ರೈತರ ಗೋವುಗಳ ಹಕ್ಕು ರೈತರದೇ

Update: 2018-12-29 07:41 GMT

ಭಾರತದ ವರ್ತಮಾನದ ಅತ್ಯಂತ ಅಪಾಯಕಾರಿ ಬೆಳವಣಿಗೆಗಳೆಂದರೆ ವಿಜ್ಞಾನವನ್ನು ವಿಜ್ಞಾನಿಗಳಲ್ಲದವರು, ಅರ್ಥಶಾಸ್ತ್ರವನ್ನು ರಾಜಕಾರಣಿಗಳು, ಕೃಷಿಯನ್ನು ಧಾರ್ಮಿಕ ಸನ್ಯಾಸಿಗಳು ಬೋಧಿಸುತ್ತಿರುವುದು. ಇದೇ ಸಂದರ್ಭದಲ್ಲಿ ಧರ್ಮದ ಕುರಿತಂತೆ ಅರಿವೇ ಇಲ್ಲದ ಬೀದಿಯಲ್ಲಿರುವ ಗೂಂಡಾಗಳು, ರೌಡಿಗಳು ಸಂಸ್ಕೃತಿ, ಧರ್ಮದ ರಕ್ಷಕರಾಗಿ ಮಿಂಚುತ್ತಿದ್ದಾರೆ. ಜೀವಮಾನದಲ್ಲಿ ಹಟ್ಟಿಯೊಳಗೆ ಕಾಲೇ ಇಡದ ಯುವಕರು ಬೀದಿಯಲ್ಲಿ ಕತ್ತಿ ದೊಣ್ಣೆ ಹಿಡಿದು ಗೋರಕ್ಷಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅರ್ಥಶಾಸ್ತ್ರದ ಕುರಿತಂತೆ ಅ ಆ ತಿಳಿಯದ ರಾಜಕಾರಣಿಗಳು ಅದರೊಳಗೆ ಕೈಯಾಡಿಸಿ ದೇಶದ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುತ್ತಿದ್ದಾರೆ. ಆರ್‌ಬಿಐ ಇದಕ್ಕೆ ಉತ್ತಮ ಉದಾಹರಣೆ.

ಸಂವಿಧಾನ ವಿರೋಧಿಗಳೇ ನ್ಯಾಯ ವ್ಯವಸ್ಥೆಯ ತುತ್ತ ತುದಿಯಲ್ಲಿ ಯಾರಿರಬೇಕು ಎನ್ನುವುದನ್ನು ನಿರ್ಧರಿಸುತ್ತಿರುವುದರಿಂದ ಸುಪ್ರೀಂಕೋರ್ಟ್‌ನಿಂದ ವೈರುಧ ತುಂಬಿರುವ ತೀರ್ಪುಗಳು ಹೊರಬರುತ್ತಿವೆ. ನ್ಯಾಯಾಧೀಶರೇ ಸುಪ್ರೀಂಕೋರ್ಟ್‌ನ ವಿರುದ್ಧ ಬಹಿರಂಗ ಪತ್ರಿಕಾಗೋಷ್ಠಿ ಕರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ದೇಶದ ಹೈನೋದ್ಯಮಕ್ಕೆ ತಲೆ ತಲಾಂತರಗಳಿಂದ ಕೊಡುಗೆ ನೀಡುತ್ತಾ ಬಂದವರು ಬದಿಗೆ ಸರಿದು, ಗೋವುಗಳನ್ನು ಯಾರು ಸಾಕಬೇಕು, ಯಾರು ಮಾರಾಟಮಾಡಬೇಕು, ಯಾರಿಗೆ ಮಾರಾಟ ಮಾಡಬೇಕು ಎಂಬಿತ್ಯಾದಿಗಳನ್ನು ಹೈನೋದ್ಯಮದ ಯಾವ ಹಿನ್ನೆಲೆಯೂ ಇಲ್ಲದ ಯೋಗಿಯಂತಹ ಕಾವಿಧಾರಿಗಳು ತೀರ್ಮಾನಿಸುತ್ತಿದ್ದಾರೆ. ಪರಿಣಾಮವಾಗಿ ಗ್ರಾಮೀಣ ಪ್ರದೇಶದಲ್ಲಿ ಹೈನೋದ್ಯಮ ಕುಸಿತ ಗೊಂಡಿದೆ. ಸರಕಾರಿ ಶಾಲೆಗಳು ಗೋಶಾಲೆಗಳಾಗಿ ಪರಿವರ್ತನೆಗೊಳ್ಳುತ್ತಿವೆ.

