ಶಬರಿಮಲೆ ಹೋರಾಟದಲ್ಲಿ ಪಿಣರಾಯಿ ವಿಜಯನ್

Update: 2018-12-28 18:52 GMT

ಈಗ ಎಲ್ಲಾ ಪುರೋಗಾಮಿ ಶಕ್ತಿಗಳು ವಿಜಯನ್‌ರ ‘ನವ ಜ್ಞಾನ ಪುನರುಜ್ಜೀವನ’ ಚಳವಳಿಯನ್ನು ಬೆಂಬಲಿಸಬೇಕು. ಇಲ್ಲವಾದಲ್ಲಿ ಇಡೀ ಭಾರತೀಯ ಸಮಾಜ ಹಿನ್ನಡೆಗೆ ಗುರಿಯಾಗಬೇಕಾದೀತು. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಬೇಕೆಂಬ ಒತ್ತಾಯಕ್ಕೆ ಆರೆಸ್ಸೆಸ್‌ನ ಮೇಲ್ಜಾತಿಯ ಜನರ ಬೆಂಬಲವಿದೆಯೆಂದು ವಿಜಯನ್‌ರವರಿಗೆ ಗೊತ್ತಿದೆ. ಆದ್ದರಿಂದಲೇ ಅವರು ಈ ಒತ್ತಾಯವನ್ನು ‘ಮೇಲ್ಜಾತಿಯ ಒಂದು ಒಳ ಸಂಚು’ ಎಂದು ಸರಿಯಾಗಿಯೇ ಕರೆದಿದ್ದಾರೆ.


ಕಾಂಚ ಐಲಯ್ಯ ಶೆಫರ್ಡ್

ಗ್ರಾಮೀಣ ಆಂಧ್ರ ಪ್ರದೇಶದಲ್ಲಿ ಅತ್ಯಾಚಾರಿಗಳು ತಮ್ಮ ಬಲಿಪಶುವಿಗೆ ಹೇಳುವ ಮಾತೊಂದಿದೆಯಂತೆ ‘‘ನನಗೆ ನಿನ್ನನ್ನು ರೇಪ್ ಮಾಡಲು ಬಿಡು- ಇಲ್ಲವಾದಲ್ಲಿ ನಾನು ನನ್ನದೇ ಅಂಗ (ಶಿಶ್ನ)ವನ್ನು ತುಂಡರಿಸಿಕೊಳ್ಳುತ್ತೇನೆ’’. ಈ ಮಾತು ಸ್ತ್ರೀ ದ್ವೇಷ ಹಾಗೂ ಅನ್ಯಾಕ್ರಮಣವಾದಿ ಪ್ರವೃತ್ತಿಗಳು ಎಷ್ಟು ಆಳವಾಗಿ ಕೂತಿವೆ ಎಂಬುದನ್ನು ಹೇಳುತ್ತದೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿದರೆ ನಾವು ಆತ್ಮಾಹುತಿ ಮಾಡಿಕೊಳ್ಳುತ್ತೇವೆಂಬ ಭಕ್ತರ ಬೆದರಿಕೆ ಕೂಡ ಅತ್ಯಾಚಾರಿಯ ಬೆದರಿಕೆಯಂತಹುದೇ ಎನ್ನಬಹುದು.

