ವಿಶ್ವಸಂಸ್ಥೆ ಮುಖ್ಯಸ್ಥರೊಂದಿಗೆ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಇಮ್ರಾನ್

Update: 2018-12-22 16:29 GMT

ವಿಶ್ವಸಂಸ್ಥೆ, ಡಿ. 22: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ಗೆ ಫೋನ್ ಮಾಡಿ, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು ಎಂದು ವಿಶ್ವಸಂಸ್ಥೆಯ ವಕ್ತಾರರೊಬ್ಬರು ಹೇಳಿದ್ದಾರೆ.

ಆದರೆ, ಖಾನ್ ಮತ್ತು ಗುಟೆರಸ್ ನಡುವೆ ಏನು ಮಾತುಕತೆ ನಡೆಯಿತು ಎಂಬ ವಿವರಗಳನ್ನು ವಿಶ್ವಸಂಸ್ಥೆ ಮಹಾಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಡುಜರಿಕ್ ನೀಡಲಿಲ್ಲ.

 ‘ಪಾಕಿಸ್ತಾನ ತನ್ನ ಕೆಲಸವನ್ನು ನೋಡಿಕೊಳ್ಳಬೇಕು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’ ಎಂಬುದಾಗಿ ಭಾರತ ಪಾಕ್ ಪ್ರಧಾನಿಗೆ ನೀಡಿರುವ ಪ್ರತಿಕ್ರಿಯೆ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಯೊಂದಿಗೆ ಮಾತನಾಡಿದ ಡುಜರಿಕ್, ‘‘ಕಾಶ್ಮೀರ ಕುರಿತ ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟೀಕರಿಸಿದ್ದೇವೆ. ಭದ್ರತಾ ಮಂಡಳಿಯ ಆದೇಶದಂತೆ ಕಾಶ್ಮೀರ ವಿಷಯವನ್ನು ನೋಡಿಕೊಳ್ಳಲು ವೀಕ್ಷಕರ ಗುಂಪಿದೆ’’ ಎಂದರು.

ಅವರು ‘ಭಾರತ ಮತ್ತು ಪಾಕಿಸ್ತಾನದಲ್ಲಿರುವ ವಿಶ್ವಸಂಸ್ಥೆ ಸೇನಾ ವೀಕ್ಷಕ ಗುಂಪು (ಯುಎನ್‌ಎಂಒಜಿಐಪಿ)’ ಬಗ್ಗೆ ಪ್ರಸ್ತಾಪಿಸುತ್ತಿದ್ದರು.

‘‘ಕಾಶ್ಮೀರಿಗಳಿಗೆ ತಮ್ಮ ಭವಿಷ್ಯವನ್ನು ನಿರ್ಧರಿಸಲು ಅವಕಾಶ ನೀಡಬೇಕು’’ ಎಂಬುದಾಗಿ ಇತ್ತೀಚೆಗೆ ಇಮ್ರಾನ್ ಖಾನ್ ಟ್ವೀಟ್ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

ಭಾರತ ನಡೆಸುತ್ತಿದೆಯೆನ್ನಲಾದ ‘ಮಾನವಹಕ್ಕು ಉಲ್ಲಂಘನೆ’ಗಳ ಬಗ್ಗೆಯೂ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸುವುದು ಎಂಬುದಾಗಿಯೂ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News