ಫೆ.7ರಿಂದ 14ರವರೆಗೆ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ: ಲಾಂಛನ ಬಿಡುಗಡೆಗೊಳಿಸಿದ ಎಚ್‌ಡಿಕೆ

Update: 2018-12-28 13:15 GMT

ಬೆಂಗಳೂರು, ಡಿ.28: ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ 11ನೆ ಆವೃತ್ತಿಯ ಲಾಂಛನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದರು.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, 2019ರ ಫೆ.7 ರಿಂದ 14ರವರೆಗೆ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ವಿಶ್ವದ ವಿವಿಧ ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನ ಕಾಣಲಿವೆ. 7 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನಗರದ ಒರಾಯನ್ ಮಾಲ್‌ನ 11 ಪರದೆಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಲನಚಿತ್ರೋತ್ಸವ ಸಂಘಟನಾ ಸಮಿತಿಯು ಚಲನಚಿತ್ರೋತ್ಸವದಲ್ಲಿ ಗುಣಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ ನೀಡುವ ಹಾಗೂ ವೆಚ್ಚ ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.

ರಾಜ್ಯ ಚಲನಚಿತ್ರ ಅಕಾಡಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಇನ್ನು ಪ್ರತಿವರ್ಷ ಫೆಬ್ರವರಿ ತಿಂಗಳ ಮೊದಲ ಗುರುವಾರದಂದು ಚಲನಚಿತ್ರೋತ್ಸವ ಆರಂಭವಾಗಲಿದೆ. ನಿರ್ದಿಷ್ಟ ವೇಳಾಪಟ್ಟಿ ಹೊಂದಿರುವುದರಿಂದ ಆಸಕ್ತರು ಭಾಗವಹಿಸುವುದಕ್ಕೂ ಅನುಕೂಲ ಎಂದು ಹೇಳಿದರು.

ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ನಿಯಮಾವಳಿಗಳು ಹಾಗೂ ಕೇಂದ್ರ ಸರಕಾರದ ಚಲನಚಿತ್ರೋತ್ಸವ ಸಂಘಟನೆಯ ನೀತಿಯಂತೆಯೇ ಚಲನಚಿತ್ರೋತ್ಸವದಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಇಚ್ಛಿಸುವವರಿಗೆ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್ ಮೂಲಕವೇ ನೋಂದಣಿಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ಚಿತ್ರೋದ್ಯಮಿಗಳು ಹಾಗೂ ಫಿಲಂ ಸೊಸೈಟಿ ಸದಸ್ಯರು, ಚಲನಚಿತ್ರವನ್ನು ಅಧ್ಯಯನ ಮಾಡುತ್ತಿರುವ ಉಪನ್ಯಾಸಕರು ಹಾಗೂ ಸಿನಿಮಾ ವಿದ್ಯಾರ್ಥಿಗಳಿಗೆ 400 ರೂ., ಸಾರ್ವಜನಿಕರಿಗೆ 800 ರೂ.ನಿಗದಿಗೊಳಿಸಲಾಗಿದ್ದು, ಯಾವುದೇ ರೀತಿಯ ಉಚಿತ ಪಾಸ್ ವ್ಯವಸ್ಥೆ ಇರುವುದಿಲ್ಲ. ನೋಂದಣಿ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಚಿತ್ರೋತ್ಸವದೊಂದಿಗೇ ಚಲನಚಿತ್ರರಂಗದ ದೇಶ ವಿದೇಶಗಳ ನಿರ್ದೇಶಕರು, ತಂತ್ರಜ್ಞರೊಂದಿಗಿನ ಸಂವಾದ, ವಿಚಾರ ಸಂಕಿರಣ, ಕಾರ್ಯಾಗಾರ, ಮಾಸ್ಟರ್‌ಕ್ಲಾಸ್ ಮೊದಲಾದವುಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News