ಹೀಗೆ ಆತ್ಮಾಹುತಿಗೆ ಪ್ರಯತ್ನಿಸಿದ ವ್ಯಕ್ತಿಯೊಬ್ಬ ಕೇರಳದಲ್ಲಿ ಮೃತನಾಗಿದ್ದಾನೆ. ಗಂಭೀರ ಬೆದರಿಕೆಯ ಇದೇ ರೀತಿಯ ರಾಜಕೀಯವನ್ನು 1990ರ ದಶಕದಲ್ಲಿ ಮೀಸಲಾತಿ ವಿರೋಧಿ ಚಳವಳಿಗಳ ಸಮಯದಲ್ಲೂ ಮಾಡಲಾಗಿತ್ತು.
ಇಂತಹ ಸಂಸ್ಕೃತಿಯನ್ನು ವೈದಿಕಶಾಹಿ ಪಿತೃಪ್ರಧಾನ ಶಕ್ತಿಗಳು ಹರಪ್ಪ ನಾಗರಿಕತೆಯ ನಂತರದ ನಾಗರಿಕತೆಯಲ್ಲಿ ಅಳವಡಿಸಿಕೊಂಡಿದ್ದವು. ಅವು ಈಗ ಕೂಡ ಅದೇ ರೀತಿಯ ಮಹಿಳಾ ವಿರೋಧಿ, ದಲಿತ/ಶೂದ್ರ/ ಆದಿವಾಸಿ ವಿರೋಧಿ ಪ್ರವೃತ್ತಿಗಳನ್ನು ಉಳಿಸಿಕೊಂಡಿವೆ.
ನಾನು ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಹೋಗುತ್ತೇನೆ.
ಭಾರತೀಯ ಉಪಖಂಡದಲ್ಲಿ ಅತ್ಯಂತ ಪ್ರಾಚೀನ ನಗರ, ಹರಪ್ಪ. ಆ ನಗರವನ್ನು ಆರ್ಯರ ದಾಳಿಗೆ 500 ವರ್ಷಗಳ ಮೊದಲು, ಋಗ್ವೇದ ಮತ್ತು ಇತರ ವೈದಿಕಶಾಹಿ ಪಠ್ಯಗಳನ್ನು ಬರೆಯುವ ಮೊದಲು ನಿರ್ಮಿಸಲಾಗಿತ್ತು. ಅದರ ನಿರ್ಮಾಣದಲ್ಲಿ ಪುರುಷ ಹಾಗೂ ಮಹಿಳಾ ಕಾರ್ಮಿಕರು ದುಡಿದಿದ್ದರು.
ಅಗ್ನಿ ಮತ್ತು ವಾಯುವಿನ ಶಕ್ತಿಯನ್ನು ಬಳಸುವ ಮೂಲಕ ಆರ್ಯನ್ ವೈದಿಕ/ಬ್ರಾಹ್ಮಣಿಕ್ ಶಕ್ತಿಗಳು ಹರಪ್ಪ ನಾಗರಿಕತೆಯನ್ನು ನಾಶ ಮಾಡಿದವು. ಬಳಿಕ ವರ್ಣವ್ಯವಸ್ಥೆಯನ್ನು ಹಾಗೂ ಕ್ರೂರ ವೈದಿಕ ಪಿತೃಪ್ರಧಾನ ವ್ಯವಸ್ಥೆಯನ್ನು ಜಾರಿಗೆ ತಂದವು. ಕೇಸರಿಯನ್ನು ಒಂದು ವೈದಿಕ ಬಣ್ಣವಾಗಿಯೂ ಸ್ವಸ್ತಿಕವನ್ನು ತಮ್ಮ ಸಂಕೇತವಾಗಿಯೂ ಅವು ಅಳವಡಿಸಿಕೊಂಡವು.
ಈಗ ಅದೇ ಆ ಕೇಸರಿ ಬಣ್ಣ ಬಿಜೆಪಿಯ ಹಾಗೂ ಅದರ ಸೈದ್ಧಾಂತಿಕ ಅಂಗವಾಗಿರುವ ಆರೆಸ್ಸೆಸ್‌ನ ಬಣ್ಣವಾಗಿದೆ. ಕೇಸರಿ ಯಾವತ್ತೂ ಶೂದ್ರರ, ದಲಿತರ ಮತ್ತು ಆದಿವಾಸಿಗಳ ಬಣ್ಣವಾಗಿರಲಿಲ್ಲ. ಬ್ರಾಹ್ಮಣರು ಕಪ್ಪು ಬಣ್ಣವನ್ನು ರಾಕ್ಷಸರ (ಡೆಮನಿಕ್) ಬಣ್ಣವೆಂದು ಘೋಷಿಸಿದರು ಮತ್ತು ಹೀಗಾಗಿ ಅದು ಪೆರಿಯಾರ್‌ವಾದಿಗಳ ಹಾಗೂ ದ್ರಾವಿಡರ ಬಣ್ಣವಾಯಿತು.

