ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಬಿಜೆಪಿ ದೂರು

Update: 2018-12-28 13:52 GMT

ಬೆಂಗಳೂರು, ಡಿ.28: ಲೇಖಕ ಪ್ರೊ.ಕೆ.ಎಸ್.ಭಗವಾನ್ ಅವರು ತಮ್ಮ ಪುಸ್ತಕದಲ್ಲಿ ಶ್ರೀರಾಮನನ್ನು ನಿಂದಿಸಿ, ಅಪಮಾನ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ರಾಜ್ಯ ಮುಖಂಡರು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಶುಕ್ರವಾರ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ನೇತೃತ್ವದಲ್ಲಿ ದೂರು ಸಲ್ಲಿಸಿದ ಬಿಜೆಪಿ ನಾಯಕರು, ಶ್ರೀರಾಮನನ್ನು ಅವಹೇಳನಕಾರಿಯಾಗಿ ಬಿಂಬಿಸಿ, ಪುಸ್ತಕ ಪ್ರಕಟಿಸಿರುವ ಲೇಖಕ ಭಗವಾನ್ ಅವರನ್ನು ಶಿಕ್ಷಿಸಬೇಕು ಎಂದು ಒತ್ತಾಯ ಮಾಡಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್, ರಾಮ ಮಂದಿರ ಏಕೆ ಬೇಡ? ಪುಸ್ತಕದಲ್ಲಿ ಶ್ರೀರಾಮ ಕೊಲೆಗಡುಕ, ಸೀತೆಗೆ ಕಳ್ಳಭಟ್ಟಿ ಕುಡಿಸುತ್ತಿದ್ದ, ಶ್ರೀರಾಮನಿಗೆ ಮಾನಿನಿಯರ ಸಹವಾಸವಿತ್ತು. ರಾಮ ಸತ್ಯವಂತನೂ ಅಲ್ಲ, ವೀರನೂ ಅಲ್ಲ ಎಂಬ ಸುಳ್ಳಗಳನ್ನು ಬರೆದಿದ್ದಾರೆ ಎಂದು ಟೀಕಿಸಿದರು.

ಅದೇ ರೀತಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಒಬ್ಬ ಮತಾಂಧ, ಮೂಲಭೂತವಾದಿ, ಗಾಂಧೀಜಿಯ ಮತೀಯ ನಂಬಿಕೆ ಅಪಾಯಕಾರಿ ಎಂದು ಉಲ್ಲೇಖಿಸಿರುವುದು ಸಹ ನೋವುಂಟು ಮಾಡಿದೆ ಎಂದು ಹೇಳಿದರು.

ಭಗವಾನ್ ಅವರು ಪ್ರಚೋದನಕಾರಿ ಹೇಳಿಕೆ ನೀಡುತ್ತಲೇ, ಸದಾ ಸುದ್ದಿಯಲ್ಲಿರುವ ಉದ್ದೇಶ ಹೊಂದಿದ್ದಾರೆ. ಯಾವುದೇ ವ್ಯಕ್ತಿಯ ವಿರುದ್ಧ ಹಿಂಸಾತ್ಮಕ ಪ್ರತಿಕ್ರಿಯೆಗೆ ಅವಕಾಶವಾಗಬಾರದು ಎನ್ನುವ ಸರಕಾರದ ಉದ್ದೇಶವನ್ನೆ ಬುಡಮೇಲು ಮಾಡುತ್ತಿದ್ದಾರೆ. ಹೀಗಾಗಿ, ಈ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಮತ್ತೊಂದು ದೂರು

ಶ್ರೀರಾಮನ ಕುರಿತು ವಿವಾದಿತ ಪುಸ್ತಕವೊಂದನ್ನು ಹೊರತಂದಿದ್ದಾರೆ ಎಂದು ಆರೋಪಿಸಿ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಕನ್ನಡ ಸಂಘಟನೆಗಳ ಒಕ್ಕೂಟದ ದೂರು ನೀಡಿದೆ. ಶುಕ್ರವಾರ ಒಕ್ಕೂಟದ ಅಧ್ಯಕ್ಷ ನಾಗೇಶ್, ನಗರ ಪೋಲಿಸ್ ಆಯುಕ್ತ ಟಿ. ಸುನಿಲ್ ಕುಮಾರ್ ಅವರಿಗೆ ದೂರು ಸಲ್ಲಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News