×
Ad

ಹೊಸ ವರ್ಷಾಚರಣೆ ಸ್ವಚ್ಛತೆಯಿಂದ ಕೂಡಿರಲಿ: ಮೇಯರ್ ಗಂಗಾಂಬಿಕೆ

Update: 2018-12-29 21:33 IST

ಬೆಂಗಳೂರು, ಡಿ.29: ಹೊಸ ವರ್ಷದಲ್ಲಿ ದಿನನಿತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ಉತ್ಪಾದನೆಯಾಗುವುದರಿಂದ ಅದನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸುವ ನಾಗರಿಕರಿಗೆ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ-1976 ಸೆಕ್ಷನ್ 431(ಆ) ಪ್ರಕಾರ ದಂಡ ವಿಧಿಸಲು ಕೋರ್ಟ್ ಆದೇಶಿಸಿದ್ದು, ಆದರ ಅಡಿಯಲ್ಲಿ ಕನಿಷ್ಠ 100 ರೂ.ಗಳಿಂದ ಗರಿಷ್ಠ 5000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಪೌರಕಾರ್ಮಿಕರು ಪ್ರತಿನಿತ್ಯ ಮನೆ ಮನೆಗೆ ಹೋಗಿ ವಿಂಗಡಿಸಿದ ಕಸವನ್ನು ತಳ್ಳುಗಾಡಿ ಮುಖಾಂತರ ಸಂಗ್ರಹಿಸುತ್ತಿದ್ದಾರೆ. ನಗರದಲ್ಲಿ ಉತ್ಪತ್ತಿಯಾದ ಕಸವನ್ನು ಸಂಪೂರ್ಣವಾಗಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕ್ಷಮತೆ ಪಾಲಿಕೆ ಹೊಂದಿದೆ. ಆದ್ದರಿಂದ ಸಾರ್ವಜನಿಕರು ಮಾಡಬೇಕಾದುದ್ದು ಇಷ್ಟೇ. ಪ್ರತಿನಿತ್ಯ ತಪ್ಪದೇ ಮನೆಯಲ್ಲಿಯೇ ಕಸವನ್ನು ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು. ತ್ಯಾಜ್ಯಗಳನ್ನು ಪಾದಚಾರಿ ಮಾರ್ಗದ ಮೇಲೆ ಕಸ ಹಾಕುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ನಗರದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವುದು ಎಲ್ಲ ನಾಗರಿಕರ ಕರ್ತವ್ಯವಾಗಿರುವುದರಿಂದ ಈ ಸಂದರ್ಭದಲ್ಲಿ ಉತ್ಪತ್ತಿಯಾದ ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಸೂಕ್ತ ರೀತಿಯಲ್ಲಿ ವಿಂಗಡಣೆ ಮಾಡಿ ವಿಲೇವಾರಿ ಮಾಡುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದು, ಕಸವನ್ನು ಎಲ್ಲೆಂದರಲ್ಲಿ ಎಸೆದಲ್ಲಿ ಮಾರ್ಶಲ್‌ಗಳು ಸ್ಥಳದಲ್ಲಿಯೇ ದಂಡ ವಿಧಿಸಲಿದ್ದಾರೆ ಎಂದು ಸೂಚಿಸಿದರು.

ಹೊಸ ವರ್ಷದ ಆಚರಣೆಯನ್ನು ಸಡಗರ ಮತ್ತು ಸಂತೋಷದಿಂದ ಆಚರಿಸುವುದರ ಜೊತೆಗೆ ನಗರದ ನಾಗರಿಕರು ಮತ್ತು ಹೊಟೇಲ್, ಕ್ಲಬ್ ಮತ್ತು ಪಾರ್ಟಿ ಹಾಲ್ ಮಾಲಕರುಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಸ ವಿಲೇವಾರಿಗಾಗಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ಸರಿಯಾದ ಸ್ಥಳದಲ್ಲಿ ಕೂಡಿಟ್ಟು ವಿಂಗಡಿಸಿ ವಿಲೇವಾರಿ ಮಾಡಬೇಕು. ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡದೇ ರಸ್ತೆ ಬದಿ, ಖಾಲಿ ನಿವೇಶನ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಹಾಕಿರುವುದು ಕಂಡುಬಂದಲ್ಲಿ ಅಂತಹವರ ಮೇಲೆ ದಂಡ ವಿಧಿಸಲು ಮತ್ತು ಉದ್ದಿಮೆ ಪರವಾನಿಗೆ ರದ್ದುಪಡಿಸುವಂತೆ ಕ್ರಮ ಕೈಗೊಳ್ಳಲಾಗುವುದೆಂದು ಮಹಾಪೌರರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News