ಹರಪ್ಪದ ಜನರು ಕರಿವರ್ಣದವರು; ಅವರ ಅಚ್ಚುಮೆಚ್ಚಿನ ಬಣ್ಣ ಎಮ್ಮೆಯ ಬಣ್ಣ, ಕಪ್ಪು ಬಣ್ಣವಾಗಿತ್ತೆಂದು ಈಗ ರುಜುವಾತಾಗಿದೆ. ಭಾರತದ ಹಾಲು ಉತ್ಪಾದನೆಗೆ ಗರಿಷ್ಠ ಕಾಣಿಕೆ ಸಲ್ಲಿಸುತ್ತಿರುವ ಪ್ರಾಣಿ ಎಮ್ಮೆ. ಆದರೆ ಕೇಸರಿ ಪಡೆಗಳು ಯಾವತ್ತೂ ಎಮ್ಮೆಯನ್ನು ಹಸುವಿಗೆ ಸಮಾನವಾಗಿ ನಡೆಸಿ ಕೊಂಡಿಲ್ಲ. ನನ್ನ ಪ್ರಕಾರ ಅಯ್ಯಪ್ಪ ಸ್ವಾಮಿ ಓರ್ವ ಶೂದ್ರ ಅಥವಾ ಆದಿವಾಸಿ ದೇವತೆ. ಆತ ಸ್ವತಃ ಕಪ್ಪು ಮೈಬಣ್ಣದವ. ಅಯ್ಯಪ್ಪ ಮಾಲೆ ಧರಿಸುವವರು ಕಪ್ಪು ಬಟ್ಟೆಗಳನ್ನು ಮಾತ್ರ ಧರಿಸುತ್ತಾರೆ. ಹೆಚ್ಚಾಗಿ ಒಂದು ಮುಂಡು ಮತ್ತು ಒಂದು ಅಂಗಿ ಧರಿಸುತ್ತಾರೆ. ಹರಪ್ಪ ಮತ್ತು ಅಯ್ಯಪ್ಪ ಎಂಬ ಹೆಸರುಗಳ ನಡುವೆ ಹೋಲಿಕೆ ಇರುವ ಸಾಮ್ಯ ಕೂಡ ಗಮನಾರ್ಹ. ಕಪ್ಪು ಮೈಬಣ್ಣದ ಇಂಡೋ- ದ್ರಾವಿಡರು ಹರಪ್ಪವನ್ನು ನಿರ್ಮಿಸಿದ್ದರು; ‘ಕಪ್ಪು’ ಬಣ್ಣದ ಅಯ್ಯಪ್ಪನನ್ನು ಶೂದ್ರರು, ದಲಿತರು ಹಾಗೂ ಆದಿವಾಸಿಗಳು ಪೂಜಿಸುತ್ತಾರೆ. ಬ್ರಾಹ್ಮಣರು, ವೈಶ್ಯರು, ಜೈನರು ಮತ್ತು ಕಾಯಸ್ಥರು ಸಾಮಾನ್ಯವಾಗಿ ಅಯ್ಯಪ್ಪ ದೇವಾಲಯಕ್ಕೆ ಹೋಗುವುದಿಲ್ಲ ಮತ್ತು ಮಾಲೆಯ ಉಡುಪು ಧರಿಸುವುದಿಲ್ಲ. ತೆಲುಗು ಜನರು ಅಯ್ಯಪ್ಪ ಭಕ್ತರಲ್ಲೇ ಅತಿದೊಡ್ಡ ಸಮೂಹವಾಗಿದ್ದಾರೆ. 66 ವರ್ಷಗಳ ನನ್ನ ಜೀವಿತದಲ್ಲಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಅಥವಾ ಆರ್ಯ, ವೈಶ್ಯ ಅಯ್ಯಪ್ಪ ದೀಕ್ಷೆ ಪಡೆದು ಸಾಂಪ್ರದಾಯಿಕ ಕಪ್ಪು ಬಟ್ಟೆಗಳನ್ನು ಧರಿಸಿ ಶಬರಿಮಲೆಗೆ ಹೋಗುವುದನ್ನು ನಾನು ನೋಡಿಲ್ಲ.

