ರಾಜೀವ್ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು

Update: 2018-12-25 11:18 GMT

ಲುಧಿಯಾನ, ಡಿ.25: ಶಿರೋಮಣಿ ಅಕಾಲಿ ದಳದ ಯುವ ಘಟಕದ ಕೋರ್ ಸಮಿತಿ ಸದಸ್ಯರಾಗಿರುವ ಗುರುದೀಪ್ ಗೋಷ ಹಾಗೂ ಮೀತ್‍ ಪಾಲ್ ಸಿಂಗ್ ದುಗ್ರಿ ಎಂಬಿಬ್ಬರು ಮಂಗಳವಾರ ನಗರದ ಸಲೇಂ ತಬ್ರಿ ಪ್ರದೇಶದ ಸಮೀಪವಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪ್ರತಿಮೆಯ ಮುಖಕ್ಕೆ ಮಸಿ ಬಳಿದು ಕೈಗಳಿಗೆ ಕೆಂಪು ಬಣ್ಣ ಹಚ್ಚಿ ವಿರೂಪಗೊಳಿಸಿದ ಘಟನೆ ವರದಿಯಾಗಿದೆ. 

ರಾಜೀವ್ ಗಾಂಧಿ ಸಿಖ್ಖರನ್ನು ಕೊಂದಿದ್ದು, ಅವರಿಗೆ ನೀಡಲಾಗಿರುವ ಭಾರತ ರತ್ನವನ್ನು ವಾಪಸ್ ಪಡೆಯಬೇಕೆಂಬ ಆಗ್ರಹವನ್ನೂ ಇವರಿಬ್ಬರು ಮುಂದಿಟ್ಟಿದ್ದಾರೆ.

ರಾಜೀವ್ ಗಾಂಧಿಗೆ ನೀಡಲಾದ 'ಭಾರತ ರತ್ನ' ವಾಪಸ್ ಪಡೆಯಬೇಕೆಂಬ ನಿರ್ಣಯ ಅಂಗೀಕರಿಸಲು ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕೆಂದು ಶಿರೋಮಣಿ ಅಕಾಲಿ ದಳ ಬೇಡಿಕೆ ಮುಂದಿಟ್ಟ ಮರುದಿನವೇ ಈ ಬೆಳವಣಿಗೆ ನಡೆದಿದೆ.

ರಾಜೀವ್ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ ಎಂಬ ಸುದ್ದಿ ಕಾಂಗ್ರೆಸ್ ನಾಯಕರಿಗೆ ಘಟನೆ ನಡೆದ ಎರಡು ಗಂಟೆಗಳ ನಂತರವಷ್ಟೇ ತಿಳಿದು ಬಂದಿದ್ದು ಅವರು ಸ್ಥಳಕ್ಕೆ ಧಾವಿಸಿ ಮೂರ್ತಿಯನ್ನು ಸ್ವಚ್ಛಗೊಳಿಸಿ ಅದನ್ನು ಹಾಲಿನಿಂದ ತೊಳೆದಿದ್ದಾರೆ. ಕಾಂಗ್ರೆಸ್ ನಾಯಕರಾದ ಗುರ್ಸಿಮ್ರಾನ್ ಸಿಂಗ್ ಮಂಡ್ ಎಂಬವರು ತಮ್ಮ ಪೇಟಾ ತೆಗೆದು ಮೂರ್ತಿಗೆ ಬಳಿಯಲಾಗಿದ್ದ ಮಸಿಯನ್ನು ಒರೆಸಿ ತೆಗೆದಿದ್ದಾರೆ.

ರಾಜೀವ್ ಗಾಂಧಿ ಪ್ರತಿಮೆಯನ್ನು ಈ ರೀತಿ ವಿರೂಪಗೊಳಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗುರುಪ್ರೀತ್ ಗೋಗಿ ಹಾಗೂ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜೀವ್ ರಾಜಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News