ಆದಿತ್ಯನಾಥ್ ಮೀಸಲಾತಿ ಮಾತು ಉ. ಪ್ರದೇಶದ ಸೋಲಿನ ಭಯದಿಂದಲೇ?

Update: 2024-04-27 06:15 GMT

ಉತ್ತರ ಪ್ರದೇಶ ಬಿಜೆಪಿ ಕೋಟೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಯೇ ಆದಿತ್ಯನಾಥ್ ಮತ್ತು ಮೋದಿ ಜೋಡಿ ಅಲ್ಲಿನ ರಾಜಕಾರಣದಲ್ಲಿ ಆಡುವ ಆಟದ ಬಗ್ಗೆಯೂ ಗೊತ್ತೇ ಇರುತ್ತದೆ.

ಈಗ ಅಂಥ ಉತ್ತರ ಪ್ರದೇಶದಲ್ಲಿಯೇ ಬಿಜೆಪಿಗೆ ಲೋಕಸಭೆಯ 80 ಸೀಟುಗಳಲ್ಲಿ 60 ಸೀಟುಗಳನ್ನು ಗೆಲ್ಲುವುದು ಬಹಳ ಕಷ್ಟವಾಗಲಿದೆಯೇ?

ಅದು ಬಿಜೆಪಿ ಮಂದಿಯ ತಲೆಬಿಸಿ ಮಾಡಿ, ಹೇಗೆ ಹೇಗೋ ಮಾತಾಡಲು ಕಾರಣವಾಗುತ್ತಿದೆಯೆ? ಉತ್ತರ ಪ್ರದೇಶದಲ್ಲಿ ನಿಧಾನವಾಗಿ ರಾಜಕೀಯ ಬದಲಾಗುತ್ತಿದೆಯೆ? ಅಲ್ಲಿ ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ ವರಸೆಗಳು ಬದಲಾವಣೆಯ ಅಲೆಯೆಬ್ಬಿಸುವ ಸೂಚನೆಗಳಿವೆಯೆ? ಹೀಗಾಗಿಯೇ ಭಗವಾಧ್ವಜ ಹಿಡಿದಿದ್ದ ಆದಿತ್ಯನಾಥ್ ಈಗ ಅದನ್ನು ಬದಿಗಿಟ್ಟು ಮೀಸಲಾತಿ ಮಾತು ಶುರು ಮಾಡಿದ್ದಾರೆಯೇ? ಎಂದೂ ಮೀಸಲಾತಿ ಬಗ್ಗೆ ಮಾತಾಡದವರು ಏಕೆ ಈಗ ಇದ್ದಕ್ಕಿದ್ದಂತೆ ದಲಿತರು, ಹಿಂದುಳಿದವರ ವಿಚಾರದಲ್ಲಿ ಕಳಕಳಿ ಉಕ್ಕಿ ಬಂದವರಂತೆ ಧಾಟಿ ಬದಲಿಸಿದ್ದಾರೆ? ಆದಿತ್ಯನಾಥ್ ನಡೆಯಿಂದ ಇಂತಹ ಹಲವಾರು ಪ್ರಶ್ನೆಗಳು ಕಾಡುತ್ತಿವೆ.

ಅಂದಹಾಗೆ, ಇದೇನೂ ಹಿಂದುಳಿದವರ ಬಗೆಗಿನ ದಲಿತರ ಬಗೆಗಿನ ಕಳಕಳಿಯೇನೂ ಅಲ್ಲ. ಮತ್ತೆ ಯಥಾ ಪ್ರಕಾರ ಬಿಜೆಪಿ ಮಂದಿ ಇಲ್ಲಿ ಮಾಡುತ್ತಿರುವುದು ಕೂಡ ಹಿಂದೂ- ಮುಸ್ಲಿಮ್ ರಾಜಕಾರಣವನ್ನೇ ಎಂಬುದನ್ನು ಯಾರೇ ಆದರೂ ಗುರುತಿಸಬಹುದಾಗಿದೆ.

ಆದರೆ ಅದನ್ನು ಮಾಡುತ್ತಿರುವ ದಾರಿ ಮಾತ್ರ ಮೀಸಲಾತಿ ಎಂಬುದನ್ನು ಬಳಸಿಕೊಂಡು, ದಲಿತರು ಮತ್ತು ಹಿಂದುಳಿದವರನ್ನು ಸೆಳೆಯುತ್ತಲೇ, ಮುಸ್ಲಿಮರ ವಿರುದ್ಧ ಅವರನ್ನು ಎತ್ತಿ ಕಟ್ಟುವುದಾಗಿದೆ.