ಮಹಿಳೆಯರು ಮಾಲೆ ಧರಿಸದಿದ್ದರೂ ಬಹಳಷ್ಟು ಮಂದಿ ಶಬರಿಮಲೆ ದೇವಾಲಯಕ್ಕೆ ಹೋಗುವುದನ್ನು ನಾನು ನನ್ನ ಬಾಲ್ಯದಲ್ಲಿ ಕಂಡದ್ದು ನೆನಪಾಗುತ್ತದೆ.
ಮಾಲ ಆರಾಯ ಬುಡಕಟ್ಟು ಜನರು ಹೇಳುವಂತೆ 1970 ಮತ್ತು 1980ರ ದಶಕಗಳಲ್ಲಿ ಕೇರಳದ ಬ್ರಾಹ್ಮಣರು ದೇವಾಲಯವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮಹಿಳಾ ವಿರೋಧಿ ಆಚರಣೆಗಳನ್ನು ಆರಂಭಿಸಿದರು.

ಅಯ್ಯಪ್ಪ ದ್ರಾವಿಡ ಪುರುಷ - ಸ್ತೀ ಸಮಾನತೆಯ ಒಂದು ಸಂಕೇತ, ತನ್ನ ಕೇಸರಿ ದಳದ ನಾಯಕತ್ವದಲ್ಲಿ ಆರ್ಯನ್ ಬ್ರಾಹ್ಮಣವಾದ (ಬ್ರಾಹ್ಮಣಿಸಂ)ಈಗ ಈ ಸಮಾನತೆಯ ದ್ರಾವಿಡ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಇದನ್ನು ತಡೆಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಯತ್ನಿಸುತ್ತಿದ್ದಾರೆ. ನಾರಾಯಣ ಗುರು ಮತ್ತು ಅಯ್ಯಂಕಲಿಯ ಬಳಿಕ ಪಿಣರಾಯಿ ವಿಜಯನ್ ಒಂದು ಅಯ್ಯಪ್ಪ ಪರವಾದ ಚಳವಳಿಯ ನೇತೃತ್ವ ವಹಿಸಿದ್ದಾರೆ. ಇದನ್ನು ಅವರು ಒಂದು ‘ನವ ಜ್ಞಾನ ಪುನರುಜ್ಜೀವನ’ ಎಂದು ಕರೆದಿದ್ದಾರೆ.

 ಬಂಗಾಲದಲ್ಲಿ ರಾಜಾರಾಮ್ ಮೋಹನ್‌ರಾಯ್, ಮಹಾರಾಷ್ಟ್ರದಲ್ಲಿ ಜ್ಯೋತಿರಾವ್ ಫುಲೆ, ಕೇರಳದಲ್ಲಿ ನಾರಾಯಣಗುರು ಮತ್ತು ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್‌ರವರಿಂದ ಆರಂಭಗೊಂಡ ಭಾರತೀಯ ಜ್ಞಾನ ಪುನರುಜ್ಜೀವನವು ಸತಿಸಹಗಮನ, ಬಾಲ್ಯವಿವಾಹ ಮತ್ತು ನಿರಕ್ಷರತೆಯಿಂದ ಮಹಿಳೆಯರನ್ನು ವಿಮೋಚನೆ ಗೊಳಿಸುವ ವಿಷಯದಿಂದಲೇ ಆರಂಭವಾಯಿತು. ಅಯ್ಯಪ್ಪ ಕೂಡಾ ಮಹಿಳೆಯರ ಆಧ್ಯಾತ್ಮಿಕ ಸಮಾನತೆಯ ಪರವಾಗಿಯೇ ಇರುವಾತ.

