ರಣಜಿ ಟ್ರೋಫಿ: ಕರ್ನಾಟಕಕ್ಕೆ ಆಸರೆಯಾದ ಸಿದ್ಧಾರ್ಥ್, ನಿಶ್ಚಲ್

Update: 2018-12-22 18:55 GMT

ಶಿವಮೊಗ್ಗ, ಡಿ.22: ಕೃಷ್ಣಮೂರ್ತಿ ಸಿದ್ಧಾರ್ಥ್ ಹಾಗೂ ದೇಗಾ ನಿಶ್ಚಲ್ ಅವರ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ ರಣಜಿ ಟೂರ್ನಿಯ ಎ ಗುಂಪಿನ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದೆ.

ಶನಿವಾರ ಇಲ್ಲಿನ ಕೆಎಸ್‌ಸಿಎ ನವುಲೆ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ರೈಲ್ವೇಸ್ ನಾಯಕ ಅರಿಂದಮ್ ಘೋಷ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಕ್ವಾರ್ಟರ್‌ಫೈನಲ್ ತಲುಪಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕರ್ನಾಟಕ ಬ್ಯಾಟಿಂಗ್ ಆರಂಭಿಸಿತು. ತಂಡಕ್ಕೆ ಆರಂಭದಲ್ಲೇ ರೈಲ್ವೇಸ್ ಬೌಲರ್‌ಗಳು ಆಘಾತ ನೀಡಿದರು. ಕೇವಲ 17 ರನ್ ಗಳಿಸುವಷ್ಟರಲ್ಲಿ ತಂಡದ ಮೂವರು ದಾಂಡಿಗರು(ಆರ್.ಸಮರ್ಥ್, ದೇವದತ್ತ್ ಹಾಗೂ ನಾಯಕ ಮನೀಷ್ ಪಾಂಡೆ) ಪೆವಿಲಿಯನ್‌ಗೆ ತೆರಳಿಯಾಗಿತ್ತು. ಈ ಹಂತದಲ್ಲಿ ತಂಡಕ್ಕೆ ಆಸರೆ ಒದಗಿಸಿದ ದೇಗಾ ನಿಶ್ಚಲ್ (52 , 175 ಎಸೆತ 4 ಬೌಂಡರಿ) ಹಾಗೂ ಕೃಷ್ಣಮೂರ್ತಿ ಸಿದ್ಧಾರ್ಥ್ (69, 185 ಎಸೆತ, 6 ಬೌಂಡರಿ, 2 ಸಿಕ್ಸರ್) ತಂಡವನ್ನು ದಿಢೀರ್ ಕುಸಿತದ ಭೀತಿಯಿಂದ ಪಾರು ಮಾಡಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶ್ರೀನಿವಾಸ್ ಶರತ್(ಅಜೇಯ 28) ಶ್ರೇಯಸ್ ಗೋಪಾಲ್(20) ಹಾಗೂ ಅಭಿಮನ್ಯು ಮಿಥುನ್(16) ಬ್ಯಾಟಿಂಗ್‌ನಲ್ಲಿ ಅಲ್ಪ ಕಾಣಿಕೆ ನೀಡಿದರು. ಪ್ರಸಿದ್ಧ ಕೃಷ್ಣ (2)ಹಾಗೂ ವಿಕೆಟ್ ಕೀಪರ್ ಶರತ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ರೈಲ್ವೇಸ್ ಪರ ಬೌಲಿಂಗ್‌ನಲ್ಲಿ ಮಿಂಚಿದ ಅವಿನಾಶ್ ಯಾದವ್ 43 ರನ್ ವ್ಯಯಿಸಿ 3 ಅಮೂಲ್ಯ ವಿಕೆಟ್ ಪಡೆದರೆ ಅವರಿಗೆ ಉತ್ತಮ ಸಾಥ್ ನೀಡಿದ ಎಸಿಪಿ ಮಿಶ್ರಾ 57 ರನ್ ನೀಡಿ 3 ವಿಕೆಟ್ ಕಬಳಿಸಿದರು. ಕರಣ್ ಠಾಕೂರ್ 2 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

ಕರ್ನಾಟಕ ಈ ಪಂದ್ಯದಲ್ಲಿ ವಿನಯ್‌ಕುಮಾರ್ ಬದಲಿಗೆ ಸ್ಫೋಟಕ ದಾಂಡಿಗ ಮನೀಷ್ ಪಾಂಡೆ ನಾಯಕತ್ವದಲ್ಲಿ ಕಣಕ್ಕಿಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News