ಆದಿತ್ಯನಾಥ್ ಹೇಳಿರುವುದೇನು ಎನ್ನುವುದನ್ನು ಗಮನಿಸುವುದಾದರೆ...

ಕಾಂಗ್ರೆಸ್‌ನವರು ಕರ್ನಾಟಕದಲ್ಲಿ ಏನು ಮಾಡಿದರು ಎಂದು ಕೇಳುತ್ತಾರೆ ಆದಿತ್ಯನಾಥ್.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯಲ್ಲಿ ಕಡಿತಗೊಳಿಸಿ, ಒಬಿಸಿಗಳ ಪಟ್ಟಿಯಲ್ಲೇ ಮುಸ್ಲಿಮರಿಗೂ ಕಾಂಗ್ರೆಸ್ ಮೀಸಲಾತಿ ಕಲ್ಪಿಸಿತ್ತು ಎನ್ನುತ್ತಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ಒಬಿಸಿಯೊಳಗೇ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎನ್ನುವ ಆದಿತ್ಯನಾಥ್, ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಹಕ್ಕುಗಳನ್ನೇ ಕಸಿದುಕೊಳ್ಳಲು ಕಾಂಗ್ರೆಸ್ ಉದ್ದೇಶಿಸಿದೆ ಎಂದು ಆರೋಪಿಸುತ್ತಾರೆ.

ಯುಪಿಎ ಸರಕಾರದ ಸಾಚಾರ್ ಸಮಿತಿ ವರದಿಯ ಬಗ್ಗೆ ಪ್ರಸ್ತಾಪಿಸುವ ಆದಿತ್ಯನಾಥ್, ಮುಸ್ಲಿಮರಿಗೆ ಮೀಸಲಾತಿ ಹಂಚುವ ಉದ್ದೇಶ ಅದರಲ್ಲಿತ್ತು ಎನ್ನುತ್ತಾರೆ. ಬಿಜೆಪಿಯ ತೀವ್ರ ವಿರೋಧದಿಂದಾಗಿ ಕಾಂಗ್ರೆಸ್ ಅದನ್ನು ಹಿಂದೆಗೆದುಕೊಳ್ಳಬೇಕಾಯಿತು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ.

ಮೋದಿ ಕೂಡ ಇದರದ್ದೇ ಎಳೆ ಹಿಡಿದುಕೊಂಡು ಕಾಂಗ್ರೆಸ್ ವಿರುದ್ಧ ಮಾತಾಡಿದ್ದಾರೆ.

ಹಿಂದುಳಿದವರು ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಹೇಳುವ ಮೂಲಕ ಮೋದಿ ತಮ್ಮ ಹಸಿ ಸುಳ್ಳುಗಳ ಸರಣಿ ಮುಂದುವರಿಸಿದ್ದಾರೆ.

ಒಬಿಸಿ ಪಟ್ಟಿಯಲ್ಲಿಯೇ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಕಾಂಗ್ರೆಸ್ ಒಬಿಸಿ ಸಮುದಾಯದ ದೊಡ್ಡ ಪಾಲನ್ನು ಕಸಿದುಕೊಂಡಿತ್ತು. ಕಾಂಗ್ರೆಸ್ ಒಬಿಸಿಗಳ ದೊಡ್ಡ ಶತ್ರುವಾಗಿದೆ ಎಂದೆಲ್ಲ ಆರೋಪಿಸಿದ್ದಾರೆ.

ಇದೆಲ್ಲ ವರಸೆ ಶುರುವಾಗಿದ್ದು ಮೊದಲ ಹಂತದ ಮತದಾನ ಮುಗಿದು ಅದರ ಅಂದಾಜು ಬಿಜೆಪಿ ವರಿಷ್ಠರ ಕೈಸೇರಿದ ಬಳಿಕ ಎಂಬುದು ಇಲ್ಲಿ ಗಮನಾರ್ಹ.

ಚುನಾವಣೆಯಲ್ಲಿ ಫಲಿತಾಂಶ ತಾವಂದುಕೊಂಡ ಹಾಗಿರುವುದಿಲ್ಲ ಎಂಬ ಸುಳಿವು ಸಿಗುತ್ತಿದ್ದಂತೆ ಹೇಗೆ ಬಿಜೆಪಿಯ ವರಸೆಯೇ ಬದಲಾಗುತ್ತಿದೆ ಎಂಬುದಕ್ಕೆ ಆದಿತ್ಯನಾಥ್ ಮತ್ತು ಮೋದಿಯವರ ಈ ಸುಳ್ಳುಗಳು ಸಾಕ್ಷಿ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ಒಬಿಸಿಯೊಳಗೇ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂಬ ಬಿಜೆಪಿ ಆರೋಪ ಎಷ್ಟು ದೊಡ್ಡ ಸುಳ್ಳು?

