ಹೊಸ ವರ್ಷದಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರೂ. !

Update: 2018-12-26 14:24 GMT

ಬೆಂಗಳೂರು, ಡಿ.26: ಹೊಸ ವರ್ಷದ ಜನವರಿ 1 ರಂದು ಪಾಲಿಕೆಯ 24 ಹೆರಿಗೆ ಆಸ್ಪತ್ರೆಗಳಲ್ಲಿ ನಾರ್ಮಲ್ ಡೆಲಿವರಿಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರೂ.ಗಳ ಹಣಕಾಸು ನೆರವು ನೀಡಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪ್ರಕಟಿಸಿದರು.

ಬುಧವಾರ ನಗರದ ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವರ್ಷದ ಬಜೆಟ್‌ನಲ್ಲಿ ಪಿಂಕ್ ಬೇಬಿ ಹೆಸರಿನಲ್ಲಿ ಪಾಲಿಕೆಯ ಹೆರಿಗೆ ಆಸ್ಪತ್ರೆಯಲ್ಲಿ ಹುಟ್ಟಿದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರೂ. ನೆರವು ನೀಡುವ ಯೋಜನೆಯನ್ನು ಪ್ರಕಟಿಸಲಾಗಿತ್ತು. ಅದರಂತೆ ಜನವರಿ 1 ರಂದು ಹುಟ್ಟಿದ ಮೊದಲ ಹೆಣ್ಣು ಮಗುವಿಗೆ ಹಣಕಾಸು ನೆರವನ್ನು ನೀಡಲಾಗಿತ್ತು ಎಂದು ಹೇಳಿದರು.

ನಗರಪಾಲಿಕೆ ವ್ಯಾಪ್ತಿಯಲ್ಲಿ 24 ಹೆರಿಗೆ ಆಸ್ಪತ್ರೆಗಳಿವೆ. ಈ ಎಲ್ಲ ಹೆರಿಗೆ ಆಸ್ಪತ್ರೆಯಲ್ಲಿ ಜನವರಿ 1 ರಂದು ಮೊದಲು ಹುಟ್ಟಿದ ಹೆಣ್ಣು ಮಗುವಿಗೆ ಈ ಯೋಜನೆ ಅನ್ವಯಿಸಲಾಗುವುದು ಎಂದ ಅವರು, ಜನವರಿ 1 ರಂದು ಮೊದಲು ಹುಟ್ಟಿದ ಗಂಡು ಮಗುವಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದರು.

ಪಿಂಕ್ ಬೇಬಿ ಯೋಜನೆಯಡಿ ಜನವರಿ 1 ರಂದು ಹುಟ್ಟಿದ ಹೆಣ್ಣು ಮಕ್ಕಳಿಗೆ ಸಹಾಯ ಧನ ನೀಡಲು ಬಜೆಟ್‌ನಲ್ಲಿ 1 ಕೋಟಿ 20 ಲಕ್ಷ ಹಣವನ್ನು ಮೀಸಲಿಡಲಾಗಿದೆ ಎಂದು ಮೇಯರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News