ಕಾಬೂಲ್: ಆತ್ಮಹತ್ಯಾ ದಾಳಿಗೆ ಕನಿಷ್ಠ 29 ಬಲಿ

Update: 2018-12-25 03:36 GMT

ಕಾಬೂಲ್, ಡಿ.25: ಇಲ್ಲಿನ ಸರ್ಕಾರಿ ಕಾಂಪೌಂಡ್‌ನಲ್ಲಿ ಸೋಮವಾರ ನಡೆದ ಆತ್ಮಹತ್ಯಾ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ 29 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಪ್ಘಾನಿಸ್ತಾನದ ರಾಜಧಾನಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ.

ಅಪ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆಯ ಗಾತ್ರ ಕಡಿತಗೊಳಿಸುವ ಸಂಬಂಧ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸಿರುವ ಬಗ್ಗೆ ಅಪ್ಘಾನ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಈ ದಾಳಿ ನಡೆದಿದ್ದು, ರಾಜಧಾನಿಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಅಮೆರಿಕದ ಸೇನಾ ಕಡಿತ ಕ್ರಮ, ತಾಲಿಬಾನ್ ಜತೆಗಿನ 17 ವರ್ಷಗಳ ಯುದ್ಧ ಕೊನೆಗೊಳಿಸುವ ಪ್ರಯತ್ನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ಅಪ್ಘಾನಿಸ್ತಾನ ವ್ಯಕ್ತಪಡಿಸಿದೆ.

ಲೋಕೋಪಯೋಗಿ ಇಲಾಖೆ ಕಟ್ಟಡದ ಆವರಣದಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆಗಳು ತಕ್ಷಣಕ್ಕೆ ಹೊತ್ತಿಲ್ಲ. 29 ಮಂದಿ ಮೃತಪಟ್ಟಿದ್ದಲ್ಲದೇ ಘಟನೆಯಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ನಜೀಬ್ ಡ್ಯಾನಿಷ್ ಹೇಳಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ನಾಗರಿಕರು.

ಅಪ್ಘಾನ್ ಪಡೆಗಳು ಮೂವರು ದಾಳಿಕೋರರನ್ನು ಹತ್ಯೆ ಮಾಡಿದ್ದು, ಆವರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ 350ಕ್ಕೂ ಹೆಚ್ಚು ಮಂದಿಯನ್ನು ಮುಕ್ತಗೊಳಿಸಿದ್ದಾರೆ. ನಾಲ್ಕನೇ ದಾಳಿಕೋರ, ಕಾರು ಬಾಂಬ್‌ ಸ್ಫೋಟದಲ್ಲಿ ಹತನಾಗಿದ್ದಾನೆ ಎಂದು ಮುಜೀಬ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News