ಎಲ್.ಪಿ.ಜಿ. ಖಾತೆ ಬದಲಾವಣೆಗೆ ಶುಲ್ಕವಿದೆಯೇ...?

Update: 2018-12-28 18:46 GMT

ಮಾನ್ಯರೇ,

ತಂದೆಯ ಹೆಸರಲ್ಲಿ ಎಲ್.ಪಿ.ಜಿ.ಸಂಪರ್ಕವಿದ್ದು ತಂದೆಯ ಮರಣಾನಂತರ ಅದನ್ನು ಮಗನ ಹೆಸರಿಗೆ ವರ್ಗಾವಣೆ ಮಾಡಲು ಹೆಚ್ಚುವರಿ ಶುಲ್ಕ ನೀಡಬೇಕೇ...? ಅಥವಾ ಎಲ್.ಪಿ.ಜಿ.ಗ್ರಾಹಕ ಜೀವಂತವಿರುವಾಗಲೇ ತನ್ನ ಖಾತೆಯನ್ನು ತನ್ನ ವಾರಸುದಾರರ ಅಥವಾ ಕುಟುಂಬ ಸದಸ್ಯರ ಹೆಸರಿಗೆ ವರ್ಗಾವಣೆ ಮಾಡಬೇಕಾದರೆ ಅದಕ್ಕಾಗಿ ಹೆಚ್ಚುವರಿ ಠೇವಣಿ ಇಡಬೇಕೇ...?

ಇತ್ತೀಚೆಗೆ ಕೆಲವು ಎಲ್.ಪಿ.ಜಿ.ಏಜೆಂಟರು ಗ್ರಾಹಕರು ಖಾತೆ ವರ್ಗಾವಣೆ ಮಾಡಲು ಹೋದಾಗ ಹೊಸ ಸಂಪರ್ಕ ಎಂದು ನಮೂದಿಸಿ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಅದಕ್ಕೆ ಅವರು ಕೊಡುವ ಸಮಜಾಯಿಷಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಠೇವಣಿ ಎಂದು ತೆಗೆದುಕೊಂಡದ್ದು ಕೇವಲ ಐನೂರು ರೂಪಾಯಿಗಳಷ್ಟೇ.. ಪ್ರಸ್ತುತ ಹೊಸ ಸಂಪರ್ಕಕ್ಕೆ ಮೂರು ಸಾವಿರ ರೂ. ಠೇವಣಿಯಿದೆ. ಆದುದರಿಂದ ಐನೂರು ರೂಪಾಯಿ ಠೇವಣೆಯಲ್ಲಿ ಸಂಪರ್ಕ ಪಡೆದುಕೊಂಡ ಗ್ರಾಹಕರಿಗೆ ಪ್ರಸ್ತುತ ಠೇವಣಿಯಂತೆ ಎರಡು ಸಾವಿರದ ಐನೂರು ರೂಪಾಯಿ ಠೇವಣಿ ಪಡೆಯುತ್ತಿದ್ದೇವೆಯೇ ಹೊರತು ಇದು ವಸೂಲಿಯಲ್ಲ ಎಂಬ ಸಮಜಾಯಿಷಿ ನೀಡುತ್ತಾರೆ.

ವಾಸ್ತವದಲ್ಲಿ ಇದೊಂದು ವ್ಯವಸ್ಥಿತ ಲೂಟಿಯಾಗಿದೆ. ಹಾಗಾದರೆ ಏಜೆಂಟರು ಐನೂರು ರೂಪಾಯಿ ಠೇವಣೆಯಿಟ್ಟವರ ಬಡ್ಡಿ ಲೆಕ್ಕ ಹಾಕುವರೇ...? ಎಲ್.ಪಿ.ಜಿ.ಸಂಪರ್ಕವನ್ನು ಯಾವ ಕಾಲಕ್ಕೂ ಯಾರೂ ಬೇಡ ಎಂದು ಠೇವಣಿಯನ್ನು ಹಿಂದೆ ಪಡೆಯುವುದಿಲ್ಲ. ಠೇವಣಿ ಎಂದು ಪಡೆದುಕೊಳ್ಳುವುದು ಗ್ಯಾಸ್‌ಸಿಲಿಂಡರ್‌ನ ಬೆಲೆಯನ್ನಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಸಿಲಿಂಡರ್ ಒಂದಕ್ಕೆ ಇದ್ದ ಬೆಲೆ ಮುನ್ನೂರು ರೂಪಾಯಿಗಳಷ್ಟೆ. ಆಗಲೂ ಗ್ಯಾಸ್ ಒಲೆಯ ಮೊತ್ತವನ್ನು ಪ್ರತ್ಯೇಕವಾಗಿಯೇ ಪಡೆದುಕೊಳ್ಳುತ್ತಿದ್ದರು.

