ಸ್ವಾತಂತ್ರ್ಯ ಹೋರಾಟದಲ್ಲಿ ಬೇರ್ಪಟ್ಟ ದಂಪತಿಯ ಅಪೂರ್ವ ಮಿಲನದ ಕಥೆ ಓದಲೇಬೇಕು

Update: 2018-12-29 04:27 GMT

ಕಣ್ಣೂರು, ಡಿ. 29: ಅದೊಂದು ಅಪೂರ್ವ ಕ್ಷಣ. ಖಂಡಿತವಾಗಿಯೂ ಸಿನಿಯಾ ಕಥೆಯಾಗಬಲ್ಲ ತಿರುಳು. 1946ರಲ್ಲಿ ಕೇರಳದ ಕವುಂಬಾಯಿ ರೈತ ದಂಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಸೇರಿದ್ದ ಇ.ಕೆ. ನಾರಾಯಣ ನಂಬಿಯಾರ್ (93) ಸುಮಾರು 72 ವರ್ಷಗಳ ಬಳಿಕ ತಮ್ಮ ಮೊದಲ ಪತ್ನಿಯನ್ನು ಭೇಟಿಯಾದ ಸಂದರ್ಭ. ಭಾವಾತಿರೇಕದಿಂದ ಇಬ್ಬರಿಗೂ ಮಾತು ಹೊರಡಲೇ ಇಲ್ಲ. ಆನಂದಭಾಷ್ಪ ಕೋಡಿಯಾಗಿ ಹರಿದಿತ್ತು.

ಇಬ್ಬರೂ ಅಕ್ಕಪಕ್ಕ ಕೂತು ಕಣ್ಣೀರು ಒರೆಸಿಕೊಂಡರು. ಶಾಂತಚಿತ್ತರಾಗಿದ್ದ 89 ವರ್ಷದ ಶಾರದಾ ಯಾರ ಮೇಲೂ ಸಿಟ್ಟು ತೋರಿಸಲಿಲ್ಲ. "ನನಗೆ ಯಾರ ಮೇಲೂ ಸಿಟ್ಟಿಲ್ಲ" ಎಂದು ನಾರಾಯಣನ್ ಕೂಡಾ ಅದಕ್ಕೆ ಒಪ್ಪಿಗೆಯ ಮುದ್ರೆಯೊತ್ತಿದರು.

"ಮತ್ತೆ ನೀನೀಕೆ ಸುಮ್ಮನಿದ್ದಿ ? ಏಕೆ ಏನೂ ಹೇಳುತ್ತಿಲ್ಲ ?"- ತಲೆಬಾಗಿಸಿ ಸುಮ್ಮನೆ ಕುಳಿತಿದ್ದ ಶಾರದಾಗೆ ನಾರಾಯಣ್ ಪ್ರಶ್ನೆ ಎಸೆದರು. ಇವರು ಪರಸ್ಪರ ವಿವಾಹವಾದಾಗ ಶಾರದಾಗೆ 13 ಹಾಗೂ ನಾರಾಯಣ್‌ಗೆ 17 ವರ್ಷ. 

ಮದುವೆಯಾಗಿ 10 ತಿಂಗಳಲ್ಲಿ ಕವುಂಬಾಯಿ ಚಳವಳಿಯ ನೇತಾರ ಥಲಿಯನ್ ರಾಮನ್ ನಂಬಿಯಾರ್ ಹಾಗೂ ನಾರಾಯಣ್ ಭೂಗತರಾದದರು. ಇಬ್ಬರನ್ನೂ ಎರಡು ತಿಂಗಳ ಬಳಿಕ ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ರಾಮನ್ ಹಾಗೂ ನಾರಾಯಣನ್ ಅವರನ್ನು ಹುಡುಕಿಕೊಂಡು ಬಂದ ಪೊಲೀಸರು ಅಪರಾತ್ರಿಯಲ್ಲಿ ಬಾಗಿಲು ತಟ್ಟಿದಾಗ ಬೆಚ್ಚಿದ ಶಾರದಾ ತವರು ಮನೆ ಸೇರಿಕೊಂಡರು.

"ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಯಿತು" ಎಂದು ನಾರಾಯಣ್ ಅಳಿಯ ಮಧುಕುಮಾರ್ ನೆನಪಿಸಿಕೊಳ್ಳುತ್ತಾರೆ. ನಾರಾಯಣ್‌ಗೆ ಎಂಟು ವರ್ಷ ಜೈಲಾಯಿತು. ಕಣ್ಣೂರು, ವಿಯ್ಯೂರು ಮತ್ತು ಸೇಲಂ ಜೈಲುಗಳಲ್ಲಿ ಕಾರಾಗೃಹವಾಸ ಅನುಭವಿಸಿದರು. 1950ರ ಫೆಬ್ರವರಿ 11ರಂದು ತಂದೆಯನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಕೆಲ ವರ್ಷ ಬಳಿಕ ಶಾರದಾ ಕುಟುಂಬದವರು ಆಕೆಯನ್ನು ಬೇರೆ ವ್ಯಕ್ತಿಗೆ ವಿವಾಹ ಮಾಡಿಕೊಡಲು ನಿರ್ಧರಿಸಿದರು. ಬಿಡುಗಡೆ ಬಳಿಕ 1957ರಲ್ಲಿ ನಾರಾಯಣ್ ಕೂಡಾ ಬೇರೆ ವಿವಾಹವಾದರು. ಹಲವು ವರ್ಷಗಳ ಬಳಿಕ ಶಾರದಾ ಅವರ ಪುತ್ರ ಭಾರ್ಗವನ್, ನಾರಾಯಣನ್ ಸಂಬಂಧಿಕರನ್ನು ಭೇಟಿಯಾದರು. ಕುಟುಂಬ ಇತಿಹಾಸದ ಬಗ್ಗೆ ಚರ್ಚಿಸಿದಾಗ, ಎರಡೂ ಕುಟುಂಬಗಳಿಗೆ ಸಂಬಂಧ ಇರುವ ವಿಚಾರ ತಿಳಿಯಿತು. ಪರಸ್ಪರ ಬೇರ್ಪಟ್ಟ ದಂಪತಿಯನ್ನು ಮತ್ತೆ ಸೇರಿಸಬೇಕು ಎಂಬ ನಿರ್ಧಾರಕ್ಕೆ ಬಂದರು.

ಈಗ ವಿಧುರರಾಗಿರುವ ನಾರಾಯಣನ್, ಶಾರದಾಳನ್ನು ನೋಡಲು ಪರಸಿನಿಕಡವು ಎಂಬಲ್ಲಿರುವ ಭಾರ್ಗವನ್ ಮನೆಗೆ ಬಂದರು. "ಮೊದಲು ತಾಯಿ ಹೊರಗೆ ಬರಲು ಮತ್ತು ನಾರಾಯಣನ್ ಜತೆ ಮಾತನಾಡಲು ನಿರಾಕರಿಸಿದರು. ಆದರೆ ಸಮಾಧಾನ ಹೇಳಿದ ಬಳಿಕ ಒಪ್ಪಿಕೊಂಡರು" ಎಂದು ಭಾರ್ಗವನ್ ವಿವರಿಸುತ್ತಾರೆ.

30 ವರ್ಷಗಳ ಹಿಂದೆ ಎರಡನೇ ಪತಿಯನ್ನು ಕಳೆದುಕೊಂಡ ಶಾರದಾಗೆ ಆರು ಮಂದಿ ಮಕ್ಕಳಿದ್ದು, ನಾಲ್ವರು ಮಾತ್ರ ಬದುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News