 ಹೌದು, ದೇಶದಲ್ಲಿ ಅರ್ಥಶಾಸ್ತ್ರವಾಗಿದ್ದ ಹೈನೋದ್ಯಮವನ್ನು ಧರ್ಮಶಾಸ್ತ್ರವಾಗಿಸುವ ವೈದಿಕ ಶಕ್ತಿಗಳ ಸಂಚುಗಳ ಪರಿಣಾಮಗಳನ್ನು ದೇಶ ಅನುಭವಿಸತೊಡಗಿದೆ. ಗೋರಕ್ಷಣೆಗೆ ಹೊಸ ವ್ಯಾಖ್ಯಾನವನ್ನು ಕೊಟ್ಟಿರುವ ಯೋಗಿ ಸರಕಾರ, ಅದಕ್ಕಾಗಿ ಗೂಂಡಾಗಳ ಗೋರಕ್ಷಕ ಪಡೆ ಕಟ್ಟಿ, ಗೋವುಗಳಿಗೆ ಆ್ಯಂಬುಲೆನ್ಸ್, ಗೋಶಾಲೆ ಎಂದೆಲ್ಲ ತಲೆಬುಡವಿಲ್ಲದ ಯೋಜನೆಗಳನ್ನು ರೂಪಿಸ ಹೊರಟಿದೆ. ರೈತರು ಸಾಗಿದ ಅವರ ಗೋವುಗಳ ಮಾರಾಟದ ಹಕ್ಕುಗಳನ್ನು ಕಸಿದುಕೊಂಡ ಪರಿಣಾಮವಾಗಿ ಇಂದು ಉತ್ತರ ಪ್ರದೇಶದಲ್ಲಿ ಗೋಸಾಕಣೆ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ . ಅನುಪಯುಕ್ತ ದನಗಳನ್ನು ರೈತರು ಅನಿವಾರ್ಯವಾಗಿ ರಸ್ತೆಗಳಿಗೆ ಬಿಡುತ್ತಿದ್ದಾರೆ. ಗೋಶಾಲೆಗಳ ಹೆಸರಿನಲ್ಲಿ ಯಾರ್ಯಾರೋ ಸರಕಾರಿ ನಿಧಿಗಳನ್ನು ದೋಚುತ್ತಿದ್ದಾರೆ. ಗೋಶಾಲೆಗಳಲ್ಲಿರುವ ನೂರಾರು ದನಗಳು ಆಹಾರವಿಲ್ಲದೆ ಸಾಯುತ್ತಿವೆ. ಜೊತೆಗೆ ಗುಟ್ಟಾಗಿ ಬೃಹತ್ ಸಂಸ್ಕೃರಣಾ ಘಟಕಗಳಿಗೆ ರವಾನೆಯಾಗುತ್ತಿವೆ. ರಸ್ತೆಯಲ್ಲಿ ಅಡ್ಡಾಡುತ್ತಿರುವ ದನಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆ, ಶಾಲೆಗಳಲ್ಲಿ ಕಟ್ಟಲಾಗುತ್ತಿದೆ. ಉತ್ತರಪ್ರದೇಶದ ಸರಕಾರ, ಜನರ ಚಿಂತೆಯನ್ನು ಬಿಟ್ಟು ಬೀದಿದನಗಳ ಕುರಿತಂತೆ ಚಿಂತೆ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ.

