುಮಾರು 15ಕ್ಕೂ ಹೆಚ್ಚು ಕನ್ನಗಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿ ಐವರನ್ನು ಇಲ್ಲಿನ ಜೀವನ್ ಭೀಮಾನಗರ ಠಾಣಾ ಪೊಲೀಸರು ಬಂಧಿಸಿ, 19.83 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ಪ್ರರಕಣ ಸಂಬಂಧ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಜಗದೀಶ್(19), ಮುನಿಬಚ್ಚಪ್ಪ ಕಾಲನಿಯ ಕಿರಣ್(18), ಹಲಸೂರಿನ ಗೌತಮ್ ಪುರದ ಬಾಲಾಜಿ(18), ಆನಂದಪುರದ ಮಣಿಮಾರನ್(29) ಬಂಧಿತ ಆರೋಪಿಗಳಾಗಿದ್ದು, ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಪಿಗಳಿಂದ 661 ಗ್ರಾಂ ಚಿನ್ನ, 3 ಬೈಕ್ ಸೇರಿ 19 ಲಕ್ಷ 83 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಗುಂಪು ಕಟ್ಟಿಕೊಂಡು, ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

ಸರಗಳ್ಳ: ಆಗಾಗ ಮನೆ ಬದಲಾಯಿಸಿಕೊಂಡು ಪೊಲೀಸರಿಗೆ ಕಣ್ತಪ್ಪಿಸಿ ಒಂಟಿ ಮಹಿಳೆಯರ ಚಿನ್ನದ ಸರಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ಮೈಸೂರಿನ ಗೌಸಿಯಾ ನಗರದ ಸುಹೆಲ್ ಪಾಶಾ(24) ಎಂಬಾತನನ್ನು ಇಲ್ಲಿನ ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 15 ಲಕ್ಷ 3 ಸಾವಿರ ಮೌಲ್ಯದ 500 ಗ್ರಾಂ ತೂಕದ 15 ಚಿನ್ನದ ಸರಗಳನ್ನು ವಶಪಡಿಸಿಕೊಂಡು 15 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಆಯುಕ್ತರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News