ಬೆಂಗಳೂರು ನಗರ ಜಿಪಂ: ಶಾಲೆಗಳ ಸ್ಥಿತಿಗತಿ ಪರಿಶೀಲಿಸಿ ವರದಿ ಸಲ್ಲಿಸಲು ಸೂಚನೆ
ಬೆಂಗಳೂರು, ಡಿ.27: ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲ ಸರಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಶೀಘ್ರವೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಮುನಿರಾಜು ಸೂಚನೆ ನೀಡಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳತ್ತ ನಗರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗೋಡೆ ಕುಸಿದಿರುವ ಹಾಗೂ ಬಿರುಕು ಬಿಟ್ಟಿರುವ ಪ್ರಕರಣಗಳೂ ಒಳಗೊಂಡಂತೆ ದುಸ್ಥಿತಿಯಲ್ಲಿರುವ ಎಲ್ಲಾ ಕಟ್ಟಡಗಳನ್ನೂ ಆದ್ಯತೆಯ ಮೇರೆಗೆ ದುರಸ್ತಿಪಡಿಸಿ ಸುಸ್ಥಿತಿಗೆ ತರಲು ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಗೂ ಭೇಟಿ ನೀಡಿ ಖುದ್ದು ಪರಿಶೀಲಸಿ, ಅಲ್ಲಿನ ಅವಶ್ಯಕತೆ ಮತ್ತು ಬೇಡಿಕೆಗಳನ್ನು ಪಟ್ಟಿ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತರಬೇಕು. ಅಲ್ಲದೆ, ಸಾಮುದಾಯಿಕ ಜವಾಬ್ದಾರಿ ಹೊತ್ತ ಸಂಸ್ಥೆಗಳ ಸಹಯೋಗ ಮತ್ತು ಸಹಭಾಗಿತ್ವದಲ್ಲಿ ಶಾಲಾ ಕಟ್ಟಡಗಳ ಅಭಿವೃದ್ಧಿ ಮತ್ತು ಸುಧಾರಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಸರಕಾರಿ ಸೇವೆಯಲ್ಲಿರುವ ಹಲವು ವೈದ್ಯರು ಒಂದೇ ಸ್ಥಳದಲ್ಲಿಯೇ ಬೇರುಬಿಟ್ಟುಕೊಂಡಿದ್ದಾರೆ. ಅಂತಹ ವೈದ್ಯರನ್ನು ಕಂಡರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೆದರುತ್ತಾರೆ. ಇದರಿಂದ ಆಸ್ಪತ್ರೆಗಳಲ್ಲಿ ಅಶಿಸ್ತು ಮತ್ತು ಗುಂಪುಗಾರಿಕೆ ಬೆಳೆಯುತ್ತಿದೆ. ಹೀಗಾಗಿ, ಹತ್ತು ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಕೆಲಸ ಮಾಡುವ ವೈದ್ಯರು ಹಾಗು ಅಧೀನ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ಸದಸ್ಯರು ಅಭಿಪ್ರಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮುನಿರಾಜು, ಈ ವಿಷಯವನ್ನು ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಗಳು, ಆ್ಯಂಬುಲೆನ್ಸ್, ಸಾಮಾಜಿಕ ನ್ಯಾಯ ಸೇರಿದಂತೆ ಹಲವು ವಿಷಯಗಳ ಕುರಿತು ಸುಧೀರ್ಘವಾದ ಚರ್ಚೆ ನಡೆಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್.ಅರ್ಚನಾ ಸೇರಿದಂತೆ ಹಲವರಿದ್ದರು.