"ಸಚಿವರ ಖಾತೆ ಬದಲಾವಣೆಯಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ"

Update: 2018-12-28 14:10 GMT

ಬೆಂಗಳೂರು, ಡಿ. 28: ದಲಿತ ಸಮುದಾಯದ ಡಾ.ಜಿ.ಪರಮೇಶ್ವರ್ ಬಳಿ ಇದ್ದ ಗೃಹ ಖಾತೆ ಬದಲಾವಣೆ ಮಾಡಿರುವುದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 8 ವರ್ಷಗಳ ಸುದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ, ವಿವಿಧ ಖಾತೆಗಳನ್ನು ನಿರ್ವಹಿಸಿದ ಪರಮೇಶ್ವರ್‌ಗೆ ಆರು ತಿಂಗಳ ಹಿಂದೆಯೆಷ್ಟೇ ನೀಡಿದ್ದ ಗೃಹಖಾತೆ ಬದಲಾವಣೆ ಮಾಡಿರುವುದರ ಹಿಂದೆ ಆ ಪಕ್ಷದ ಮುಖಂಡರ ಸಂಚು ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಖಾತೆ ಬದಲಾವಣೆಯಲ್ಲಿ ನಮ್ಮ ಪಾತ್ರವಿಲ್ಲ. ಅಲ್ಲದೆ, ಎಲ್ಲವನ್ನು ನೋಡಿಕೊಂಡು ಮುಖ್ಯಮಂತ್ರಿ ಬಹಳ ದಿನಗಳ ಕಾಲ ಸುಮ್ಮನಿರಲು ಸಾಧ್ಯವಿಲ್ಲ. ನಾವು ‘ಪುಟಗೋಸಿ’ ಮಂತ್ರಿಗಿರಿಗಾಗಿ ಕಾದು ಕೂತವರೂ ಅಲ್ಲ ಎಂದ ರೇವಣ್ಣ, ಪರಮೇಶ್ವರ್ ಎತ್ತಂಗಡಿ ಕಾಂಗ್ರೆಸ್ ದುಸ್ಥಿತಿಗೆ ಕಾರಣವಾಗಲಿದೆ ಎಂದು ಹೇಳಿದರು.

ವರ್ಗಾವಣೆಯಲ್ಲಿ ತಾನು ಅಥವಾ ಸಿಎಂ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಯಾವುದೇ ವರ್ಗಾವಣೆಗೂ ನಾನು ಅವರ ಬಳಿ ಹೋಗಿಲ್ಲ ಎಂದ ರೇವಣ್ಣ, ಪರಮೇಶ್ವರ್ ಇಂದಿನ ಸ್ಥಿತಿಗೆ ಕಾರಣರಾದವರು ನನ್ನ ಮೇಲೆ ಗೂಬೆ ಕೂರಿಸಿದರೆ ಅದಕ್ಕೆ ಹೆದರುವುದಿಲ್ಲ ಎಂದು ಎಚ್ಚರಿಸಿದರು.

ದಲಿತ ಸಮುದಾಯದ ಹಿರಿಯ ಮುಖಂಡ ಪರಮೇಶ್ವರ್, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರನ್ನು ಗೃಹ ಖಾತೆಯಿಂದ ಬದಲಾವಣೆ ಸಲ್ಲ ಎಂದು ಆಕ್ಷೇಪಿಸಿದ ಅವರು, ನಿಗಮ-ಮಂಡಳಿ ಅಧ್ಯಕ್ಷರು, ರಾಜಕೀಯ ಕಾರ್ಯದರ್ಶಿಗಳ ನೇಮಕ ಸಂಬಂಧ ಉಭಯ ಪಕ್ಷದ ರಾಷ್ಟ್ರೀಯಾಧ್ಯಕ್ಷರು ಚರ್ಚಿಸಬೇಕಿದೆ ಎಂದರು.

ಆಂಗ್ಲಶಾಲೆ ಬೇಕು: ಬಡವರ ಮಕ್ಕಳು ಆಂಗ್ಲಭಾಷೆ ಕಲಿಕೆಗೆ ಆಕ್ಷೇಪ ಸರಿಯಲ್ಲ. ಅವರೇನು ಇಂಗ್ಲಿಷ್ ಓದಲೇಬಾರದೇ? ಎಂದು ಪ್ರಶ್ನಿಸಿದ ರೇವಣ್ಣ, ಹಣವಂತರ ಮಕ್ಕಳಷ್ಟೇ ಇಂಗ್ಲಿಷ್ ಕಲಿಯಬೇಕೇ? ಎಲ್ಲರ ಮಕ್ಕಳು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಎಲ್ಲವನ್ನು ಕಲಿಯಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.

ಕಾಮಗಾರಿಗೆ ಚಾಲನೆ: ಬೆಂಗಳೂರು-ಮೈಸೂರು ನಡುವಿನ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಜನವರಿ 15ರಿಂದ ಚಾಲನೆ ನೀಡಲಾಗುವುದು ಎಂದ ಅವರು, ಈಗಾಗಲೇ ಯೋಜನೆಗೆ ಅಗತ್ಯವಿರುವ ಶೇ.75ರಷ್ಟು ಭೂಮಿ ವಶಪಡಿಸಿಕೊಳ್ಳಲಾಗಿದೆ ಎಂದರು.

ಇತ್ತೀಚೆಗಷ್ಟೇ ಕೇಂದ್ರ ಹೆದ್ದಾರಿ ಸಚಿವರನ್ನು ಭೇಟಿ ಮಾಡಿದ್ದು, ಮೈಸೂರು-ಮಡಿಕೇರಿ-ಮಾಣಿ ರಸ್ತೆಯನ್ನು 250 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲು ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಚನ್ನರಾಯಪಟ್ಟಣ-ಮಡಿಕೇರಿ-ಮಾಕುಟ್ಟ ಮಾರ್ಗವಾಗಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಯೋಜನಾ ವರದಿ ಸಿದ್ಧಪಡಿಸಲು ಅನುಮತಿ ದೊರೆತಿದೆ. 168 ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಸರಕಾರದ ಷರತ್ತು ಉಲ್ಲಂಘಿಸಿರುವ ನಗರದ ಗಾಲ್ಫ್ ಕ್ಲಬ್‌ನ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದು, ಅದನ್ನು ವಶಕ್ಕೆ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ. ಗಾಲ್ಫ್ ಕ್ಲಬ್‌ನಲ್ಲಿ ಬಾರ್, ಹೊಟೇಲ್ ನಡೆಸುವಂತಿಲ್ಲ. ಅಲ್ಲದೆ, ಕಟ್ಟಡ ನಿರ್ಮಿಸಲು ಅವಕಾಶವಿಲ್ಲ. ಆದರೆ, ಮೇಲ್ಕಂಡ ಷರತ್ತುಗಳನ್ನು ಕ್ಲಬ್ ಉಲ್ಲಂಘಿಸಿದೆ’

-ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News