ಕಾಂಗ್ರೆಸ್ ಸರಕಾರ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಮತ್ತು ಹಿಂದುಳಿದ ವರ್ಗಗಳ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡಿದೆ ಎಂದು ಬಿಜೆಪಿ ಹೇಳುತ್ತಿರುವುದರಲ್ಲಿ ಎಳ್ಳಷ್ಟಾದರೂ ನಿಜ ಇದೆಯೇ ?

ಸಿದ್ದರಾಮಯ್ಯ ಸರಕಾರ ನಿಜವಾಗಿಯೂ ಹಿಂದುಳಿದ ವರ್ಗಗಳ ಸಾಂವಿಧಾನಿಕ ಹಕ್ಕನ್ನು ಕಸಿದು ಮುಸ್ಲಿಮರಿಗೆ ನೀಡಿದೆಯೇ?

ವಾಸ್ತವ ಏನೆಂದರೆ, ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿರುವುದು ಈಗಿನ ಬೆಳವಣಿಗೆಯೇನೂ ಅಲ್ಲ. 1977ರಿಂದಲೂ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿದೆ.

ಮೋದಿ, ಆದಿತ್ಯನಾಥ್ ಸೇರಿದಂತೆ ಬಿಜೆಪಿಯವರು ಹೇಳುತ್ತಿರುವ ಸುಳ್ಳುಗಳು ಎಂಥವು ಎಂಬುದನ್ನು ಅರ್ಥ ಮಾಡಿಕೊಳ್ಳಲು ಕರ್ನಾಟಕದಲ್ಲಿನ ಮುಸ್ಲಿಮ್ ಮಿಸಲಾತಿಯ ಇತಿಹಾಸವನ್ನು ಒಮ್ಮೆ ನೋಡಬೇಕು.

1. ಕರ್ನಾಟಕದ ಹಿಂದುಳಿದ ವರ್ಗಗಳ ಕುರಿತ ಎಲ್.ಜಿ. ಹಾವನೂರ ವರದಿ 1975ರಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ಅದು ಮುಸ್ಲಿಮರನ್ನು ಮೀಸಲಾತಿಗೆ ಅರ್ಹ ಹಿಂದುಳಿದ ವರ್ಗ ಎಂದು ಗುರುತಿಸಿದೆ.

2. ಆ ವರದಿಯ ಶಿಫಾರಸಿನಂತೆ ಮುಸ್ಲಿಮರನ್ನು ಹಿಂದುಳಿದ ಸಮುದಾಯಗಳ ಅಡಿಯಲ್ಲಿ ಅಂದರೆ, ಹಿಂದುಳಿದ ಜಾತಿ, ಹಿಂದುಳಿದ ಬುಡಕಟ್ಟು ಮತ್ತು ವಿಶೇಷ ಗುಂಪುಗಳ ಅಡಿಯಲ್ಲಿ ಸೇರಿಸಲಾಯಿತು. 1977ರ ಮಾರ್ಚ್‌ನಲ್ಲಿ ಮುಸ್ಲಿಮರು ಸೇರಿದಂತೆ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವ ಆದೇಶ ಹೊರಬಿತ್ತು. 1979ರ ಮೇ ತಿಂಗಳಲ್ಲಿ ಹೊರಡಿಸಿದ ಆದೇಶದಲ್ಲಿ, ಮುಸ್ಲಿಮರನ್ನು ಹಿಂದುಳಿದ ವರ್ಗಗಳಡಿ ಪಟ್ಟಿ ಮಾಡಲಾಯಿತು.

3. ವೆಂಕಟಸ್ವಾಮಿ ನೇತೃತ್ವದ ಆಯೋಗ ಕೂಡ ಮುಸ್ಲಿಮರನ್ನು ಮೀಸಲಾತಿಗೆ ಅರ್ಹ ಹಿಂದುಳಿದ ವರ್ಗ ಎಂದು ಗುರುತಿಸಿತು. ಅದರ ಶಿಫಾರಸುಗಳ ಆಧಾರದ ಮೇಲೆ ಮುಸ್ಲಿಮರನ್ನು ಸಿ ಗುಂಪಿನಡಿ ವರ್ಗೀಕರಿಸಲಾಯಿತು.

