ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವು: ಸೂಕ್ತ ತನಿಖೆಗೆ ಬಿಜೆಪಿ ಒತ್ತಾಯ
ಬೆಂಗಳೂರು, ಡಿ. 29: ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿನ ಬಗ್ಗೆ ಸಂಶಯಗಳಿದ್ದು, ಅವರ ಸಾವು ಯಾವ ಕಾರಣದಿಂದ ಸಂಭವಿಸಿದೆ ಎಂಬ ಬಗ್ಗೆ ತನಿಖೆ ಅಗತ್ಯವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಇಂದಿಲ್ಲಿ ಆಗ್ರಹಿಸಿದ್ದಾರೆ.
ಶನಿವಾರ ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಧುಕರ್ ಶೆಟ್ಟಿ ಓರ್ವ ದಕ್ಷ, ಪ್ರಾಮಾಣಿಕ ಅಧಿಕಾರಿ. ಅವರು ಭ್ರಷ್ಟರ ಪಾಲಿಗೆ ಒಂದು ರೀತಿಯಲ್ಲಿ ಸಿಂಹ ಸ್ವಪ್ನವೇ ಆಗಿದ್ದರು ಎಂದು ಸ್ಮರಿಸಿದರು.
ಮಧುಕರ ಶೆಟ್ಟಿ ನಮ್ಮ ಜಿಲ್ಲೆಯವರು. ಶೃಂಗೇರಿಯಲ್ಲಿ ನಕ್ಸಲರ ವಿರುದ್ಧ ಉತ್ತಮ ಕೆಲಸ ಮಾಡಿ, ನಕ್ಸಲರನ್ನ ಪತ್ತೆ ಹಚ್ಚಲು ಸಾಕಷ್ಟು ಶ್ರಮ ವಹಿಸಿದ್ದರು. ಅಲ್ಲದೆ ಲೋಕಾಯುಕ್ತದಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ಅವರ ಸಾವು ದಿಗ್ಭ್ರಮೆ ಮೂಡಿಸಿದೆ ಎಂದರು.
ಸರಕಾರಗಳ ಕೆಲ ವರ್ತನೆಗಳಿಂದ ಅವರು ಬೇಸಗೊಂಡಿದ್ದ ಅವರು, ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿದ್ದರು. ಅವರ ಸಾವಿನ ಬಗ್ಗೆ ಸೂಕ್ತ ತನಿಖೆಯ ಬಳಿಕ ಸತ್ಯಾಂಶ ಗೊತ್ತಾಗುತ್ತದೆ. ಆದುದರಿಂದ ತನಿಖೆ ಅಗತ್ಯವಿದೆ ಎಂದು ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು.