ಬಾಕ್ಸಿಂಗ್ ಡೇ ಟೆಸ್ಟ್: ಪೂಜಾರ ಶತಕ

Update: 2018-12-27 04:04 GMT

ಮೆಲ್ಬೋರ್ನ್, ಡಿ. 27: ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನ ಬ್ಯಾಟಿಂಗ್ ಲಯ ಕಂಡುಕೊಂಡ ಭಾರತೀಯರು ಆಕರ್ಷಕ ಪ್ರದರ್ಶನವನ್ನು ಎರಡನೇ ದಿನವೂ ಮುಂದುವರಿಸಿದ್ದು, ಚೇತೇಶ್ವರ ಪೂಜಾರ ತಮ್ಮ ವೃತ್ತಿ ಜೀವನದ 17ನೇ ಶತಕ ಪೂರೈಸಿದರು. ಇವರಿಗೆ ಸಾಥ್ ನೀಡಿದ ನಾಯಕ ವಿರಾಟ್ ಕೊಹ್ಲಿ 82 ರನ್ ಗಳಿಸಿ ಔಟ್ ಆದರು.

ಇತ್ತೀಚಿನ ವರದಿ ಬಂದಾಗ ಭಾರತ 4 ವಿಕೆಟ್ ನಷ್ಟಕ್ಕೆ 304 ರನ್ ಗಳಿಸಿದೆ. 106 ರನ್ ಗಳಿಸಿದ ಪೂಜಾರ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. 6 ರನ್ ಗಳಿಸಿದ ರಹಾನೆ ಹಾಗೂ ಇನ್ನೂ ಖಾತೆ ತೆರೆಯದ ರೋಹಿತ್ ಶರ್ಮಾ ಕ್ರೀಸ್‌ನಲ್ಲಿದ್ದಾರೆ.

ಇದಕ್ಕೂ ಮುನ್ನ ಪೂಜಾರ- ಕೊಹ್ಲಿ ಜೋಡಿ ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ ಅಸ್ತ್ರ ಎನಿಸಿದ ನಾಥನ್ ಲಿಯಾನ್ ( 0/80) ಅವರ ದಾಳಿಯನ್ನು ಛಿದ್ರಗೊಳಿಸಿತು. ಪೂಜಾರ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ ನಾಲ್ಕನೇ ಶತಕ ಇದಾಗಿದ್ದು, ಈ ಸರಣಿಯಲ್ಲಿ ಎರಡನೇ ಶತಕ. ಈ ವರ್ಷ ಮೂರು ಶತಕಗಳನ್ನು ಸಿಡಿಸಿರುವ ಪೂಜಾರ ಅವರ ಎಲ್ಲ ಶತಕಗಳೂ ವಿದೇಶಿ ಪಿಚ್‌ಗಳಲ್ಲಿ ಎನ್ನುವುದು ಗಮನಾರ್ಹ. ಜತೆಗೆ ವಿದೇಶಿ ಪಿಚ್‌ಗಳಲ್ಲಿ ಏಳು ಬಾರಿ ಅರ್ಧಶತಕ ಸಿಡಿಸಿದ್ದಾರೆ. ಇದು ಒಟ್ಟಾರೆಯಾಗಿ ಯಾವುದೇ ಆಟಗಾರ ವಿದೇಶಿ ಪಿಚ್‌ನಲ್ಲಿ ಒಂದು ವರ್ಷದಲ್ಲಿ ಗಳಿಸಿದ ಮೂರನೇ ಗರಿಷ್ಠ ಅರ್ಧಶತಕವಾಗಿದೆ. ಈ ಸಾಧನೆ ಮಾಡಿದ ಎರನೇ ಭಾರತೀಯ ಎನಿಸಿಕೊಂಡಿದ್ದಾರೆ.

ಪೂಜಾರ, ನಾಯಕ ಕೊಹ್ಲಿ ಜತೆ ಸೇರಿ ಮೂರನೇ ವಿಕೆಟ್‌ಗೆ 150ಕ್ಕೂ ಹೆಚ್ಚು ರನ್ ಸೇರಿಸಿದ್ದಾರೆ. ಆಕರ್ಷಕ ಮೆಲ್ಬೋರ್ನ್ ಮೈದಾನದಲ್ಲಿ ದಾಖಲಾದ ಮೂರನೇ 150 ರನ್ ಜತೆಯಾಟ ಇದಾಗಿದೆ. ಈ ಜೋಡಿ ಒಟ್ಟು ನಾಲ್ಕು ಬಾರಿ 150ಕ್ಕೂ ಅಧಿಕ ರನ್ ಜತೆಯಾಟದಲ್ಲಿ ಭಾಗಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News