ಅಸಾಂಜ್ ಬಂಧನ ಭೀತಿಯಿಲ್ಲದೆ ರಾಯಭಾರ ಕಚೇರಿಯಿಂದ ಹೋಗಲು ಬಿಡಿ: ಬ್ರಿಟನ್‌ಗೆ ವಿಶ್ವಸಂಸ್ಥೆ ಕರೆ

Update: 2018-12-22 16:38 GMT

ಜಿನೇವ, ಡಿ. 22: ಬಂಧನ ಅಥವಾ ಗಡಿಪಾರಿನ ಭೀತಿಯಿಲ್ಲದೆ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಿಂದ ಹೊರಹೋಗಲು ‘ವಿಕಿಲೀಕ್ಸ್’ ಸ್ಥಾಪಕ ಜೂಲಿಯನ್ ಅಸಾಂಜ್‌ಗೆ ಅವಕಾಶ ನೀಡುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಣತರು ಶುಕ್ರವಾರ ಬ್ರಿಟಿಶ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಲಂಡನ್‌ನ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅಸಾಂಜ್ 6 ವರ್ಷಗಳಿಂದ ಆಶ್ರಯ ಪಡೆದಿದ್ದಾರೆ.

ಅಸಾಂಜ್ ವಿರುದ್ಧ ಯಾವುದೇ ಆರೋಪಗಳಿಲ್ಲದೆ ಕಾನೂನುಬಾಹಿರವಾಗಿ ಅವರನ್ನು ರಾಯಭಾರ ಕಚೇರಿಯಲ್ಲಿ ಉಳಿಯುವಂತೆ ಮಾಡಲಾಗಿದೆ ಎಂಬುದಾಗಿ ಸ್ವೇಚ್ಛಾಚಾರದ ಬಂಧನ ಕುರಿತ ವಿಶ್ವಸಂಸ್ಥೆಯ ಕ್ರಿಯಾ ಗುಂಪು 2016 ಫೆಬ್ರವರಿಯಲ್ಲಿ ಹೇಳಿತ್ತು.

ಗುಂಪು ಈಗ ಅದೇ ಅಭಿಪ್ರಾಯವನ್ನು ಪುನರುಚ್ಚರಿಸಿದೆ.

ಅಸಾಂಜ್ ಸ್ವೀಡನ್‌ನಲ್ಲಿ ಲೈಂಗಿಕ ಆಕ್ರಮಣ ಮೊಕದ್ದಮೆ ಎದುರಿಸುತ್ತಿದ್ದಾರೆ. ಬ್ರಿಟನ್ ತನ್ನನ್ನು ಸ್ವೀಡನ್‌ಗೆ ಗಡಿಪಾರು ಮಾಡುವುದರಿಂದ ತಪ್ಪಿಸಿಕೊಳ್ಳಲು ಅವರು ಲಂಡನ್‌ನ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಮೊದಲು ಆಶ್ರಯ ಪಡೆದಿದ್ದರು. ಆದರೆ, ಬಳಿಕ ಸ್ವೀಡನ್ ಆ ಮೊಕದ್ದಮೆಯನ್ನು ಕೈಬಿಟ್ಟಿದೆ.

ಆದರೆ, ಅಮೆರಿಕ ಸರಕಾರದ ಗುಪ್ತ ದಾಖಲೆಗಳನ್ನು ಸೋರಿಕೆ ಮಾಡಿರುವುದಕ್ಕಾಗಿ ತನ್ನನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಸಂಚು ಇದಾಗಿದೆ ಎಂಬುದಾಗಿ ಅಸಾಂಜ್ ಆರೋಪಿಸಿದ್ದಾರೆ.

ಜಾಮೀನು ಶರತ್ತುಗಳನ್ನು ಉಲ್ಲಂಘಿಸಿರುವುದಕ್ಕಾಗಿ ಅಸಾಂಜ್‌ರನ್ನು ಬಂಧಿಸಲಾಗುವುದು ಎಂದು ಬ್ರಿಟನ್ ಹೇಳಿದೆ. ಆದರೆ, ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದರೆ ಅವರ ಶಿಕ್ಷೆ 6 ತಿಂಗಳು ಮೀರುವುದಿಲ್ಲ ಎಂದೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News