ಮೃತರ ಸಂಖ್ಯೆ 429ಕ್ಕೆ: 128 ಮಂದಿ ಇನ್ನೂ ನಾಪತ್ತೆ

Update: 2018-12-25 15:15 GMT

ಸುಮುರ್ (ಇಂಡೋನೇಶ್ಯ), ಡಿ. 25: ಶನಿವಾರ ರಾತ್ರಿ ಯಾವುದೇ ಮುನ್ಸೂಚನೆಯಿಲ್ಲದೆ ಇಂಡೋನೇಶ್ಯದ ದ್ವೀಪಗಳಿಗೆ ಅಪ್ಪಳಿಸಿದ ಸುನಾಮಿಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 420ನ್ನು ದಾಟಿದೆ ಹಾಗೂ 1,400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಪಶ್ಚಿಮ ಜಾವಾ ಮತ್ತು ದಕ್ಷಿಣ ಸುಮಾತ್ರ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿರುವ ಮನೆಗಳಿಗೆ ಸುನಾಮಿ ಅಲೆಗಳು ಅಪ್ಪಳಿಸಿದ್ದು, ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ.

ಮೃತರ ಸಂಖ್ಯೆ ಮಂಗಳವಾರ 429ನ್ನು ತಲುಪಿದೆ ಹಾಗೂ ಕನಿಷ್ಠ 128 ಮಂದಿ ನಾಪತ್ತೆಯಾಗಿದ್ದಾರೆ ಎಂದು ಇಂಡೋನೇಶ್ಯದ ವಿಪತ್ತು ನಿರ್ವಹಣೆ ಸಂಸ್ಥೆಯ ವಕ್ತಾರ ಸುಟೊಪೊ ಪುರ್ವೊ ನುಗ್ರೊಹೊ ತಿಳಿಸಿದರು.

ಸೈನಿಕರು, ಸರಕಾರಿ ರಕ್ಷಣಾ ಸಿಬ್ಬಂದಿ ಮತ್ತು ಸ್ವಯಂಸೇವಕರು ಅವಶೇಷಗಳಿಂದ ತುಂಬಿದ ಸಮುದ್ರ ತೀರಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಸಮುದ್ರ ತೀರದಲ್ಲಿ ಅಲ್ಲಲ್ಲಿ ಶವಗಳು ಬಿದ್ದುಕೊಂಡಿದ್ದು, ದುಃಖತಪ್ತ ಸಂಬಂಧಿಕರು ಶವಗಳನ್ನು ಗುರುತಿಸುತ್ತಿದ್ದಾರೆ.

ಕ್ರಿಸ್ಮಸ್ ಸಂಭ್ರಮವಿಲ್ಲ

ಇಂಡೋನೇಶ್ಯದಲ್ಲಿ ಜನರು ಸಂಭ್ರಮರಹಿತ ಕ್ರಿಸ್ಮಸ್ ಆಚರಿಸಿದರು. ಸುನಾಮಿಯಿಂದಾಗಿ ಮೃತಪಟ್ಟವರಿಗಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಜನರು ಕ್ರಿಸ್ಮಸ್ ಆಚರಿಸಿದರು.

ಸುನಾಮಿಯಿಂದಾಗಿ ಅತಿ ಹೆಚ್ಚು ಹಾನಿಗೊಳಗಾದ ಕರಿಟ ಪಟ್ಟಣದಲ್ಲಿರುವ ರಹಮತ್ ಪೆಂಟಕೋಸ್ಟಲ್ ಚರ್ಚ್‌ನಲ್ಲಿ ಯಾವುದೇ ಸಂಗೀತವಿಲ್ಲದೆ ಸರಳವಾಗಿ ಕ್ರಿಸ್ಮಸ್ ಆಚರಿಸಲಾಯಿತು.

ಅಲ್ಲಿ ಕ್ರಿಸ್ಮಸ್ ಮುನ್ನಾ ದಿನದ ಪ್ರಾರ್ಥನೆಯಲ್ಲಿ ಕೇವಲ ಸುಮಾರು 100 ಮಂದಿ ಭಾಗವಹಿಸಿದರು. ಸಾಮಾನ್ಯವಾಗಿ 500ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದರು. ಹೆಚ್ಚಿನವರು ಸುನಾಮಿ ಅಲೆಗಳಿಗೆ ಹೆದರಿ ರಾಜಧಾನಿ ಜಕಾರ್ತ ಅಥವಾ ಇತರ ಸ್ಥಳಗಳಿಗೆ ತೆರಳಿದ್ದಾರೆ.

ಸುನಾಮಿ ಸಂತ್ರಸ್ತರಿಗಾಗಿ ಪ್ರಾರ್ಥಿಸುವಂತೆ ಚರ್ಚ್‌ಗಳ ಧರ್ಮಗುರುಗಳು ಕ್ರೈಸ್ತರಿಗೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News