ರೈತರ ಸವಲತ್ತುಗಳು ಅನ್ಯರ ಪಾಲು: ನಾಡಿನ ಕೃಷಿ ಸಾಧಕರ ಅಳಲು
ಸಾಲಮನ್ನಾಕ್ಕಿಂತ ಬೆಂಬಲ ಬೆಲೆಗೆ ಆದ್ಯತೆ ನೀಡಿ: ರೆತರ ಬೇಡಿಕೆ
ಬೆಂಗಳೂರು, ಡಿ. 22: ‘‘ಕೃಷಿಕರಿಗಾಗಿ ಸರಕಾರ ನೀಡುವ ಬಹುತೇಕ ಸವಲತ್ತುಗಳು ರೈತರಲ್ಲದವರ ಪಾಲಾಗುತ್ತಿದೆ’’ ಕಿಸಾನ್ ದಿನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರೈತರನ್ನು ವಾರ್ತಾಭಾರತಿ ಸಂದರ್ಶಿಸಿದಾಗ ಅವರಿಂದ ಹೊರಬಿದ್ದ ಒಕ್ಕೊರಲ ಅಭಿಮತವಾಗಿದೆ. ಒಂದೆಡೆ ಬಿಜೆಪಿ ಸರಕಾರದ ಅವಧಿಯಲ್ಲಿ ಸಾವಯವ ಯೋಜನೆಗಾಗಿ ಮೀಸಲಿಟ್ಟ ನಿಧಿಯೂ ಸೇರಿದಂತೆ ಬೇರೇ ಬೇರೆ ರೀತಿಯ ಸವಲತ್ತುಗಳನ್ನು ರಾಜಕೀಯ ಕಾರ್ಯಕರ್ತರು, ಮಧ್ಯವರ್ತಿಗಳು, ಭೂಮಾಲಕರು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ನಿಜವಾದ ರೈತರಿಗೆ ಅದು ತಲುಪುತ್ತಿಲ್ಲ ಎಂದು ರಾಜ್ಯದ ರೈತರು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಸರಕಾರ ರೈತರೊಂದಿಗೆ ನೇರ ಸಂಪರ್ಕ ಮಾಡುವ ಕಾರ್ಯವಾಗಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಅನಿವಾರ್ಯ ಇದೆ ಎನ್ನುವುದು ದಾವಣಗೆರೆಯ ಕೃಷಿ ಪಂಡಿತ ಪ್ರಶಸ್ತಿಗೆ ಭಾಜನರಾಗಿರುವ ರಾಮಾಂಜನೇಯ ಸ್ವಾಮಿಯ ಅನಿಸಿಕೆಯಾಗಿದೆ. ಕೃಷಿಯನ್ನು ಸಹ ಸರಕಾರ ಬೃಹತ್ ಉದ್ಯಮದಂತೆಯೇ ಪರಿಗಣಿಸಿ, ಅದಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೆಲವೊಂದು ಯೋಜನೆಗಳಲ್ಲಿ ರೈತರ ಸವಲತ್ತುಗಳು ರೈತೇತರರ ಪಾಲಾಗುತ್ತಿವೆ. ಸರಕಾರದ ಮಾನದಂಡಗಳು ಅನುಷ್ಠಾನವಾಗುತ್ತಿಲ್ಲ. ಇದಕ್ಕಾಗಿ ಪಾರದರ್ಶನ ನೀತಿಯನ್ನು ರೂಪಿಸಬೇಕಾಗಿದೆ ಎನ್ನುವುದು ಸಾವಯವ ಕೃಷಿಯ ಮೂಲಕ ಯಶಸ್ವಿಯಾಗಿರುವ ಶಿವಮೊಗ್ಗದ ಶ್ರೀಕುಮಾರ ನಾಯ್ಡು ಒತ್ತಾಯಿಸಿದ್ದಾರೆ. ಇವರ ಕುಟುಂಬ ಕೃಷಿ ಆದಾಯವನ್ನೇ ಅವಲಂಬಿಸಿದೆ.
ಸರಕಾರ ಕೃಷಿ ಸಲಕರಣೆಗಳು, ಯಂತ್ರೋಪಕರಣಗಳನ್ನು ಕೊಳ್ಳಲು ಸಬ್ಸಿಡಿ ನೀಡುತ್ತದೆ. ಆದರೆ ಸಬ್ಸಿಡಿ ಎನ್ನುವುದೇ ಮೋಸ ಎಂಬಂತಾಗಿದೆ. ರೈತರ ಹೆಸರಲ್ಲಿ ಅಧಿಕಾರಿಗಳು, ರಾಜಕಾರಣಿಗಳು, ಗೊಬ್ಬರ, ಕೀಟನಾಶಕ ತಯಾರಿಸುವ ಕಂಪೆನಿಗಳು ಹಣ ಲೂಟಿ ಮಾಡುತ್ತಿವೆ ಎನ್ನುವುದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೈತ ಚಂದ್ರೇಗೌಡರ ಅಭಿಪ್ರಾಯ. ನಕಲಿ ದಾಖಲಾತಿ ನೀಡಿ ಕೃಷಿಗೆ ಇರುವ ಸಹಾಯಧನ ಪಡೆಯುವ ಜನರು ಅಧಿಕವಾಗಿದ್ದಾರೆ. ಹೈನುಗಾರಿಕೆ ಮಾಡಲು ಸಹಾಯ ಧನ ಪಡೆದು ಕೇವಲ ಎರಡು ತಿಂಗಳಲ್ಲೇ ಹಸುವನ್ನು ಮಾರಾಟ ಮಾಡಿದವರನ್ನು ನೋಡಿದ್ದೇನೆ. ಕೃಷಿ ಉಪಕರಣಗಳಿಗೆ ದೊರೆಯುವ ಸಹಾಯಧನವೂ ದುರ್ಬಳಕೆಯಾಗುತ್ತಿದೆ ಎನ್ನುವುದು ಇಂಜಿನಿಯರಿಂಗ್ ಮಾಡಿ, ಬಶಿಕ ಕೃಷಿ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡ ಗದಗ ಜಿಲ್ಲೆಯ ಬಸವರಾಜ ಅವರ ಅಳಲಾಗಿದೆ.