ಬೆಂಗಳೂರು: ಮೂವರು ಕಳವು ಆರೋಪಿಗಳ ಬಂಧನ; ಕೋಟ್ಯಾಂತರ ರೂ. ಮೌಲ್ಯದ ಮಾಲು ಜಪ್ತಿ

Update: 2018-12-26 15:03 GMT

ಬೆಂಗಳೂರು, ಡಿ.26: ಐಷರಾಮಿ ಜೀವನಕ್ಕಾಗಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆರೋಪದಡಿ ಜಪಾನ್ ರಾಜ ಸೇರಿ ಮೂವರನ್ನು ಬಂಧಿಸಿರುವ ಕೆ.ಪಿ.ಅಗ್ರಹಾರ ಠಾಣಾ ಪೊಲೀಸರು, 1 ಕೋಟಿ 2 ಲಕ್ಷ 57 ಸಾವಿರ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಜೆ.ಪಿ.ನಗರದ ಬೀಳೆಕಳ್ಳಿಯ ರಾಜ ಯಾನೆ ಜಪಾನ್ ರಾಜ(40), ನಾಗರಾಜ(24), ಮಲ್ಲೇಶ್ವರಂನ ಕಿರಣ್‌ಕುಮಾರ್(26) ಬಂಧಿತ ಆರೋಪಿಗಳೆಂದು ತಿಳಿಸಿದರು.

ಬಂಧಿತರಿಂದ 1 ಕೋಟಿ 2 ಲಕ್ಷ 57 ಸಾವಿರ ಮೌಲ್ಯದ 4 ಕೆ.ಜಿ. 77 ಗ್ರಾಂ ಚಿನ್ನ, 1 ಕೆ.ಜಿ. 300 ಗ್ರಾಂ. ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು 44 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ವಿವರಿಸಿದರು.

ಐವರು ಪತ್ನಿಯರನ್ನು ಹೊಂದಿದ್ದ ಜಪಾನ್ ರಾಜ ಐಷಾರಾಮಿ ಜೀವನಕ್ಕಾಗಿ, ಮೋಜು ಮಸ್ತಿಗಾಗಿ ಕಳ್ಳತನಕ್ಕಿಳಿದಿದ್ದ. ಮೊದಲಿಗೆ ಆಟೊ ಚಾಲಕನಾಗಿದ್ದ ಆತ, ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿರುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

ಆರೋಪಿ ರಾಜ ಬೈಕ್‌ನಲ್ಲಿ ಸುತ್ತಾಡುತ್ತಾ, ಮನೆಗಳ ಮುಂದೆ ಕಸ ಗುಡಿಸದಿರುವುದನ್ನು ಗಮನಿಸಿ, ಮನೆಗೆ ಬೀಗ ಹಾಕಿರುವುದನ್ನು ಪತ್ತೆ ಹಚ್ಚಿ ರಾತ್ರಿ ವೇಳೆ ಕಳವು ಮಾಡುತ್ತಿದ್ದ ಎನ್ನಲಾಗಿದೆ. ಕಬ್ಬಿಣದ ಆಯುಧದಿಂದ ಬಾಗಿಲು ಮುರಿದು ಒಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾಗ ಮತ್ತೊಬ್ಬ ಆರೋಪಿ ನಾಗರಾಜ ಹೊರಗಡೆ ಕಾಯುತ್ತಾ ನಿಲ್ಲುತ್ತಿದ್ದ. ಒಂದೊಂದು ಕಡೆಗಳಲ್ಲಿ ಆತನೇ ಜೊತೆಗೆ ಬಂದು ಕೃತ್ಯದಲ್ಲಿ ತೊಡಗುತ್ತಿದ್ದ. ಮತ್ತೊಬ್ಬ ಆರೋಪಿ ಕಳವು ಮಾಡಿದ ನಂತರ ಇವರನ್ನು ಆಟೊದಲ್ಲಿ ಕರೆದುಕೊಂಡು ಪರಾರಿಯಾಗುತ್ತಿದ್ದನು ಎಂದು ಅವರು ವಿವರಿಸಿದರು.

ಆರೋಪಿಗಳು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಜಯನಗರದ ನೀಲಮ್ಮ(70) ಅವರ ಮೂಲಕ ಚಿನ್ನಾಭರಣ ಖರೀದಿಸುವ ಕಂಪೆನಿಗಳಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ ಚಿನ್ನಾಭರಣ ಖರೀದಿಸುತ್ತಿದ್ದ ದೇವರ ಚಿಕ್ಕನಹಳ್ಳಿಯ ಚಿನ್ನಾಭರಣ ಅಂಗಡಿಯ ಮಾಲಕ ಸೈಯದ್ ಫಾರೂಕ್‌ನನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News