ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಕಗ್ಗಂಟು: ಗೃಹ ಖಾತೆ ಬಿಟ್ಟುಕೊಡಲು ಡಿಸಿಎಂ ಪರಮೇಶ್ವರ್ ನಿರಾಕರಣೆ?

Update: 2018-12-26 14:50 GMT
ಫೈಲ್ ಚಿತ್ರ

ಬೆಂಗಳೂರು, ಡಿ.26: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಂಟು ಮಂದಿಗೆ ಖಾತೆಗಳನ್ನು ಹಂಚಿಕೆ ಮಾಡುವುದು ಕಗ್ಗಂಟಾಗಿ ಪರಿಣಮಿಸಿದೆ. ಎಂ.ಬಿ.ಪಾಟೀಲ್, ಎಂಟಿಬಿ ನಾಗರಾಜ್, ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ್ ಪ್ರಭಾವಿ ಖಾತೆಗಳಿಗೆ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಹೆಚ್ಚುವರಿ ಪ್ರಭಾವಿ ಖಾತೆಗಳನ್ನು ಹೊಂದಿರುವ ಸಚಿವರು ಮಾತ್ರ ತಮ್ಮ ಖಾತೆಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಎಂ.ಬಿ.ಪಾಟೀಲ್‌ಗೆ ಗೃಹ ಖಾತೆ ನೀಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಆದರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತ್ರ ಗೃಹ ಖಾತೆ ಬಿಟ್ಟುಕೊಡಲು ಒಪ್ಪುತ್ತಿಲ್ಲ ಎನ್ನಲಾಗಿದೆ.

ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಗೃಹ ಖಾತೆಯನ್ನು ಎಂ.ಬಿ.ಪಾಟೀಲ್‌ಗೆ ಬಿಟ್ಟುಕೊಡುವಂತೆ ಪರಮೇಶ್ವರ್‌ಗೆ ಹೇಳಿದ್ದಾರೆ. 'ಉಪಮುಖ್ಯಮಂತ್ರಿ ಹಾಗೂ ಗೃಹ ಖಾತೆಯನ್ನು ಹೈಕಮಾಂಡ್ ನೀಡಿದೆ. ಈಗ ಗೃಹ ಖಾತೆ ಬಿಟ್ಟುಕೊಡಿ ಎಂದರೆ ಹೇಗೆ? ಬೇಕಾದರೆ ಗೃಹ ಖಾತೆ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡುತ್ತೇನೆ ಎಂದು ಹೇಳಿ, ಪರಮೇಶ್ವರ್ ಸಭೆಯಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ.

ಎಂಟಿಬಿ ನಾಗರಾಜ್ ಅರಣ್ಯ ಹಾಗೂ ಪರಿಸರ ಇಲಾಖೆಯ ಬದಲು ವಸತಿ ಖಾತೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯನ್ನು ಬಿಟ್ಟುಕೊಡಬೇಕಾದರೆ ನನಗೆ ವಸತಿ ಖಾತೆ ನೀಡುವಂತೆ ಸಚಿವ ಝಮೀರ್‌ ಅಹ್ಮದ್‌ ಖಾನ್ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಆದುದರಿಂದ, ನೂತನ ಸಚಿವರಿಗೆ ಖಾತೆ ಹಂಚಿಕೆ ಕುರಿತು ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆದುದರಿಂದ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜೊತೆ ಚರ್ಚಿಸಿ ಖಾತೆಗಳ ಹಂಚಿಕೆಯಾಗಲಿ ಎಂದು ವೇಣುಗೋಪಾಲ್ ಸಭೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಾಲ್ಗೊಂಡಿದ್ದರು.

ಯಾರಿಗೆ ಯಾವ ಖಾತೆ?
ಎಂ.ಬಿ.ಪಾಟೀಲ್- ಗೃಹ ಖಾತೆ, ಸಿ.ಎಸ್.ಶಿವಳ್ಳಿ- ನಗರಾಭಿವೃದ್ಧಿ, ಎಂಟಿಬಿ ನಾಗರಾಜ್-ಅರಣ್ಯ ಮತ್ತು ಪರಿಸರ, ರಹೀಂ ಖಾನ್- ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್, ತುಕಾರಾಂ-ಯುವಜನ ಸೇವೆ ಮತ್ತು ಕ್ರೀಡೆ, ಆರ್.ಬಿ.ತಿಮ್ಮಾಪುರ-ವೈದ್ಯಕೀಯ ಶಿಕ್ಷಣ, ಪಿ.ಟಿ.ಪರಮೇಶ್ವರ್ ನಾಯ್ಕಾ-ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿ, ಸತೀಶ್ ಜಾರಕಿಹೊಳಿ-ಪೌರಾಡಳಿತ ಮತ್ತು ಬಂದರು ಖಾತೆ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News