ಶ್ರೀಸಾಮಾನ್ಯನ ಖಾಸಗಿತನದ ಹಕ್ಕಿಗೆ ಸರಕಾರದ ಕಡಿವಾಣ

Update: 2018-12-24 04:23 GMT

ಆಧಾರ್ ಗುರುತು ಚೀಟಿ ಕಾಲಿಡುತ್ತದೆ ಎನ್ನುವಾಗ ಈ ದೇಶದಲ್ಲಿ ಚರ್ಚೆಯಾಗಿದ್ದು ಖಾಸಗಿತನದ ಹಕ್ಕುಗಳ ಕುರಿತಂತೆ. ಆಧಾರ್ ಹೇಗೆ ನಮ್ಮ ಖಾಸಗಿ ಮಾಹಿತಿಗಳನ್ನು ಬಹಿರಂಗ ಪಡಿಸಬಹುದು ಎನ್ನುವುದರ ಕುರಿತಂತೆ ಸಾಕಷ್ಟು ತಜ್ಞರು ತಮ್ಮ ಆತಂಕ ವ್ಯಕ್ತಪಡಿಸಿದ್ದರು. ಜನರ ಖಾಸಗಿ ಮಾಹಿತಿಗಳನ್ನು ತನ್ನದಾಗಿಸಿಕೊಳ್ಳುವ ಹುನ್ನಾರಕ್ಕಾಗಿಯೇ ಸರಕಾರ ಆಧಾರ್‌ನ್ನು ತಂದಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಆಧಾರ್‌ನಿಂದ ಮಾಹಿತಿಗಳು ಹೇಗೆ ಸೋರಿಕೆಯಾಗಬಹುದು ಎನ್ನುವುದು ಇದೀಗ ಬಹಿರಂಗವಾಗಿದೆ. ಈವರೆಗೆ ಸರಕಾರ ಖಾಸಗಿ ಮಾಹಿತಿ ಸೋರಿಕೆಯಾಗುವುದಿಲ್ಲ ಎನ್ನುವ ಸಮರ್ಥನೆಗಳ ಮೂಲಕ ಆರೋಪಗಳನ್ನು ಎದುರಿಸುತ್ತಿತ್ತು. ಇದೀಗ ಮೋದಿ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಜನಸಾಮಾನ್ಯರ ಖಾಸಗಿ ಮಾಹಿತಿಗಳು ನಮ್ಮ ಹಕ್ಕು ಎಂದು ಸರಕಾರ ಬಹಿರಂಗವಾಗಿ ಘೋಷಿಸಲು ಹೊರಟಿದೆ. ಆದುದರಿಂದಲೇ, ಯಾವುದೇ ಕಂಪ್ಯೂಟರ್‌ನಲ್ಲಿ ಉತ್ಪಾದಿಸಲಾದ ಯಾವುದೇ ಮಾಹಿತಿಯನ್ನು ತಡೆಯುವ, ನಿಗಾಯಿಡುವ ಮತ್ತು ಭೇದಿಸುವ ಅನುಮತಿಯ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಕುರಿತಂತೆ ಸ್ವತಃ ನ್ಯಾಯವಾದಿಗಳು ಮತ್ತು ಸೈಬರ್ ಭದ್ರತಾ ತಜ್ಞರೇ ತೀವ್ರ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಗುರುವಾರದ ಅಧಿಸೂಚನೆಯು ಕಂಪ್ಯೂಟರ್ ದತ್ತಾಂಶಗಳನ್ನು ತಡೆಯಲು, ನಿಗಾಯಿಡಲು ಮತ್ತು ಭೇದಿಸಲು ಗುಪ್ತಚರ ಇಲಾಖೆ, ಮಾದಕದ್ರವ್ಯ ನಿಯಂತ್ರಣ ದಳ, ಜಾರಿ ನಿರ್ದೇಶನಾಲಯ, ಕೇಂದ್ರೀಯ ನೇರ ತೆರಿಗೆ ಮಂಡಳಿ, ಅಬಕಾರಿ ಗುಪ್ತಚರ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆ, ರಾಷ್ಟ್ರೀಯ ತನಿಖಾ ಸಂಸ್ಥೆ, ಸಂಪುಟ ಕಾರ್ಯಾಲಯ (ರಾ), ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಮತ್ತು ಅಸ್ಸಾಂನ ಸಂಕೇತ ಗುಪ್ತಚರ ದಳ ನಿರ್ದೇಶನಾಲಯ ಮತ್ತು ದಿಲ್ಲಿ ಪೊಲೀಸ್ ಕಮಿಷನರ್ ಗೆ ಅಧಿಕಾರ ನೀಡಿದೆ. ಈ ಅಧಿಸೂಚನೆಯಿಂದ ಖಾಸಗಿತನದ ಮೂಲಭೂತ ಹಕ್ಕಿಗೆ ಅಪಾಯ ಎದುರಾಗಿದೆ. ಈ ಮೂಲಕ ಸರಕಾರ ತನ್ನ ದುರುದ್ದೇಶಗಳಿಗೆ ಕಾನೂನನ್ನು ಬಳಸಿಕೊಳ್ಳಲಿದೆ. ಶ್ರೀಸಾಮಾನ್ಯನ ಬದುಕನ್ನು ಇನ್ನಷ್ಟು ದುರ್ಬರವನ್ನಾಗಿಸಲಿದೆ. ಜೇಟ್ಲಿಯವರು ಈ ಅಧಿಸೂಚನೆಯನ್ನು ಸಮರ್ಥಿಸುತ್ತಾ, ಈ ಆದೇಶವನ್ನು ನಾವು ಹೊಸತಾಗಿ ನೀಡುತ್ತಿಲ್ಲ. ಬದಲಿಗೆ ಇದನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲೇ ಉಲ್ಲೇಖಿಸಲಾಗಿದೆ ಎಂದಿದ್ದಾರೆ ಮತ್ತು ಅದನ್ನು ಯುಪಿಎ ಸರಕಾರದ ತಲೆಗೆ ಕಟ್ಟಿ ತಮ್ಮ ಸರಕಾರವನ್ನು ರಕ್ಷಿಸಿಕೊಳ್ಳಲು ಹೊರಟಿದ್ದಾರೆ. ಯುಪಿಎ ಸರಕಾರ ಮಾಡಿದ್ದೆಲ್ಲ ಸರಿ ಎಂದಾದರೆ ಹೊಸ ಸರಕಾರವನ್ನು ಆರಿಸುವ ಅಗತ್ಯ ಏನಿತ್ತು? ಯುಪಿಎ ತಪ್ಪು ಮಾಡಿದೆ ಎನ್ನುವುದು ಮೋದಿ ಸರಕಾರ ತಪ್ಪು ಮಾಡುವುದಕ್ಕಿರುವ ಪರವಾನಿಗೆ ಎಂದು ಜೇಟ್ಲಿಯವರಿಗೆ ಹೇಳಿದವರು ಯಾರು?

ಸದ್ಯ ಸರಕಾರ ಗುರುವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಹತ್ತು ಸಂಸ್ಥೆಗಳಿಗೆ ನೀಡಿರುವ ಅಧಿಕಾರದ ಪ್ರಸ್ತಾವ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದಲ್ಲಿ ಇದೆ ಎಂದು ತಜ್ಞರೂ ಒಪ್ಪುತ್ತಾರೆ. ಕಂಪ್ಯೂಟರ್ ಮೇಲೆ ನಿಗಾಯಿಡುವ ಕಾನೂನು ನಿಬಂಧನೆಯನ್ನು 2008ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಪರಿಚಯಿಸಲಾಗಿತ್ತು. ಆದರೆ, ನೂತನ ಆದೇಶದ ಮೂಲಕ ಬಿಜೆಪಿ ನೇತೃತ್ವದ ಸರಕಾರ ಕಂಪ್ಯೂಟರ್ ಮಾಹಿತಿಗಳ ಮೇಲೆ ನಿಗಾಯಿಡಲು ಸೂಚಿಸಿ ಈ ನಿಬಂಧನೆಯನ್ನು ಅಧಿಕೃತಗೊಳಿಸಲು ಹೊರಟಿದೆ . ಅಂದರೆ ಮಾಹಿತಿ ಮೇಲೆ ಕಣ್ಗಾವಲಿಡುವ ಅಧಿಕಾರ ಮೊದಲೇ ಇತ್ತು ಎನ್ನುವುದು ನಿಜ. ಆದರೆ ಅದಕ್ಕಾಗಿಯೇ ವಿಶೇಷ ಅಧಿಸೂಚನೆಯನ್ನು ಈವರೆಗೆ ಹೊರಡಿಸಿರಲಿಲ್ಲ. ಆ ಅಧಿಕಾರವನ್ನು ನಿರ್ದಿಷ್ಟ ಸಂಸ್ಥೆಗಳಿಗೆ ಒಪ್ಪಿಸಿರಲೂ ಇಲ್ಲ. ಕಂಪ್ಯೂಟರ್ ಮಾಹಿತಿಯ ವಿಚಕ್ಷಣೆಗೆ ಅವಕಾಶ ನೀಡುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ಕ್ಕೆ 2008ರಲ್ಲಿ ತಿದ್ದುಪಡಿ ತರಲಾಯಿತು. ಆದರೆ ಇದು ಕಾರ್ಯಾಚರಿಸುವ ನಿಯಮಗಳನ್ನು 2009ರಲ್ಲಿ ಪ್ರಚುರಪಡಿಸಲಾಯಿತು. 2017ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿತು. ಆದುದರಿಂದ ಸರಕಾರದ ಅಧಿಸೂಚನೆ ಸ್ಪಷ್ಟವಾಗಿ ಸಾಂವಿಧಾನಿಕ ಮಾನ್ಯತೆಯ ವಿಷಯವಾಗಿ ಪರಿವರ್ತನೆಗೊಂಡಿದೆ.