 ನಾರಾಯಣ ಗುರುವಿನ ಹಾಗೆಯೇ ವಿಜಯನ್ ಕೂಡ ಈಳವ ಸಮುದಾಯಕ್ಕೆ ಸೇರಿದವರು. ಈಗ ಎಲ್ಲಾ ಪುರೋಗಾಮಿ ಶಕ್ತಿಗಳು ಅವರ ‘ನವ ಜ್ಞಾನ ಪುನರುಜ್ಜೀವನ’ ಚಳವಳಿಯನ್ನು ಬೆಂಬಲಿಸಬೇಕು. ಇಲ್ಲವಾದಲ್ಲಿ ಇಡೀ ಭಾರತೀಯ ಸಮಾಜ ಹಿನ್ನಡೆಗೆ ಗುರಿಯಾಗಬೇಕಾದೀತು. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಬೇಕೆಂಬ ಒತ್ತಾಯಕ್ಕೆ ಆರೆಸ್ಸೆಸ್‌ನ ಮೇಲ್ಜಾತಿಯ ಜನರ ಬೆಂಬಲವಿದೆಯೆಂದು ವಿಜಯನ್‌ರವರಿಗೆ ಗೊತ್ತಿದೆ. ಆದ್ದರಿಂದಲೇ ಅವರು ಈ ಒತ್ತಾಯವನ್ನು ‘ಮೇಲ್ಜಾತಿಯ ಒಂದು ಒಳ ಸಂಚು’ ಎಂದು ಸರಿಯಾಗಿಯೇ ಕರೆದಿದ್ದಾರೆ. ಅವರಿಗೆ ಈಗಾಗಲೇ ತಮಿಳುನಾಡಿನ ಪೆರಿಯಾರ್ ವಾದಿಗಳ ಬೃಹತ್ ಬೆಂಬಲ ಸಿಗುತ್ತದೆ. ಅಯ್ಯಪ್ಪ ಭಕ್ತರು ಮತ್ತು ಪೆರಿಯಾರ್ ಅನುಯಾಯಿಗಳ ನಡುವೆ ಕಪ್ಪು ವಸ್ತ್ರ ಸಂಹಿತೆಯ ವಿಷಯದಲ್ಲಿ ಒಂದು ಸಮಾನ ಸಾಂಸ್ಕೃತಿಕ ಬೆಸುಗೆ ಇದೆ.

ಎಂದೂ ಕಪ್ಪು ಬಣ್ಣವನ್ನು ಗೌರವಿಸದ ಅಥವಾ ಅಯ್ಯಪ್ಪ ಮಾಲೆಯನ್ನು ಧರಿಸದ ಆರೆಸ್ಸೆಸ್-ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳು ಶಬರಿಮಲೆ ದೇವಾಲಯಕ್ಕೆ ಯಾರು ಹೋಗಬಹುದು ಮತ್ತು ಯಾರು ಹೋಗಬಾರದು? ಎಂದು ಹೇಳಲು ಅವುಗಳಿಗೆ ಯಾವ ಹಕ್ಕಿದೆ? ಕೇಸರಿ ಪಡೆಯು ಕೇರಳದ ಕಮ್ಯುನಿಸ್ಟ್ ಸರಕಾರವನ್ನು ಉರುಳಿಸಲಿಕ್ಕಾಗಿ ಈ ಚಳವಳಿಯನ್ನು ಆರಂಭಿಸಿದೆ.


ಕೃಪೆ: countercurrents.org

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News