ಯಾವುದೇ ಕೃಷಿ ಉದ್ಯಮಗಳು ಒಂದಕ್ಕೊಂದು ಪೂರಕದ ಸರಪಣಿಯನ್ನು ಸರಪಣಿಯನ್ನು ಬೆಸೆದುಕೊಂಡಿರುತ್ತವೆ. ಹಿಂದೆ ಗೋಸಾಕಣೆ ಮತ್ತು ಕೃಷಿ ಜೊತೆ ಜೊತೆಯಾಗಿ ಸಾಗುತ್ತಿತ್ತು. ಎತ್ತನ್ನು ಉಳುವುದಕ್ಕೆ ಬಳಸುತ್ತಿದ್ದರು. ಹಾಗೆಯೇ ದನದ ಸೆಗಣಿ, ಗೊಬ್ಬರ ಇತ್ಯಾದಿಗಳನ್ನು ಕೃಷಿಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದರು. ಇವುಗಳ ಮೂಲಕ ದನಗಳಿಗೆ ಬೇಕಾದ ಆಹಾರಗಳ ವೆಚ್ಚವನ್ನು ಸರಿದೂಗಿಸಬಹುದಿತ್ತು. ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿ ಇಳಿಕೆಯಾಗಿದೆ. ಎತ್ತುಗಳನ್ನು ಗದ್ದೆಯಲ್ಲಿ ಹೂಡುವ ಪದ್ಧತಿಯೂ ಇಲ್ಲ. ಎಲ್ಲದಕ್ಕೂ ಯಂತ್ರಗಳನ್ನೇ ಅವಲಂಬಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೈನೋದ್ಯಮದಲ್ಲಿ ಕೃಷಿಕರು ಹೇಗೆ ಭಾಗಿಯಾಗಿದ್ದರೋ, ಹಾಗೆಯೇ ಗೋಮಾಂಸಾಹಾರಿಗಳೂ ಅದಕ್ಕೆ ಪೂರಕವಾಗಿ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ರೈತರು ತಮ್ಮ ಹಟ್ಟಿಯಲ್ಲಿರುವ ಅನುಪಯುಕ್ತ ಗೋವುಗಳನ್ನು ತಲೆತಲಾಂತರಗಳಿಂದ ಮಾಂಸಾಹಾರಿಗಳಿಗೆ ಒದಗಿಸುತ್ತಾ ಬಂದಿದ್ದಾರೆ. ಇದರಿಂದ ಅವರಿಗೆ ಎರಡು ಲಾಭಗಳಿವೆ. ಒಂದು ಹಟ್ಟಿಯಲ್ಲಿಟ್ಟು ಅವುಗಳನ್ನು ಸಾಕುವ ಭಾರ ಕಡಿಮೆಯಾಗುತ್ತದೆ. ಎರಡನೆಯದು, ಅವುಗಳನ್ನು ಮಾರಿದರೆ ಅವರಿಗೆ ಕೈ ತುಂಬಾ ದುಡ್ಡು ಸಿಗುತ್ತದೆ. ಈ ಹಣದಿಂದ ಇರುವ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗುತ್ತದೆ. ಈ ದೇಶದಲ್ಲಿ ಪೂಜೆ ಮಾಡುವುದಕ್ಕಾಗಿ ಗೋವುಗಳನ್ನು ಸಾಕಿದ ಉದಾಹರಣೆಗಳೇ ಇಲ್ಲ. ಇಷ್ಟಕ್ಕೂ ಪೂಜೆ ಮಾಡುವವರು ಸೆಗಣಿ ಬಳಿದ ಇತಿಹಾಸವೂ ಇಲ್ಲ. ಹೈನೋದ್ಯಮದ ಭಾಗವಾಗಿ ಗೋವುಗಳನ್ನು ಸಾಕುತ್ತಾ ವರ್ಷಕ್ಕೊಮ್ಮೆ ಅದಕ್ಕೆ ರೈತರು ಪೂಜೆ ಸಲ್ಲಿಸುವುದಿದೆ.

ಗೋವುಗಳು ರೈತರಿಗೆ ಕರೆನ್ಸಿ ಇದ್ದ ಹಾಗೆ. ಮನೆಯಲ್ಲಿ ಹೆಚ್ಚುವರಿಯಾಗಿ ಎರಡು ಅನುಪಯುಕ್ತ ಹಸುಗಳಿದ್ದಾವೆ ಎಂದರೆ ಅವರ ಮನೆ ರಿಪೇರಿ, ಮಗಳ ಮದುವೆ ಅಥವಾ ಇನ್ನಿತರ ಕಾರ್ಯಗಳಿಗೆ ಅದನ್ನು ಮಾರಿ ಬಂದ ಹಣ ಬಳಕೆಯಾಗುತ್ತದೆ. ಆದರೆ ಯಾವಾಗ ಗೋಸಾಕಣೆ ನಡೆಯುತ್ತಿರುವುದೇ ಪೂಜೆಗಾಗಿ ಎಂದು ವೈದಿಕರು ಅಧಿಕಾರ ಸ್ಥಾಪಿಸಿದರೋ ಅಲ್ಲಿಂದ ಹೈನೋದ್ಯಮ ಅಸ್ತವ್ಯಸ್ತಗೊಳ್ಳತೊಡಗಿತು. ಸಂಘಪರಿವಾರದ ಗೋ ರಾಜಕಾರಣದಿಂದಾಗಿ ಈವರೆಗೆ ಗೋರಕ್ಷಕರಾಗಿ ಮುನ್ನೆಲೆಯಲ್ಲಿದ್ದ  ರೈತರು ಹಿಂದೆ ಸರಿದರು. ಆ ಸ್ಥಾನವನ್ನು ಬೀದಿಯಲ್ಲಿ ಕತ್ತಿ ದೊಣ್ಣೆ ಹಿಡಿದು ತಿರುಗಾಡುತ್ತಿರುವ ಸಂಘಪರಿವಾರದ ದುಷ್ಕರ್ಮಿಗಳು ತುಂಬಿದರು. ರೈತರ ಸೊತ್ತಾಗಿರುವ ದನಗಳನ್ನು ಯಾರಿಗೆ ಮಾರಾಟಮಾಡಬೇಕು ಎನ್ನುವುದನ್ನು ಈ ಗೋರಕ್ಷಕರು ತೀರ್ಮಾನಿಸ ತೊಡಗಿದರು. ಸರಕಾರ ಜಾರಿಗೆ ತಂದ ‘ಜಾನುವಾರು ಮಾರಾಟ ಕಾಯ್ದೆ’ಯಂತೂ ರೈತರ ಪಾಲಿಗೆ ಎರಡನೇ ನೋಟು ನಿಷೇಧ ಘೋಷಣೆಯಾಗಿತ್ತು.

ವಿಪರ್ಯಾಸವೆಂದರೆ ಈವರೆಗೆ ಅನುಪಯುಕ್ತ ಗೋವುಗಳನ್ನು ಯಾರೂ ಸಾಕಬೇಕಾಗಿದ್ದಿರಲಿಲ್ಲ. ಅದು ಆಹಾರವಾಗಿ ಮತ್ತೆ ಸಮಾಜವನ್ನು ಪೊರೆಯುತ್ತಿತ್ತು. ಆ ಮೂಲಕ ಬಡ ವರ್ಗಕ್ಕೆ ಪೌಷ್ಟಿಕ ಆಹಾರ ದೊರಕುತ್ತಿತ್ತು. ಸರಕಾರದ ನೀತಿಯಿಂದಾಗಿ ಜನಸಾಮಾನ್ಯರು ಉಪಯುಕ್ತ ಆಹಾರದಿಂದ ವಂಚಿತರಾದರು. ಇದೇ ಸಂದರ್ಭದಲ್ಲಿ ರೈತರು ಅನುಪಯುಕ್ತ ಗೋವುಗಳಿಂದ ಬರುವ ಆದಾಯದಿಂದ ವಂಚಿತರಾದರು. ಇಷ್ಟೇ ಆದರೆ ಪರವಾಗಿರಲಿಲ್ಲ. ಅನುಪಯುಕ್ತವಾದ ಗೋವುಗಳನ್ನು ಸಾಕುವ ಹೊರೆ ಸರಕಾರದ ಮೇಲೆ ಬಿತ್ತು. ಜನಸಾಮಾನ್ಯರ ಅಭಿವೃದ್ಧಿಗಾಗಿ, ಆಸ್ಪತ್ರೆ, ಶಾಲೆಗಳಿಗಾಗಿ ವ್ಯಯಿಸುವ ಹಣವನ್ನು ಸರಕಾರ ಯಥೇಚ್ಛವಾಗಿ ಗೋಶಾಲೆಗಳಿಗಾಗಿ ವ್ಯಯಿಸಿತು. ಆದರೆ ಇಲ್ಲೂ ಸರಕಾರ ವಿಫಲವಾಯಿತು. ಗೋಶಾಲೆಗಳಲ್ಲಿ ನೂರಾರು ಗೋವುಗಳು ಸರಿಯಾದ ಆರೈಕೆಯಿಲ್ಲದೆ ಸತ್ತು ಹೋದವು. ಗೋಶಾಲೆಯ ಹಣ ಕಂಡವರ ಜೇಬುಗಳನ್ನು ತುಂಬಿತು. ರೈತರ ದನವನ್ನು ಕಂಡವರು ಕಸಾಯಿ ಖಾನೆಗಳಿಗೆ ನೀಡಿ ಹಣ ಮಾಡಿಕೊಂಡರು. ಹೈನೋದ್ಯಮ ತತ್ತರಿಸದೇ ಇನ್ನೇನಾದೀತು?

ದೇಶ ಉದ್ಯೋಗದ ಕೊರತೆಯಿಂದ ಮತ್ತು ಆಹಾರದ ಕೊರತೆಯಿಂದ ನರಳುತ್ತಿರುವ ಈ ಸಂದರ್ಭದಲ್ಲಿ ಇನ್ನಾದರೂ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಬೇಕು. ಗೋಮಾಂಸಾಹಾರಕ್ಕೆ ಹೆಚ್ಚು ಹೆಚ್ಚು ಪ್ರೋತ್ಸಾಹ ಕೊಡುವ ಮೂಲಕ ಹೈನೋದ್ಯಮವನ್ನು ಎತ್ತಿ ಹಿಡಿಯಬೇಕು. ರೈತರ ಗೋವುಗಳು ರೈತರ ಹಕ್ಕು ಎನ್ನುವುದನ್ನು ಸ್ಪಷ್ಟಪದದಲ್ಲಿ ಘೋಷಿಸಬೇಕು. ಗೋಶಾಲೆಗಳನ್ನು ಮುಚ್ಚಿ ಅದಕ್ಕಾಗಿ ಸುರಿಯುತ್ತಿರುವ ಹಣವನ್ನು ಆಸ್ಪತ್ರೆ, ಶಾಲೆಗಳಿಗಾಗಿ ವ್ಯಯಿಸಬೇಕು. ಇದರಿಂದಾಗಿ ಗೋವುಗಳೂ ಉಳಿಯುತ್ತವೆ, ರೈತರೂ ಉಳಿಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News