ಇಂದು ಸಿಬಿಐಯಿಂದ ಹಿಡಿದು ಎಲ್ಲ ತನಿಖಾ ಸಂಸ್ಥೆಗಳಲ್ಲೂ ಸರಕಾರ ಬಹಿರಂಗವಾಗಿ ಹಸ್ತಕ್ಷೇಪ ನಡೆಸುತ್ತಿದೆ. ಗುಪ್ತಚರ ಇಲಾಖೆಗಳು ದೇಶದ ಹಿತಾಸಕ್ತಿಗಿಂತ ಸರಕಾರದೊಳಗಿರುವ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂಬ ವ್ಯಾಪಕ ಆರೋಪಗಳಿವೆ. ಜೊತೆಗೆ ಈ ತನಿಖಾ ಸಂಸ್ಥೆಗಳೊಳಗೆ ಸಂಘಪರಿವಾರದ ಶಕ್ತಿಗಳು ನುಸುಳಿಕೊಂಡಿವೆ. ಜನಸಾಮಾನ್ಯರ ಖಾಸಗಿ ಮಾಹಿತಿಗಳು ರಾಜಕೀಯ ನಾಯಕರಿಗೆ ಮಾತ್ರವಲ್ಲ, ಸರಕಾರೇತರ ಸಂಸ್ಥೆಗಳಿಗೂ ಸೋರಿಕೆಯಾಗುವ ಮತ್ತು ದೇಶವನ್ನಾಳುವವರು ಈ ಸಂಸ್ಥೆಯನ್ನು ಬಳಸಿಕೊಂಡು ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು ಪ್ರಯತ್ನಿಸುವ ಎಲ್ಲ ಸಾಧ್ಯತೆಗಳಿವೆ. ಒಂದು ವೇಳೆ ಈ ಅಧಿಸೂಚನೆಯನ್ನು ನ್ಯಾಯಾಲಯ ಎತ್ತಿ ಹಿಡಿದದ್ದೇ ಆದರೆ, ಈ ದೇಶದ ಶ್ರೀಸಾಮಾನ್ಯ ತನ್ನ ಮೂಲಭೂತ ಖಾಸಗಿ ಹಕ್ಕನ್ನು ಕಳೆದುಕೊಳ್ಳುತ್ತಾನೆ. ನಿಮ್ಮ ಖಾಸಗಿ ಕೋಣೆಯೊಳಗೆ ಇಣುಕಿ ನೋಡುವುದು ಸರಕಾರದ ಹಕ್ಕು ಎಂದ ಮೇಲೆ, ಸಂವಿಧಾನಕ್ಕೆ ಬೆಲೆ ಎಲ್ಲಿ ಉಳಿಯಿತು? ಪ್ರಜಾಸತ್ತೆಯನ್ನೇ ಬಳಸಿಕೊಂಡು ಮೋದಿ ಸರಕಾರ ಹೇಗೆ ಜನಸಾಮಾನ್ಯರನ್ನು ತುರ್ತು ಪರಿಸ್ಥಿತಿಗೆ ತಳ್ಳುತ್ತಿದೆ ಎನ್ನುವುದಕ್ಕೆ ಈ ಅಧಿಸೂಚನೆ ಒಂದು ಉದಾಹರಣೆಯಾಗಿದೆ. ಇದರ ವಿರುದ್ಧ ನ್ಯಾಯಾಲಯದ ಒಳಗೂ, ಹೊರಗೂ ಹೋರಾಟ ಅನಿವಾರ್ಯವಾಗಿದೆ. ಇಲ್ಲವಾದರೆ, ಕೇಂದ್ರದ ನಿರಂಕುಶತೆಗೆ ರಾಜ್ಯ ಸರಕಾರಗಳೆಲ್ಲ ತಮ್ಮ ತಮ್ಮ ಸ್ವಾಯತ್ತೆಯನ್ನು ಒಪ್ಪಿಸಿ ಅಸಹಾಯಕವಾಗಬೇಕಾಗುತ್ತದೆ. ಜನಸಾಮಾನ್ಯರ ಪ್ರಶ್ನಿಸುವ ಎಲ್ಲ ಧ್ವನಿಗಳೂ ದಫನವಾಗಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News