ಈ ಕುರಿತಂತೆ ಉಳ್ಳಾಲದ ಆರ್.ಟಿ.ಐ.ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯಲ್ಲಿ ‘‘ಖಾತೆದಾರ ಮರಣ ಹೊಂದಿದರೆ ಆತನ ವಾರಸುದಾರರು ಆತನ ಮರಣ ಪ್ರಮಾಣ ಪತ್ರ ನೀಡಿ, ಆತನ ರೇಶನ್ ಕಾರ್ಡಿನಲ್ಲಿ ಇದ್ದ ಯಾವುದೇ ಸದಸ್ಯನ ಹೆಸರಿಗೆ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಅದಕ್ಕಾಗಿ ಯಾವುದೇ ಶುಲ್ಕ ಅಥವಾ ಹೆಚ್ಚುವರಿ ಠೇವಣಿ ನಿಗದಿಪಡಿಸಿಲ್ಲ’’ ಎಂಬ ಉತ್ತರ ನೀಡಲಾಗಿದೆ.

ಎಲ್.ಪಿ.ಜಿ. ಸಂಪರ್ಕ ಪಡೆಯುವ ಗ್ರಾಹಕರು ಕಡ್ಡಾಯವಾಗಿ ಗ್ಯಾಸ್ ಒಲೆ ಖರೀದಿಸಬೇಕೆಂಬ ಅಲಿಖಿತ ನಿಯಮವನ್ನು ಅನೇಕ ಏಜೆನ್ಸಿಗಳು ಜಾರಿಯಲ್ಲಿಟ್ಟಿವೆ. ಈ ಕುರಿತಂತೆ ಅನೇಕ ಬಾರಿ ಪತ್ರಿಕೆಗಳು ವರದಿ ಮಾಡಿವೆ. ಮಾತ್ರವಲ್ಲ ಇಲಾಖೆಯೂ ಗ್ರಾಹಕರು ಏಜೆಂಟರಿಂದಲೇ ಗ್ಯಾಸ್ ಒಲೆ ಖರೀದಿಸುವುದು ಕಡ್ಡಾಯವಲ್ಲ ಮತ್ತು ಏಜೆಂಟರು ಗ್ಯಾಸ್ ಒಲೆ ಖರೀದಿಸುವಂತೆ ಒತ್ತಡ ಹೇರಬಾರದೆಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅದಾಗ್ಯೂ ಎಲ್.ಪಿ.ಜಿ. ಏಜೆಂಟರ ಕಿರುಕುಳ ನಿಂತಿಲ್ಲ. ಒಂದು ವೇಳೆ ನಿಮಗೆ ಒಲೆ ಬೇಡವೆಂದಾದರೆ ಅಷ್ಟು ಮೊತ್ತದ ಕುಕ್ಕರ್ ಮತ್ತಿತರ ಬೇರೇನಾದರೂ ಸಾಮಗ್ರಿ ಖರೀದಿಸುವಂತೆ ಒತ್ತಡ ಹೇರುತ್ತಾರೆ.

ಈ ವಿಚಾರಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗಂಭೀರವಾಗಿ ಪರಿಗಣಿಸಿ ಎಲ್.ಪಿ.ಜಿ. ಗ್ರಾಹಕರಿಗೆ ನ್ಯಾಯ ಕೊಡಿಸಬೇಕಾಗಿದೆ. ಈಗಾಗಲೇ ಖಾತೆ ಬದಲಾವಣೆಯನ್ನು ಹೊಸ ಖಾತೆಯೆಂದು ಮಾಡಿ ಏಜೆಂಟರು ವಸೂಲಿ ಮಾಡಿದ ದುಡ್ಡನ್ನು ವಾಪಸ್ ಕೊಡಿಸಬೇಕಾಗಿದೆ.

Writer - -ಇಸ್ಮತ್ ಪಜೀರ್, ಮಂಗಳೂರು

contributor

Editor - -ಇಸ್ಮತ್ ಪಜೀರ್, ಮಂಗಳೂರು

contributor

Similar News