4. ನಂತರ ನ್ಯಾ.ಚಿನ್ನಪ್ಪ ರೆಡ್ಡಿ ನೇತೃತ್ವದ ಆಯೋಗ ಹಿಂದುಳಿದ ವರ್ಗಗಳನ್ನು ವರ್ಗ 1 (ಅತ್ಯಂತ ಹಿಂದುಳಿದ), ವರ್ಗ 2ಎ (ತುಲನಾತ್ಮಕವಾಗಿ ಹೆಚ್ಚು ಹಿಂದುಳಿದ), ವರ್ಗ 2ಬಿ(ಹೆಚ್ಚು ಹಿಂದುಳಿದ), ವರ್ಗ 3ಎ (ಹಿಂದುಳಿದ), ವರ್ಗ 3ಬಿ (ತುಲನಾತ್ಮಕವಾಗಿ ಹಿಂದುಳಿದ) ಮತ್ತು ವರ್ಗ 4 (ಔದ್ಯೋಗಿಕ ಗುಂಪು) ಎಂದು ವರ್ಗೀಕರಿಸಿದಾಗ, ಮುಸ್ಲಿಮರನ್ನು 2ಬಿ ವರ್ಗಕ್ಕೆ ಸೇರಿಸಲಾಯಿತು. ಇದು 30 ವರ್ಷಗಳಿಂದ ಜಾರಿಯಲ್ಲಿದೆ.

5. ನಂತರ ಪ್ರೊ.ರವಿವರ್ಮ ಕುಮಾರ್ ನೇತೃತ್ವದ ಆಯೋಗ ಔದ್ಯೋಗಿಕ ಗುಂಪು ಎಂಬ ವರ್ಗವನ್ನು ತೆಗೆದುಹಾಕಿ, ಅದನ್ನು ಇತರ ಗುಂಪುಗಳಲ್ಲಿ ಸೇರಿಸಿತು. ಮುಸ್ಲಿಮರನ್ನು 2 ಬಿ ವರ್ಗದಲ್ಲಿಯೇ ಮುಂದುವರಿಸಲಾಯಿತು. 17 ಮುಸ್ಲಿಮ್ ಸಮುದಾಯಗಳನ್ನು ವರ್ಗ 1 (ಅತ್ಯಂತ ಹಿಂದುಳಿದ) ಮತ್ತು 19 ಮುಸ್ಲಿಮ್ ಸಮುದಾಯಗಳನ್ನು 2ಎ (ತುಲನಾತ್ಮಕವಾಗಿ ಹೆಚ್ಚು ಹಿಂದುಳಿದ) ಅಡಿಯಲ್ಲಿ ವರ್ಗೀಕರಿಸಲಾಯಿತು.

6. ಒಬಿಸಿ ಶೇ.32 ಮೀಸಲಾತಿಯನ್ನು ಹೊಂದಿದೆ. ವರ್ಗ 1 ಮತ್ತು 2ಎ ಅಡಿ ಪಟ್ಟಿ ಮಾಡಲಾದ 36 ಮುಸ್ಲಿಮ್ ಸಮುದಾಯಗಳು ಸಹ ಒಬಿಸಿಗಳ ಕೇಂದ್ರ ಪಟ್ಟಿಯಲ್ಲಿವೆ.

7. ಕಳೆದ ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ ಸರಕಾರ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಿಟ್ಟ ಶೇ.4 ಮೀಸಲಾತಿ ತೆಗೆದುಹಾಕಿತು ಮತ್ತು ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ವಿಭಜಿಸಲು ನಿರ್ಧರಿಸಿತು. ಈ ನಿರ್ಧಾರ ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೆ ತುತ್ತಾಗಿರುವುದನ್ನು ನೆನಪಿಸಿಕೊಳ್ಳಬಹುದು. ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಹಿಂದುಳಿದ ವರ್ಗಗಳ ಯೋಗಕ್ಷೇಮಕ್ಕಾಗಿ ಮೀಸಲಾತಿ ಒದಗಿಸುವುದು ರಾಜ್ಯ ಪಟ್ಟಿಯ ಅಡಿಯಲ್ಲಿ ಬರುತ್ತದೆ. ಮೀಸಲಾತಿಯ ಶೇಕಡಾವಾರು ಪ್ರತೀ ರಾಜ್ಯದಲ್ಲಿ ಬದಲಾಗುತ್ತದೆ.

ಮೀಸಲಾತಿ ಕೋಮುವಾದವಲ್ಲ ಮತ್ತದು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆಧರಿಸಿದೆ.

