ಬೆಂಗಳೂರಿನಾದ್ಯಂತ ಸಂಭ್ರಮದ ಕ್ರಿಸ್‌ಮಸ್ ಆಚರಣೆ

Update: 2018-12-25 16:15 GMT

ಬೆಂಗಳೂರು, ಡಿ.25: ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನಗರದ ಎಲ್ಲಡೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಚರ್ಚ್‌ಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಮಾಲ್‌ಗಳಲ್ಲಿ ಸಂತಾಕ್ಲಾಸ್ ಪ್ರತಿಬಿಂಬ, ಶುಭ ಸಂಕೇತದ ಗಂಟೆಗಳನ್ನಿಡುವ ಮೂಲಕ ಸಡಗರದಿಂದ ಶಾಂತಿಧೂತನ ಜನ್ಮದಿನವನ್ನು ಆಚರಿಸಿದರು.

ನಗರದ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಚರ್ಚ್‌ಗಳಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರವಿಡೀ ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಯಿತು. ನಗರದಾದ್ಯಂತ ‘ಮೇರಿ ಕ್ರಿಸ್‌ಮಸ್’ ಸಂದೇಶದ ಕ್ರಿಸ್‌ಮಸ್ ಕಾರ್ಡ್‌ಗಳು, ಉಡುಗೊರೆಗಳು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. ಅಲ್ಲದೆ, ಹಲವು ಕ್ರೈಸ್ತ ಬಾಂಧವರು ಅಶಕ್ತರಿಗೆ ಮತ್ತು ಬಡವರಿಗೆ ಬಟ್ಟೆ, ಹಣ ಇತ್ಯಾದಿಗಳ ದಾನಕಾರ್ಯ ಮಾಡುವ ಮೂಲಕ ಹಬ್ಬವನ್ನು ಆಚರಿಸಿಕೊಂಡರು.

ಮಂಗಳವಾರ ಬೆಳಗ್ಗೆ 6 ರಿಂದ 10ರವರೆಗೆ ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಹುತೇಕ ಚರ್ಚ್‌ಗಳಲ್ಲಿ ಮೊದಲು ಕನ್ನಡದಲ್ಲಿ ಪ್ರಾರ್ಥನೆ ಜರುಗಿತು. ನಂತರ ಇಂಗ್ಲಿಷ್, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು. ಧರ್ಮಗುರುಗಳು ಸಾಮಾಜಿಕ ಬಾಂಧವ್ಯ ಮತ್ತು ಜಾಗತಿಕ ಶಾಂತಿಯ ಕುರಿತು ಸಂದೇಶಗಳನ್ನು ಸಾರಿದರು. ಕ್ರಿಸ್‌ಮಸ್ ಎಂದರೆ ಪರರ ನೋವಿಗೆ ಸ್ಪಂದಿಸುವುದು, ಪರರ ದುಃಖದಲ್ಲಿ ಭಾಗಿಯಾಗುವುದು, ಹಸಿದವರಿಗೆ, ಬಡತನದ ಬೇಗೆಯಲ್ಲಿರುವವರಿಗೆ ನೆರವಾಗುವುದು ಕ್ರಿಸ್‌ಮಸ್. ಹೀಗಾಗಿ ಕ್ರಿಸ್‌ಮಸ್ ಎಂದರೆ ಕೇವಲ ಡಿಸೆಂಬರ್ 24-25ರ ಆಚರಣೆ ಮಾತ್ರವಲ್ಲ. ಪ್ರತಿ ಒಳ್ಳೆಯ ಕೆಲಸ ಮಾಡಿದಾಗಲೂ ಕ್ರಿಸ್ತರು ಜನ್ಮ ತಾಳುತ್ತಾರೆ ಎಂಬ ಸಂದೇಶವನ್ನು ಚರ್ಚ್‌ಗಳಲ್ಲಿ ಪ್ರಾರ್ಥನೆ ಮೂಲಕ ಸಾರಲಾಯಿತು.

ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್, ಫ್ರೇಜರ್‌ಟೌನ್‌ನಲ್ಲಿರುವ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಯಲ್ಲಿರುವ ಸಂತ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ ಚರ್ಚ್, ಲಿಂಗರಾಜಪುರದ ಹೋಲಿ ಗೋಸ್ಟ್ ಚರ್ಚ್, ಹಲಸೂರಿನ ಹೋಲಿ ಟ್ರಿನಿಟಿ ಚರ್ಚ್, ಎಂಜಿ ರಸ್ತೆಯ ಈಸ್ಟ್ ಪೆರೇಡ್ ಚರ್ಚ್, ರಿಚ್‌ಮಂಡ್ ರಸ್ತೆಯಲ್ಲಿರುವ ಸೇಕ್ರೇಡ್ ಹಾರ್ಟ್ ಚರ್ಚ್, ಸಂಪಂಗಿರಾಮನಗರದ ಹಡ್ಸನ್ ಸ್ಮಾರಕ ಚರ್ಚ್ ಸೇರಿದಂತೆ ನಗರದ ಹಲವು ರೋಮನ್ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಚರ್ಚ್‌ಗಳ(ಸಿಎಸ್‌ಐ)ಲ್ಲಿ ವಿಶೇಷ ಪ್ರಾರ್ಥನಾ ಸಭೆಗಳು ನಡೆದವು.

ತಿಂಡಿಗಳ ಸಂಭ್ರಮ: ಕ್ರಿಸ್‌ಮಸ್ ಎಂದರೆ ಕೇಕು, ಸಿಹಿ ತಿನಿಸು ಬಲು ಪ್ರಸಿದ್ಧಿ. ಜತೆಗೆ ಎಲ್ಲರ ಮನೆಯಲ್ಲಿ ಘಮ ಘಮ ಬಿರಿಯಾನಿ ಸೇರಿದಂತೆ ಮಾಂಸಾಹಾರದ ಭಕ್ಷ್ಯ ಭೋಜನಗಳು ನಡೆದವು. ಇದಲ್ಲದೆ ಪ್ಲಂ ಕೇಕ್ (ಸಾದಾ ಮತ್ತು ಡ್ರ್ರೈೂಟ್ಸ್ ಮಿಶ್ರಿತ), ಬಿರಿಯಾನಿ, ಗಲಗಲಾ ಸಿಹಿ ತಿನಿಸು, ಮೊಟ್ಟೆ ಕಜ್ಜಾಯ ಇತ್ಯಾದಿಗಳು ಕಂಗೊಳಿಸಿದ್ದವು.

ಡಿ.24ರ ಮಧ್ಯರಾತ್ರಿ 12 ಗಂಟೆಗೆ ಬಾಲಕ ಯೇಸುವನ್ನು ಮೆರವಣಿಗೆಯ ಮೂಲಕ ತಂದು ಮೊದಲೇ ನಿರ್ಮಾಣಗೊಂಡಿದ್ದ ಗೋದಲಿಯಲ್ಲಿ ನಂತರ ಪವಿತ್ರ ತೀರ್ಥದ ಪ್ರೋಕ್ಷಣೆ ನಡೆಯಿತು. ಧೂಪದ ಆರತಿ, ಪುಷ್ಪದ ಅರ್ಚನೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News