ಸರಕಾರಿ ಯೋಜನೆ ಕುರಿತು ಅರಿವು ಮೂಡಿಸುವುದು ಅಧಿಕಾರಿಗಳ ಕರ್ತವ್ಯ: ಡಿ.ವಿ.ಸದಾನಂದಗೌಡ

Update: 2018-12-29 16:14 GMT

ಬೆಂಗಳೂರು, ಡಿ.29: ಸರಕಾರ ರೂಪಿಸಿರುವ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದರು.

ಶನಿವಾರ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಜಿಲ್ಲಾ ಬ್ಯಾಂಕರ್‌ಗಳೊಂದಿಗೆ ಬೆಂಗಳೂರು ನಗರ ಜಿಲ್ಲಾ ಇಲಾಖಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯೋಜನೆಗಳನ್ನು ಸಾರ್ವಜನಿಕರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸುವ ಮನಸ್ಸನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ಸಾರ್ವಜನಿಕರಿಗೆ ಕಾನೂನಿನ ನೆಪಹೇಳಿ ತೊಂದರೆ ಕೊಡಬೇಡಿ. ಕಾನೂನನ್ನು ಉಲ್ಲಂಘನೆ ಮಾಡುವುದಕ್ಕಿಂತ ಕಾನೂನಿನೊಳಗೆ ಜನರಿಗೆ ಹೇಗೆ ಸಹಾಯ ಮಾಡಬೇಕು ಎನ್ನುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕೆಂದು ಅವರು ಕಿವಿಮಾತು ಹೇಳಿದರು. ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿದಾಗ ನಾವು ನಿಮಗೆ ಕೊಡುವ ಶಹಭಾಸ್‌ಗಿರಿಗಿಂತ ಜನಕೊಡುವ ಗೌರವ ಹಾಗೂ ನೆನಪಿಸಿಕೊಂಡು ಹಾರೈಸುವ ಆಶೀರ್ವಾದ ಮಹತ್ವದ್ದು, ಬ್ಯಾಂಕ್‌ಗಳು ಸಹ ರೈತರನ್ನು ಗೌರವದಿಂದ ಕಾಣಬೇಕು. ಅನ್ನ ಕೊಡುವ ರೈತರೊಂದಿಗೆ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಿ, ಒಂಟಿಯಾಗಿ ಬೆಳೆಯುವುದು ಸುಲಭ, ಗುಂಪಾಗಿ ಬೆಳೆಯುವುದು ಅತಿ ಮುಖ್ಯ ಎಂದು ಅವರು ಹೇಳಿದರು.

ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಿಇಒ ಎಂ.ಎಸ್. ಅರ್ಚನಾ, ಲೀಡ್ ಬ್ಯಾಂಕ್ ಅಧಿಕಾರಿ ಕೆ.ಎನ್.ಮಂಜುನಾಥ್, ನಬಾರ್ಡ್ ಸಂಸ್ಥೆಯ ಪ್ರಭಾ ಸೇರಿದಂತೆ ಅನೇಕ ಬ್ಯಾಂಕ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News