ಕೆಲವು ರಾಜ್ಯಗಳು ಒಟ್ಟಾರೆಯಾಗಿ ಮುಸ್ಲಿಮರಿಗೆ ಮೀಸಲಾತಿಯನ್ನು ನೀಡಿದರೆ, ಇತರ ರಾಜ್ಯಗಳು ಕೆಲವು ವರ್ಗದ ಮುಸ್ಲಿಮರಿಗೆ ಮಾತ್ರ ಮೀಸಲಾತಿಯನ್ನು ಒದಗಿಸುತ್ತವೆ.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ವರ್ಗಗಳ ನಾಗರಿಕರ ಅಥವಾ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಪ್ರಗತಿಗಾಗಿ ವಿಶೇಷ ನಿಬಂಧನೆಗಳನ್ನು ಮಾಡಲು ರಾಜ್ಯಗಳಿಗೆ ಸಂವಿಧಾನದ 15 (4)ನೇ ವಿಧಿಯಲ್ಲಿ ಅವಕಾಶವಿದೆ.

ಆರ್ಟಿಕಲ್ 16 (4)ರ ಅಡಿ ಕೂಡ ರಾಜ್ಯ ಯಾವುದೇ ಹಿಂದುಳಿದ ವರ್ಗದ ನಾಗರಿಕರ ಪರವಾಗಿ ನೇಮಕಾತಿಗಳು ಅಥವಾ ಹುದ್ದೆಗಳ ಮೀಸಲಾತಿಗೆ ಯಾವುದೇ ನಿಬಂಧನೆಯನ್ನು ಮಾಡಬಹುದಾಗಿದೆ.

ಇಷ್ಟೆಲ್ಲ ಸತ್ಯ ವಿಚಾರಗಳು ಇರುವಾಗ, ಬಿಜೆಪಿ ಏಕೆ ಈ ವಿಚಾರದಲ್ಲಿಯೂ ಸುಳ್ಳುಗಳನ್ನೇ ಪೋಣಿಸಿ ಜನರನ್ನು ವಂಚಿಸುತ್ತಿದೆ? ಏಕೆ ಅಲ್ಲಿಯೂ ಕೋಮು ದೃಷ್ಟಿಯಿಂದ ಎತ್ತಿಕಟ್ಟಲು, ದ್ವೇಷ ಹರಡಲು ನೋಡುತ್ತಿದೆ?

ಸಿದ್ದರಾಮಯ್ಯ ಹೇಳಿರುವಂತೆ, ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಮುಸ್ಲಿಮರ ಈ ಮೀಸಲಾತಿ ಜಾರಿಯಲ್ಲಿದೆ. ಕೇಂದ್ರದಲ್ಲಿ ಹಿಂದೆ ಇದ್ದ ಬಿಜೆಪಿ ಸರಕಾರವಾಗಲಿ, ಕಳೆದ ಹತ್ತು ವರ್ಷಗಳಿಂದ ಇರುವ ಮೋದಿ ಸರಕಾರವಾಗಲಿ ಇಲ್ಲಿಯವರೆಗೆ ಈ ಮೀಸಲಾತಿಯನ್ನು ಪ್ರಶ್ನಿಸಿಲ್ಲ. ಬಿಜೆಪಿಯೂ ಸೇರಿದಂತೆ ಯಾರೂ ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಿಲ್ಲ.

ಹೀಗಿರುವಾಗ, ಇದ್ದಕ್ಕಿದ್ದಂತೆ ಆದಿತ್ಯನಾಥ್‌ಗೂ ಮೋದಿಗೂ ಇಂಥದೊಂದು ಸುಳ್ಳನ್ನು ಹರಡುವ ತುರ್ತು ಈಗ ಏಕೆ ಉಂಟಾಯಿತು ಎಂಬುದನ್ನೂ ಯಾರೂ ಊಹಿಸಬಹುದು.

ಸಿದ್ದರಾಮಯ್ಯ ಅವರೇ ಹೇಳುವಂತೆ, ಮೋದಿ ಹೇಳುತ್ತಿರುವ ಹಸಿ ಸುಳ್ಳು ಅವರ ಅಜ್ಞಾನವನ್ನಷ್ಟೇ ಅಲ್ಲ, ಸೋಲಿನ ಭೀತಿಯಲ್ಲಿರುವ ಅವರ ಹತಾಶೆಯನ್ನೂ ಸೂಚಿಸುತ್ತದೆ ಎಂಬುದು ಸತ್ಯವಲ್ಲವೇ?.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಚ್. ವೇಣುಪ್ರಸಾದ್

contributor

Similar News